Advertisement

ಕ್ಯಾಶ್‌ ಬ್ಯಾಕ್‌ ಆಫರ್‌’!

03:46 PM Jul 16, 2018 | |

‘ಇತ್ತೀಚೆಗೆ ನೀವು ಮಾಲ್‌ನಲ್ಲಿ ಖರೀದಿ ಮಾಡಿದ್ದಕ್ಕೆ ಹೆಚ್ಚುವರಿಯಾಗಿ 2,000 ರೂ. ಕ್ಯಾಶ್‌ಬ್ಯಾಕ್‌ ವಿಜೇತರಾಗಿದ್ದೀರಿ. ಹೀಗಾಗಿ ದಯವಿಟ್ಟು ತಾವು ಕ್ರೆಡಿಟ್‌/ ಡೆಬಿಟ್‌ ಕಾರ್ಡ್‌ ನಂಬರ್‌ ನೀಡಬೇಕು. ಆಗ ನಾವು ನೇರವಾಗಿ ನಿಮ್ಮ ಖಾತೆಗೆ ಕ್ಯಾಶ್‌ಬ್ಯಾಕ್‌ ಹಣವನ್ನು ಜಮಾಗೊಳಿಸುತ್ತೇವೆ’… ಹೀಗೊಂದು ಕರೆ ಮಂಗಳೂರಿನ ಉದ್ಯಮಿಯೊಬ್ಬರಿಗೆ ಮೊನ್ನೆ ಬಂದಿತ್ತು. ಈ ಬಗ್ಗೆ ಮಾಲ್‌ನ ಪ್ರಮುಖರಿಗೆ ಕರೆ ಮಾಡಿ ‘ಹೀಗೊಂದು ಕರೆ ನನಗೆ ಬಂದಿತ್ತು. ನಿಜನಾ?’ ಅಂತ ವಿಚಾರಿಸಿದರು. ಮಾಲ್‌ ನವರು ‘ನಮಗೇನು ಗೊತ್ತಿಲ್ಲ’ ಅಂದರು. ಆಗ ವಿಷಯ ಸ್ಪಷ್ಟ ಮಾಡಿಕೊಂಡ ಉದ್ಯಮಿ ಹತ್ತಿರದ ಪೊಲೀಸ್‌ ಠಾಣೆಗೆ ಈ ಬಗ್ಗೆ ದೂರು ನೀಡಿದರು. ಅಲ್ಲಿಗೆ ಒಂದು ಕ್ಯಾಶ್‌ಬ್ಯಾಕ್‌ ಆಫರ್‌ ಮುಕ್ತಾಯ ಕಂಡಿತು!

Advertisement

ಇದು ಕ್ಯಾಶ್‌ಬ್ಯಾಕ್‌ನ ಒಂದು ವಿಧವಾದರೆ, ಇನ್ನೊಂದು ಕ್ಯಾಶ್‌ಬ್ಯಾಕ್‌ ಲೆಕ್ಕಾಚಾರವಿದೆ. ಮಾಲ್‌ಗೆ ಹೋಗಿ ಶಾಪಿಂಗ್‌ ಮಾಡಿದಾಗ ‘ಕ್ಯಾಶ್‌ಬ್ಯಾಕ್‌’ ಎಂಬ ಆಸೆಯೊಂದನ್ನು ಗ್ರಾಹಕರಲ್ಲಿ ಮೂಡಿಸಿ ಬಿಡುತ್ತಾರೆ. ಮನೆಗೆ ಬಂದವರೇ ಕ್ಯಾಶ್‌ಬ್ಯಾಕ್‌ ಬಗ್ಗೆ ತಿಳಿದು ಇನ್ನೊಮ್ಮೆ ಮಾಲ್‌ಗೆ ಹೋಗಲು ಹಾತೊರೆಯುತ್ತಾರೆ. ಅದರಲ್ಲೂ ಕೆಲವು ಕ್ಯಾಶ್‌ಬ್ಯಾಕ್‌ ಆಫರ್‌ಗಳು 15/30 ದಿನಗಳ ಮಾತ್ರ ಗಡುವಿರುತ್ತದೆ. ಅದರೊಳಗೆ ಸಂಬಂಧಿಸಿದ ಮಾಲ್‌ ಗೆ ಬಂದು ಕ್ಯಾಶ್‌ಬ್ಯಾಕ್‌ ಲಾಭ ಪಡೆಯಬಹುದು. ಇಲ್ಲಿ ಮನೆ ಲೆಕ್ಕಾಚಾರ ಪಲ್ಟಿ ಹೊಡೆಯುತ್ತದೆ!

