Advertisement

ತಾರಸಿ ಮೇಲೂ ಬೆಳೆಯಬಲ್ಲ ಕುಬ್ಜ ಗೇರು ತಳಿಗಳ ಪ್ರವೇಶ

10:50 PM Feb 18, 2021 | Team Udayavani |

ಪುತ್ತೂರು: ಮನೆಯ ಹಿತ್ತಿಲಿನಲ್ಲಿ, ತಾರಸಿಯಲ್ಲಿ ಬೆಳೆಯಬಲ್ಲ ಕುಬ್ಜ ಗೇರು ತಳಿ ಈಗ ಬಂದಿದೆ.
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಡಾ| ಎಂ.ಜಿ. ನಾಯಕ್‌ ನೇತೃತ್ವದ ತಂಡ “ನೇತ್ರಾ ವಾಮನ್‌’ ಹೆಸರಿನ ಕುಬ್ಜ ಗೇರು ತಳಿಯನ್ನು ಅಭಿವೃದ್ಧಿಗೊಳಿಸಿದೆ. ಇದು ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಿದ ಐದನೇ ತಳಿ.

Advertisement

ಗೇರು ಕೃಷಿಯಲ್ಲೂ ಬಂತು ಕುಬ್ಜ ತಳಿ
ಮೂಲತಃ ಬ್ರೆಜಿಲ್‌ನಿಂದ ಬಂದಂತಹ ಗೇರು ತಳಿಯ ಬೀಜವಿದು. ಇದ‌ನ್ನು ಕುಬ್ಜ ತಳಿಯಾಗಿ ಅಭಿವೃದ್ಧಿಪಡಿಸಲಾಗಿದೆ. ನಾಟಿ ಮಾಡಿದ ವರ್ಷದೊಳಗೆ ಫಸಲು ನೀಡಬಲ್ಲದು. ನಾಲ್ಕನೇ ವರ್ಷದಲ್ಲಿ ಎರಡು ಕೆ.ಜಿ. ಇಳುವರಿ ಸಿಗಬಹುದು. ಸಾಮಾನ್ಯವಾಗಿ ದೊಡ್ಡ ಗಾತ್ರದ ಗೇರು ತಳಿಯನ್ನು ಎಕರೆಗೆ 60ರಿಂದ 70ರಷ್ಟು ನಾಟಿ ಮಾಡಿದರೆ, ನೇತ್ರಾ ವಾಮನ್‌ ಎಕ್ರೆಗೆ 400 ತನಕ ನಾಟಿ ಮಾಡಲು ಸಾಧ್ಯವಿದೆ. ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ಬೆಳೆಯಲು ಸಾಧ್ಯ.

ನಿರ್ವಹಣೆಗೆ ಸೂಕ್ತ
ಸಾಮಾನ್ಯವಾಗಿ ಗೇರು ಎತ್ತರಕ್ಕೆ ಬೆಳೆ ಯುವ ಮರ. 35ರಿಂದ 40 ಅಡಿ ತನಕವೂ ಇದು ಬೆಳೆಯಬಲ್ಲುದು. ಗೇರು ಕೃಷಿಯನ್ನು ಆರ್ಥಿಕ ದೃಷ್ಟಿಯಿಂದ ಬೆಳೆಯುವವರು ಪ್ರತೀ ವರ್ಷ ನಿರ್ವಹಣೆ ದೃಷ್ಟಿಯಿಂದ ಮರ ಎತ್ತರಕ್ಕೆ ಹೋಗದ ಹಾಗೆ 12 ರಿಂದ 15 ಅಡಿಯಲ್ಲಿ ಎತ್ತರ ಕತ್ತರಿಸಿ ಕುಬ್ಜವಾಗಿ ಇರುವಂತೆ ನೋಡಿಕೊಳ್ಳುತ್ತಾರೆ. ಹೊಸದಾಗಿ ಅಭಿವೃದ್ಧಿ ಪಡಿಸಿದ ನೇತ್ರಾ ವಾಮನ್‌ ತಳಿಯಲ್ಲಿ ಈ ಸಮಸ್ಯೆ ಇಲ್ಲ. ಇದು ಹತ್ತು ಅಡಿಗಳಿಗಿಂತ ಹೆಚ್ಚು ಎತ್ತರ ಬೆಳೆಯದು. ಅತಿಸಾಂದ್ರ ಪದ್ಧತಿಗೆ ಒಗ್ಗಿಕೊಳ್ಳುವ ಗುಣ ಹೊಂದಿದೆ. ಹತ್ತು ವರ್ಷಗಳ ಅವಧಿಯಲ್ಲಿ 7ರಿಂದ 8 ಅಡಿ ಎತ್ತರ ಬೆಳೆಯುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಸುಲಭ ನಿರ್ವಹಣೆ
ನೇತ್ರ ವಾಮನ್‌ ತಳಿಯನ್ನು ಕಡಿಮೆ ಜಾಗದಲ್ಲಿ ಹೆಚ್ಚು ನಾಟಿ ಮಾಡಬಹುದು. 1 ಎಕ್ರೆಯಲ್ಲಿ 400 ಗಿಡಗಳನ್ನು ನೆಡಬಹುದು. ನಾಲ್ಕನೇ ವರ್ಷದಲ್ಲಿ ಗಿಡವೊಂದಲ್ಲಿ ಎರಡು ಕೆ.ಜಿ.ಯಷ್ಟು ಇಳುವರಿ ಸಿಗುತ್ತದೆ. ಅಂದರೆ ಒಂದು ಎಕ್ರೆಗೆ 800 ಕೆ.ಜಿ. ಸಿಕ್ಕಂತಾಗುತ್ತದೆ. ಔಷಧ ಸಿಂಪಡಣೆ, ನಿರ್ವಹಣೆ ದೃಷ್ಟಿಯಿಂದ ಅತ್ಯಂತ ಸುಲಭ

Advertisement

-ಡಾ|ಎಂ.ಜಿ.ನಾಯಕ್‌, ತಳಿ ಅಭಿವೃದ್ಧಿಪಡಿಸಿದ ವಿಜ್ಞಾನಿ ರಾ.ಗೇ. ಸಂ. ಕೇಂದ್ರ, ಪುತ್ತೂರು.

