Advertisement

ಗೇರಿಗೆ ಬೆಂಬಲ ಬೆಲೆ ಘೋಷಿಸಬೇಕು

11:43 PM Mar 12, 2023 | Team Udayavani |

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಗೇರು ಕೃಷಿಯು ಒಂದು. ಹವಾಮಾನ ಬದ­ಲಾವಣೆ, ಕಳ್ಳಸಂತೆಯಲ್ಲಿ ವಿದೇಶಿ ಗೇರು ಬೀಜ ಆಮದು, ಕಾಡು ಪ್ರಾಣಿಗಳ ಹಾವಳಿ, ರೋಗ­ಬಾಧೆ­ಗ­ಳಿಂದಾಗಿ ಇತ್ತೀಚೆಗಿನ ದಿನಗಳಲ್ಲಿ ಗೇರು ಬೆಳೆ ಸೊರಗು­ತ್ತಿದೆ. ವರ್ಷದಿಂದ ವರ್ಷಕ್ಕೆ ಇಳುವರಿಯು ಕುಸಿಯುತ್ತಿದೆ. ಗೇರು ಬೆಲೆಯೂ ಕಳೆದ ಬಾರಿ­ಗಿಂತ ಈ ಬಾರಿ ಕಡಿಮೆಯಿದೆ. ಈ ಸಮಯದಲ್ಲಿ ಸರಕಾರವೇ ಗೇರು ಬೆಳೆ­ಗಾರರ ಹಿತ ಕಾಯುವ ಕೆಲಸವನ್ನು ಮಾಡಬೇಕಾ­ಗಿದೆ.

Advertisement

ದೇಶದಲ್ಲಿರುವ ಗೇರು ಸಂಸ್ಕರಣಾ ಘಟಕಗಳಿಗೆ ವಾರ್ಷಿಕವಾಗಿ 16-17 ಲಕ್ಷ ಟನ್‌ ಕಚ್ಚಾ ಗೇರು ಬೀಜದ ಅಗತ್ಯವಿದೆ. ಆದರೆ ಸ್ಥಳೀಯವಾಗಿ 5-6 ಲಕ್ಷ ಟನ್‌ಗಿಂತಲೂ ಕಡಿಮೆ ಗೇರು ಬೀಜ ಸಿಗುತ್ತಿದೆ. ಅಂದರೆ 2-3 ತಿಂಗಳಿಗಾಗುವಷ್ಟು ಮಾತ್ರ ಸಿಗು­ತ್ತಿದೆ. ಸುಮಾರು 10 ಲಕ್ಷ ಟನ್‌ ಕೊರತೆಯಾಗುತ್ತಿದ್ದು, ಅದಕ್ಕಾಗಿ ಆಫ್ರಿಕಾ, ವಿಯೆಟ್ನಾಂ, ಬ್ರೆಜಿಲ್‌ನಂತಹ ದೇಶಗ­ಳಿಂದ ಕಚ್ಚಾ ಬೀಜ ಆಮದು ಅನಿವಾರ್ಯ­ವಾಗಿದೆ. ಅದಕ್ಕಾಗಿ ಮುಖ್ಯವಾಗಿ ಸರಕಾರವು ಗೇರು ಅಭಿವೃದ್ಧಿ ನಿಗಮದ ಮೂಲಕ ಗೇರು ಬೆಳೆ ಪ್ರದೇಶಗಳನ್ನು ಹೆಚ್ಚಿಸಲು ಯೋಜನೆ ಹಾಕಿಕೊಳ್ಳ­ಬೇಕು. ಆಗ ಮಾತ್ರ ಸ್ಥಳೀಯ ಗೇರು ಬೀಜ ಪ್ರಮಾಣ ಹೆಚ್ಚಾಗಬಹುದು.

ಗೇರು ಸಂಸ್ಕರಣಾ ಘಟಕಗಳಂತೆಯೇ ಗೇರು ಬೆಳೆಯುವ ಬೆಳೆಗಾರರನ್ನು ಉತ್ತೇಜಿ­ಸುವ ಕಾರ್ಯವನ್ನು ಸರಕಾರ ಮಾಡಬೇಕಿದೆ. ಉಳಿದ ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹಿ­ಸಿದಂತೆ ಗೇರು ಬೆಳೆಗೂ ಪ್ರೋತ್ಸಾಹ ಅಗತ್ಯವಿದೆ.

