Advertisement

ನಗದು ಸರ್ಟಿಫಿಕೇಟುಗಳು

07:41 PM Dec 01, 2019 | Sriram |

ಬಡ್ಡಿಯ ಅವಶ್ಯಕತೆಯೇ ಇರದ ಠೇವಣಿದಾರರಿಗೆ “ನಗದು ಸರ್ಟಿಫಿಕೇಟುಗಳು’ ಬಹು ದೊಡ್ಡ ವರದಾನವಾಗಿದೆ. ಇದು ಕೂಡಾ ಒಂದು ಅವಧಿ, ನಿಗದಿತ ಮುದ್ದತು ಅಥವಾ ನಿಖರ ಠೇವಣಿ (ಟರ್ಮ್ ಡೆಪಾಸಿಟ್‌)ಯಾಗಿರುತ್ತದೆ. ಈ ಠೇವಣಿಯಲ್ಲಿ ರೂ.500ರ ಕನಿಷ್ಠ ಮೊತ್ತದಿಂದ ಯಾವುದೇ ಗರಿಷ್ಠ ಮೊತ್ತದ ಮಿತಿ ಇರದೆ, ಎಷ್ಟು ಬೇಕಾದರೂ ಹಣ ತೊಡಗಿಸಬಹುದು. ಠೇವಣಿಯ ಕನಿಷ್ಠ ಅವಧಿ ಒಂದು ವರ್ಷ ಹಾಗೂ ಗರಿಷ್ಠ ಅವಧಿ ಹತ್ತು ವರ್ಷಗಳು. (ಬಡ್ಡಿ ದರ ಠೇವಣಿಯ ಅವಧಿಗೆ ಅನುಸಾರವಾಗಿರುತ್ತದೆ.) ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ, ವಯಸ್ಕರ ಹೆಸರಿನಲ್ಲಿ (ಜಂಟಿಯಾಗಿ ಕೂಡಾ), ಪಾರ್ಟ್‌ನರ್‌ಶಿಪ್‌ ಸಂಸ್ಥೆಯ ಹೆಸರಿನಲ್ಲಿ ಅಥವಾ ಪಾರ್ಟ್‌ನರ್ ಹೆಸರಿನಲ್ಲಿ, ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ (HUF) ಹಾಗೂ ಜಾಯಿಂಟ್‌ ಸ್ಟಾಕ್‌ ಕಂಪನಿಯ ಹೆಸರಿನಲ್ಲಿ ಈ ಠೇವಣಿಯಲ್ಲಿ ಹಣ ತೊಡಗಿಸಬಹುದು. ಒಬ್ಬರು ಎಷ್ಟೂ ಖಾತೆಗಳನ್ನಾದರೂ ತೆರೆಯಬಹುದು.

Advertisement

ನಗದು ಸರ್ಟಿಫಿಕೇಟು ಠೇವಣಿಗೆ, ಅಂದರೆ ಇಲ್ಲಿ ತೊಡಗಿಸಿದ ಮೊತ್ತಕ್ಕೆ, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಲೆಕ್ಕ ಹಾಕಿ, ಬಂದಿರುವ ಬಡ್ಡಿಯನ್ನು ಅಸಲಿಗೆ ಸೇರಿಸುತ್ತಾ ಬಂದು, ಬಡ್ಡಿಯ ಮೇಲೆ ಬಡ್ಡಿ ಕೊಡುತ್ತಾ ಬರುತ್ತಾರೆ. ಒಟ್ಟಿನಲ್ಲಿ, ಇಲ್ಲಿ ತೊಡಗಿಸಿದ ಹಣ ಚಕ್ರಬಡ್ಡಿಯಲ್ಲಿ ದಿನೇ ದಿನೇ ಬ್ಯಾಂಕಿನಲ್ಲಿ ವೃದ್ಧಿಯಾಗುತ್ತಿರುತ್ತದೆ. ಈ ಕಾರಣದಿಂದ, ಈ ಠೇವಣಿಯನ್ನು ಮರು ಹಣ ಹೂಡಿಕೆಯ ಯೋಜನೆ (Reinvestment Scheme) ಎಂಬುದಾಗಿಯೂ ಕರೆಯುತ್ತಾರೆ. ಒಂದೊಂದು ಬ್ಯಾಂಕಿನಲ್ಲಿ ಈ ಠೇವಣಿಯನ್ನು ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಉದಾಹರಣೆಗೆ, “ವಿಕಾಸ್‌ ಕ್ಯಾಶ್‌ ಸರ್ಟಿಫಿಕೇಟ್‌’ ಎಂದು ಕರ್ನಾಟಕ ಬ್ಯಾಂಕಿನಲ್ಲಿ ಕರೆಯುತ್ತಾರೆ. ಒಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳ ತತ್ವ ಅಥವಾ ಗುರಿ ಒಂದೇ ಇರುತ್ತದೆ. ಇಲ್ಲಿ ಒಮ್ಮೆ ಠೇವಣಿ ಇರಿಸಿದರೆ, ವಾಯಿದೆ ಮುಗಿಯುವ ತನಕ ಠೇವಣಿದಾರರು ಬ್ಯಾಂಕಿಗೆ ಹೋಗುವ ಅವಶ್ಯಕತೆಯೇ ಇರಲಾರದು. ಠೇವಣಿ ರಶೀದಿಯ ಮೇಲೆ, ಅವಧಿ ಮುಗಿದು ಹಣ ಪಡೆಯುವ ತಾರೀಖು ಹಾಗೂ ಅವಧಿ ಮುಗಿಯುವಾಗ ಅಸಲು ಬಡ್ಡಿ ಸೇರಿಸಿ ದೊರೆಯುವ ಮೊತ್ತ ಎಲ್ಲವನ್ನೂ ನಮೂದಿಸುವುದರಿಂದ, ಠೇವಣಿದಾರರು ಅವಧಿ ಮುಗಿಸಿ ಹಣ ಪಡೆಯುವಾಗ ಯಾವ ಗೊಂದಲವೂ ಆಗಲಾರದು.