90 ದಿನಗಳಿಗಿಂತ ಅಧಿಕ ಕಾಲ ಹೂ ಬಿಡುತ್ತದೆ
ಹತ್ತನೇ ವರ್ಷದಲ್ಲಿ ಇದರ ಎತ್ತರ ಸುಮಾರು ಎಂಟು ಅಡಿ. ಅಗಲ ಹದಿನೆಂಟು ಅಡಿಯಷ್ಟು ವಿಸ್ತಾರಗೊಳ್ಳಬಹುದು. ಅತ್ಯಂತ ಕಡಿಮೆ ಸವರುವಿಕೆಯಿಂದ ಇದರ ಆಕಾರ ಮತ್ತು ಗಾತ್ರ ನಿರ್ವಹಣೆ ಕೂಡ ಸುಲಭ. ನೆಟ್ಟ ವರ್ಷದೊಳಗೆ ಹೂ ಬಿಟ್ಟು ಫಸಲು ನೀಡುವ ಈ ತಳಿ ವರ್ಷದಲ್ಲಿ ಮೂರು ತಿಂಗಳಿಗೂ ಅಧಿಕ ಕಾಲ ಹೂ ಬಿಡುತ್ತದೆ. ಇಳುವರಿ ಒಂದೂವರೆಯಿಂದ ಎರಡು ಕೆಜಿ. ಬೀಜದ ತೂಕ ಐದೂವರೆಯಿಂದ ಆರು ಗ್ರಾಂ ಇರುತ್ತದೆ. ಹಣ್ಣಿನ ತೂಕ ಸುಮಾರು ಐವತ್ತು ಗ್ರಾಂ. ಕಡಿಮೆ ನಾರಿನಂಶ. ಕಾಂಡ ಗಂಟು ಗಂಟಾಗಿ ಇರುತ್ತದೆ.

ಕಡಿಮೆ ಬಿಸಿಲಿದ್ದರೂ ಸಾಕು
ಮಾಮೂಲಿ ಗೇರಿನ ಮರಗಳಿಗೆ ಬೇಕಾದ ಬಿಸಿಲಿನ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಬಿಸಿಲಿದ್ದರೂ ಈ ತಳಿ ಫಸಲು ನೀಡುತ್ತದೆ. ಹಾಗಾಗಿ ಬಿಸಿಲು ಪ್ರವೇಶಿಸುವ ಅಂತರದ ತೆಂಗಿನ ಮರಗಳಿರುವ ತೋಟದಲ್ಲಿ ಉಪ ಬೆಳೆಯಾಗಿ ಬೆಳೆಯಬಹುದು. ತಾರಸಿಯ ಮೇಲೆ ಬೆಳೆ‌ಸಬಹುದು. ಮನೆ ಹಿತ್ತಲಿನಲ್ಲಿಯು ನಾಟಿ ಮಾಡಬಹುದು. ಇದು ಆದಾಯದ ದೃಷ್ಟಿಯಿಂದ ದೀರ್ಘ‌ ಕಾಲದ ತನಕ ಲಾಭ ನೀಡದಿದ್ದರೂ ನಿರ್ವಹಣೆಯ ದೃಷ್ಟಿಯಲ್ಲಿ ಅತ್ಯಂತ ಅನುಕೂಲಕಾರಿ.

“ನೇತ್ರಾ ವಾಮನ್‌’ ತಳಿಯ ವೈಶಿಷ್ಟ್ಯ
– ಇದು ಅತಿಸಾಂದ್ರಕ್ಕೆ ಸೂಕ್ತ
– ಸವರುವಿಕೆ ಇಲ್ಲದೆ ಅತಿ ಸಾಂದ್ರಕ್ಕೂ ಬಳಕೆ ಮಾಡಬಹುದು.
– ಗೇರು ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಸಬಹುದು
– ಪಾಲಿಥೀನ್‌ ಚೀಲಗಳಲ್ಲೂ ಬೆಳೆಸಬಹುದು.
– ನೆಟ್ಟ ಒಂದು ವರ್ಷದಲ್ಲೇ ಹೂ ಬಿಡುತ್ತದೆ.
– ಒಂದು ಮರಕ್ಕೆ ಒಂದೂವರೆಯಿಂದ ಎರಡು ಕೆಜಿಯಷ್ಟು ಇಳುವರಿ
– ಬೀಜದ ತೂಕ ಐದೂವರೆಯಿಂದ ಆರು ಗ್ರಾಂನಷ್ಟು.
– ಹಣ್ಣಿನ ತೂಕ ಸುಮಾರು ಐವತ್ತು ಗ್ರಾಂನಷ್ಟು.

Advertisement

Udayavani is now on Telegram. Click here to join our channel and stay updated with the latest news.

Next