ಗೇರು ಬೆಳೆಗಾರರ ಹಕ್ಕೊತ್ತಾಯಗಳು ಹೀಗಿವೆ:
ವರ್ಷದಿಂದ ವರ್ಷಕ್ಕೆ ಗೇರು ಬೀಜಕ್ಕೆ ಬೆಲೆ ಕುಸಿಯುತ್ತಿರುವುದರಿಂದ ಸರಕಾರವು ಅಡಿಕೆ ಮಾದರಿಯಲ್ಲಿ ಕ್ಯಾಂಪ್ಕೋ ರೀತಿಯಲ್ಲಿ ಕನಿಷ್ಠ 1 ಕೆಜಿಗೆ 150 ರೂ. ಬೆಂಬಲ ಬೆಲೆಯಲ್ಲಿ ಖರೀದಿ ವ್ಯವಸ್ಥೆಯನ್ನು ಆರಂಭಿಸಬೇಕು.

ದೇಶಕ್ಕೆ ಭಾರೀ ಪ್ರಮಾಣದಲ್ಲಿ ವಿದೇಶದಿಂದ ಗೇರು ಬೀಜವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ ಅಡಿಕೆ ಮಾದರಿಯಲ್ಲಿ ವಿದೇಶಿ ಕಚ್ಚಾ ಗೇರು ಬೀಜಕ್ಕೆ ಆಮದು ಸುಂಕವನ್ನು ಹೆಚ್ಚಿಸಬೇಕು, ವಿದೇಶಿ ಕಳಪೆ ಗುಣಮಟ್ಟದ ಗೇರು ಬೀಜ ಆಮದನ್ನು ಸಹ ತಡೆಯಬೇಕು.

Advertisement

ಎಲ್ಲ ಕೃಷಿ, ತೋಟಗಾರಿಕಾ ಬೆಳೆಗಳಿಗೆ ಬೆಳೆ ವಿಮೆಯಿದ್ದರೂ, ಗೇರು ಬೆಳೆಗೆ ಮಾತ್ರ ಬೆಳೆ ವಿಮೆಯಿಲ್ಲ. ದೇಶದ 13 ರಾಜ್ಯಗಳ ಪೈಕಿ ಕರ್ನಾಟಕ, ಗೋವಾ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲಿ ಗೇರು ಬೆಳೆ ವಿಮೆ ವ್ಯಾಪ್ತಿಗೆ ಸೇರಿದೆ. ಗೇರು ಕೃಷಿಯೂ ರೋಗಬಾಧೆ, ಪ್ರತಿಕೂಲ ಹವಾಮಾನ, ಮುಳ್ಳುಹಂದಿ, ಸಿಂಗಲಿಕದಂತಹ ಕಾಡು ಪ್ರಾಣಿಗಳ ಹಾವಳಿಗೆ ತುತ್ತಾಗುತ್ತಿರುವುದರಿಂದ ಬೆಳೆ ವಿಮೆ ವ್ಯಾಪ್ತಿಗೆ ತರಬೇಕು.

ರಾಜ್ಯದ ಅಬಕಾರಿ ನೀತಿಯನ್ನು ರೈತ ಸ್ನೇಹಿಯಾಗಿಸಿ, ಗೇರು ಹಣ್ಣು, ಅನಾನಸು ಸೇರಿದಂತೆ ವಿವಿಧ ಸೀಸನಲ್‌ ಹಣ್ಣುಗಳನ್ನು ವೈನ್‌ ಆಗಿಸಲು ಅನುಮತಿ ನೀಡಿದರೆ, ಗೋವಾದಂತೆ ಗೇರು ಕೃಷಿಯ ಮೌಲ್ಯವರ್ಧನೆ­ಯಾಗ­ಲಿದೆ. ಈಗಾಗಲೇ ಗೇರು ಹಣ್ಣು ಆರೋಗ್ಯವರ್ಧಕವೂ ಆಗಿದೆ ಎನ್ನುವುದು ಸಂಶೋಧನೆ­ಯಲ್ಲೂ ಸಾಬೀತಾಗಿದೆ. ಆಗ ಗೇರು ಬೀಜ ಮಾತ್ರವಲ್ಲದೆ, ಹಣ್ಣಿಗೆ ಬೇಡಿಕೆ ಸೃಷ್ಟಿಯಾಗಲಿದೆ.

– ಚಂದ್ರಶೇಖರ ಉಡುಪ ಕೆಂಚನೂರು, ನಿರ್ದೇಶಕರು, ಅಖೀಲ ಭಾರತ ಗೇರು ಬೆಳೆಗಾರರ ಸಂಘ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next