Advertisement

ಮಾಲೀಕನ ಮನೆಯಲ್ಲಿ ನಗದು, ರಿವಾಲ್ವರ್‌ ಕದ್ದವನ ಸೆರೆ

11:59 AM Oct 17, 2017 | Team Udayavani |

ಬೆಂಗಳೂರು: ಕೆಲಸ ನೀಡಿದ್ದ ಮಾಲೀಕನ ಮನೆಯಲ್ಲಿ ನಗದು, ಚಿನ್ನಾಭರಣ, ರಿವಾಲ್ವರ್‌ ಕಳವು ಮಾಡಿದ್ದ ವ್ಯಕ್ತಿಯೊಬ್ಬ ಯಲಹಂಕ ನ್ಯೂಟೌನ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿಕ್ಕಬಳ್ಳಾಪುರ ಮೂಲದ ಪ್ರಸನ್ನ (63) ಬಂಧಿತ ಆರೋಪಿ. ಯಲಹಂಕದ ಹೌಸಿಂಗ್‌ಬೋರ್ಡ್‌ ಕಾಲೋನಿಯ ಸತೀಶ್‌ಚಂದ್ರ ಎಂಬ ಉದ್ಯಮಿ ಮನೆಯಲ್ಲಿ ಶನಿವಾರ ಪರವಾನಿಗೆ ಹೊಂದಿದ 3.2 ರಿವಾಲ್ವರ್‌, 2 ಲಕ್ಷ ರೂ. ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ, ತಲೆಮರೆಸಿಕೊಂಡಿದ್ದ.

Advertisement

ಈ ಕುರಿತು ಉದ್ಯಮಿ ಸತೀಶ್‌ಚಂದ್ರ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಸೋಮವಾರ ಮಲ್ಲೇಶ್ವರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ವೇಳೆ ಆರೋಪಿ ಬಳಿಯಿದ್ದ ರಿವಾಲ್ವರ್‌ ಸೇರಿದಂತೆ ಕಳವುಮಾಡಿದ್ದ ಇನ್ನಿತರೆ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್‌ ತಿಳಿಸಿದರು.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ತಾನು ಹಲವು ವರ್ಷಗಳಿಂದ ಬ್ರೈನ್‌ ಟ್ಯೂಮರ್‌ ಹಾಗೂ ಫೈಲ್ಸ್‌ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆ ಭರಿಸುವ ಶಕ್ತಿಯಿರಲಿಲ್ಲ. ಹೀಗಾಗಿ ಹಣಕ್ಕಾಗಿ ಕಳವು ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಕಳವು ಮಾಡಿದ ರಿವಾಲ್ವರ್‌ ಮಾರಾಟ ಮಾಡಿ ಹಣಪಡೆದುಕೊಳ್ಳಲು ಯತ್ನಿಸಿರುವ ಆರೋಪಿ ಹಲವರನ್ನು ಸಂಪರ್ಕಿಸಿದ್ದು, ಈ ಸಂಬಂಧ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮನೆಯಲ್ಲೇ ವಾಸ್ತವ್ಯ: ಖಾಸಗಿ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಉದ್ಯಮಿ ಸತೀಶ್‌ಚಂದ್ರ ಅವರ ಮನೆಯಲ್ಲಿ ಕಳೇದ ಎರಡು ವರ್ಷಗಳಿಂದ ಪ್ರಸನ್ನ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಲಾಗಿದೆ. ಮಾಲೀಕರ ನಂಬಿಕೆ ಗಳಿಸಿಕೊಂಡಿದ್ದ ಪ್ರಸನ್ನ, ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಇಡುವ ಜಾಗಗಳನ್ನು ನೋಡಿಕೊಂಡಿದ್ದ.

ಶನಿವಾರ ಉದ್ಯಮಿ ಸತೀಶ್‌ಚಂದ್ರ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬನೇ ಇದ್ದ ಪ್ರಸನ್ನ, ಅಲ್ಮೇರಾ ಓಡೆದು ಚಿನ್ನಾಭರಣ, ನಗದು, ರಿವಾಲ್ವರ್‌ ಕದ್ದು ಪರಾರಿಯಾಗಿದ್ದ. ಭಾನುವಾರ ಮನೆಗೆ ವಾಪಾಸ್‌ ಬಂದ ಕುಟುಂಕ್ಕೆ ಕಳವಾಗಿರುವುದು ತಿಳಿದಿದ್ದು, ಕೂಡಲೇ ಸತೀಶ್‌ಚಂದ್ರ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next