ಹಣ ವೃದ್ಧಿ ಪಡಿಸುವುದೇ ಉಳಿತಾಯದ ಮುಖ್ಯ ಉದ್ದೇಶ. “ಫಿಕ್ಸೆಡ್‌ ಡೆಪಾಸಿಟ್‌’ ಯೋಜನೆಯಲ್ಲಿ ಕಾಲಕಾಲಕ್ಕೆ ಬಡ್ಡಿ ವಿಧಿಸುವುದರಿಂದ, ಠೇವಣಿದಾರರು ಬಡ್ಡಿ ಪಡೆಯುತ್ತಿರುತ್ತಾರೆ. ಹೀಗೆ ಪಡೆದ ಬಡ್ಡಿಯನ್ನು ಯಾವುದಾದರೂ ಒಂದು ಖರ್ಚಿಗೆ ಉಪಯೋಗಿಸುವುದು ಸಹಜ. ಹೀಗೆ ಕಾಲಕಾಲಕ್ಕೆ ಫಿಕ್ಸೆಡ್‌ ಡೆಪಾಸಿಟ್‌ನ ಮೇಲೆ ಬರುವ ಬಡ್ಡಿಯನ್ನು ಠೇವಣಿದಾರರು ಪಡೆಯುತ್ತಾ ಬರುವುದರಿಂದ ಅಸಲು ಹಾಗೆ ಉಳಿಯುತ್ತದೆ ವಿನಃ ಎಂದಿಗೂ ವೃದ್ಧಿಯಾಗಲಾರದು. ಆದರೆ, ನಗದು ಸರ್ಟಿಫಿಕೇಟುಗಳಲ್ಲಿ ತೊಡಗಿಸಿದಾಗ ಹಣ ವೃದ್ಧಿಯಾಗುತ್ತಿರುತ್ತದೆ. ಅವಧಿಗೆ ಮುನ್ನ ಹಣ ಬೇಕಾದಲ್ಲಿ, ಅರ್ಜಿ ಸಲ್ಲಿಸಿ ಠೇವಣಿ ರಶೀದಿಯನ್ನು ಕೊಟ್ಟು, ಬ್ಯಾಂಕಿನಿಂದ ಹಣ ವಾಪಸು ಪಡೆಯುವ ಹಕ್ಕು (ಪ್ರಿ-ಮೆಚುರಿಟಿ) ಠೇವಣಿದಾರರಿಗೆ ಸದಾ ಇರುತ್ತದೆ. ಒಂದು ವೇಳೆ ಸಾಲ ಬೇಕಾದಲ್ಲಿ ಕೂಡಾ ಠೇವಣಿ ಇರಿಸಿದ ತಾರೀಖೀನಿಂದ ಸಾಲ ಪಡೆಯುವ ತಾರೀಖೀಗೆ ಅನುಗುಣವಾಗಿ ಠೇವಣಿಯಲ್ಲಿ ಬರಬಹುದಾದ ಬಡ್ಡಿ (Accrued Interes) ಲೆಕ್ಕ ಹಾಕಿ ಅಸಲು ಹಾಗೂ ಬಡ್ಡಿಯ ಮೇಲೆ 90%ರಷ್ಟು ಸಾಲ ಪಡೆಯಬಹುದು. ಈ ಸಾಲಕ್ಕೆ ಕಂತುಗಳಿರುವುದಿಲ್ಲ. ಎಷ್ಟಾದರಷ್ಟು ಹಣ ತುಂಬುತ್ತಾ ಬಂದು ಸಾಲ ತೀರಿಸಬಹುದು.

“ಉಳಿತಾಯ ಹಾಗೂ ಹಣ ವೃದ್ಧಿ ಪಡಿಸುವ ಬ್ಯಾಂಕ್‌ ಠೇವಣಿಗಳಲ್ಲಿ ನಗದು ಸರ್ಟಿಫಿಕೇಟ್‌ಗಳಿಗೆ ಸರಿಸಮವಾದ ಠೇವಣಿ ಬೇರೊಂದಿಲ್ಲ.’

Advertisement

Udayavani is now on Telegram. Click here to join our channel and stay updated with the latest news.

Next