ಬೆಂಗಳೂರು: ಸ್ಯಾಂಟ್ರೋ ರವಿ ಪ್ರಕರಣ ಹಾಗೂ ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಬಳಿ 10.5 ಲಕ್ಷ ರೂ. ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಟ್ವೀಟ್ ವಾರ್ ಮುಂದುವರಿಸಿದೆ.
ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿನ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ ಎಂದು ಪ್ರಶ್ನಿಸಿದೆ.
ಸರಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ ಆಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು, ಬೊಮ್ಮಾಯಿ ಕೃಪೆಯೇ, ಜ್ಞಾನೇಂದ್ರ ಕೃಪೆಯೇ ಎಂದು ಕುಟುಕಿದೆ.
ವಿಧಾನಸೌಧಕ್ಕೆ 10 ಲಕ್ಷ ತಂದಿದ್ದು ಲೋಕೋಪಯೋಗಿ ಇಲಾಖೆ ಜೂನಿಯರ್ ಎಂಜಿನಿಯರ್. ಈ ಸಮಯದಲ್ಲಿ ವಿಧಾನಸೌಧದಲ್ಲಿ ಇದ್ದದ್ದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್. ಬಸವರಾಜ ಬೊಮ್ಮಾಯಿ ಅವರೇ ಶೇ. 40 ಪರ್ಸೆಂಟ್ ಕಮೀಷನ್ ಹಣದ ಮೂಲದ ರಹಸ್ಯ ಕಾಪಾಡುತ್ತಿರುವುದೇಕೆ ಸರಕಾರ? ಇದು ಪೇಸಿಎಂ ಖಾತೆಗೆ ಜಮೆಯಾಗಲು ಬಂದ ಹಣವೇ ಅಥವಾ ಸಚಿವರ ಕಮಿಷನ್ ಪಾಲೇ ಎಂದು ಪ್ರಶ್ನಿಸಿದೆ.
Related Articles
ಜೆಡಿಎಸ್ ಕಿಡಿ
ಬೆಂಗಳೂರು: ವಿಧಾನಸೌಧದಲ್ಲೇ ಲೋಕೋಪಯೋಗಿ ಇಲಾಖೆಯ ಜೂನಿಯರ್ ಎಂಜಿನಿಯರ್ ಜಗದೀಶ್ ಅವರ ಬ್ಯಾಗ್‌ನಲ್ಲಿ 10 ಲಕ್ಷ ರೂ. ಪತ್ತೆಯಾಗಿ ಜಪ್ತಿ ಮಾಡಿರುವುದು ನೋಡಿದರೆ ರಾಜ್ಯ ಕಂಡೂ ಕೇಳರಿಯದ ಭ್ರಷ್ಟಾಚಾರದಿಂದ ನರಳುತ್ತಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ ಎಂದು ಜೆಡಿಎಸ್ ಪ್ರಶ್ನಿಸಿದೆ. 40 ಪರ್ಸೆಂಟ್ ಕಮಿಷನ್ ಸರಕಾರದ ಸಚಿವರು ಬಾಯಿ ಬಿಟ್ಟರೆ ಸಾಕ್ಷಿ ಕೇಳುತ್ತಾರಲ್ಲ.
ಬೊಮ್ಮಾಯಿ ಅವರೇ ತಾಕತ್ತಿದ್ದರೆ ಈ ಪ್ರಕರಣವನ್ಮು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸುತ್ತೀರಾ ಎಂದು ಸವಾಲು ಹಾಕಿದೆ. ನಿರುದ್ಯೋಗ ಸಮಸ್ಯೆ ಪರಿಹರಿಸಲು ಸ್ಥಗಿತಗೊಳಿಸಿದ್ದ ಲಾಟರಿ ಮಾರಾಟವನ್ನು ಮತ್ತೆ ಆರಂಭಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಇಂತಹ ಮನೆಮುರುಕ ಸಲಹೆ ನೀಡಿದ ಬೃಹಸ್ಪತಿ ಯಾರು ಎಂದು ಪ್ರಶ್ನಿಸಿದೆ.
ವಿಧಾನಸೌಧಕ್ಕೆ 10 ಲಕ್ಷ ರೂ. ತಂದಿದ್ದ ಜಗದೀಶ್ ಫೋನಿನಲ್ಲಿ ಕೊನೆಯದಾಗಿ 3 ಬಾರಿ ಹೊರ ಹೋದ, ಹಾಗೂ 2 ಬಾರಿ ಒಳಬಂದ ಕರೆ ಸಚಿವರೊಬ್ಬರ ಪಿಎ ಅವರದ್ದು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದು ಯಾವ ಸಚಿವರ ಪಿಎ? ಜಗದೀಶ್ ಅವರನ್ನು ಬಿಟ್ಟು ಕಳುಹಿಸುವಂತೆ ಪೊಲೀಸರಿಗೆ ಕರೆ ಮಾಡಿದ ಸಚಿವ ಯಾರು? ಬಸವರಾಜ ಬೊಮ್ಮಾಯಿ ಅವರೇ, ಈ ರಹಸ್ಯವನ್ನು ನೀವು ಹೇಳುವಿರಾ?
– ಕಾಂಗ್ರೆಸ್ ಟ್ವೀಟ್
ತನಿಖಾ ವರದಿ ನಂತರ ಕ್ರಮ: ಸಿ.ಸಿ. ಪಾಟೀಲ್
ಬೆಂಗಳೂರು: ವಿಧಾನಸೌಧದಲ್ಲಿ ಹತ್ತು ಲಕ್ಷ ರೂ. ನಗದು ಪತ್ತೆ ಕುರಿತು ತನಿಖಾ ವರದಿ ಬಂದ ಅನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ತಂದಿದ್ದ ಹಣಕ್ಕೆ ಸೂಕ್ತ ದಾಖಲಾತಿ ಕೊಡದಿದ್ದರೆ ಕ್ರಮ ಆಗಲಿದೆ. ನಾನು ಇದರ ಹೊಣೆ ಹೊತ್ತುಕೊಳ್ಳುವುದಿಲ್ಲ. ನನಗೆ ಹಣ ಕೊಡಲು ಬಂದಿದ್ದರು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೇ ಹಣ ಕೊಡೋದಿಕ್ಕೆ ಆತ ಬಂದಿರಬಹುದು ಅಂತ ನಾನೂ ಹೇಳಬಹುದಲ್ವಾ ಎಂದರು.