ಲೆಕ್ಕಾಚಾರ ಇರಲಿ
ಹೇಗೆಂದರೆ, ಆರ್ಥಿಕ ಶಿಸ್ತು ಬೆಳೆಸಿಕೊಂಡ ಒಂದು ಕುಟುಂಬ ತಿಂಗಳಿಗೆ ಇಷ್ಟು ದಿನ ಮಾಲ್‌/ಅಂಗಡಿಗೆ ಹೋಗಿ ಇಂತಹ ಸಾಮಾನುಗಳನ್ನು ಇಂತಿಷ್ಟು ಹಣದಲ್ಲಿ ಖರೀದಿ ಮಾಡುವ ಬಗ್ಗೆ ‘ಮನೆ ಬಜೆಟ್‌’ ರೆಡಿ ಮಾಡುತ್ತಿರುತ್ತಾರೆ. ಅದೇ ರೀತಿ ಎಲ್ಲೂ ಕೂಡ ವ್ಯತ್ಯಾಸವಾಗದಂತೆ ಮನೆ ಬಜೆಟ್‌ನೊಳಗೆಯೇ ಸಾಮಾನುಗಳನ್ನು ಮನೆಗೆ ತರುತ್ತಾರೆ. ಆದರೆ, ಇದರ ಮಧ್ಯದಲ್ಲಿ ತಾವು ಖರೀದಿಸಿದ ವಸ್ತುವಿಗೆ ‘ಕ್ಯಾಶ್‌ಬ್ಯಾಕ್‌’ ಎಂಬ ಕಾರ್ಡ್‌ ದೊರೆತರೆ ಆ ತಿಂಗಳ ಬಜೆಟ್‌ ಎಲ್ಲವೂ ಉಲ್ಟಾಪಲ್ಟಿಯಾಗುತ್ತದೆ.

ಯಾಕೆಂದರೆ, ಸಿಕ್ಕಿದ ಕ್ಯಾಶ್‌ಬ್ಯಾಕ್‌ ಅನ್ನು ಕೈಯಲ್ಲಿಟ್ಟು ವೇಸ್ಟ್‌ ಮಾಡಲು ಆ ಕುಟುಂಬದ ಯಾವನೇ ಸದಸ್ಯನಿಗೆ ಇಷ್ಟವಿರುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕ್ಯಾಶ್‌ಬ್ಯಾಕ್‌ ಲಾಭ ಪಡೆಯಲು ತನ್ನ ನಿಗದಿತ ಬಜೆಟ್‌ ಅನ್ನು ಮೀರಿ ಮತ್ತೂಮ್ಮೆ ಮಾಲ್‌/ಅಂಗಡಿಗೆ ಹೋಗುತ್ತಾನೆ. ಆದರೆ, ಕ್ಯಾಶ್‌ಬ್ಯಾಕ್‌ನಷ್ಟೇ ಮೊತ್ತದ ವಸ್ತು ಖರೀದಿ ಮಾಡಲು ಮನೆ ಮಂದಿಗೆ ಇಷ್ಟವಿರುವುದಿಲ್ಲ ಅಥವಾ ಆತನ ಸ್ಟೇಟಸ್‌ಗೂ ಸರಿ ಹೊಂದುವುದಿಲ್ಲ. ಹೀಗಾಗಿ ಹೆಚ್ಚು ಮೊತ್ತದ ಖರೀದಿಗೆ ಮುಂದಾಗುತ್ತಾನೆ. ಅನಿವಾರ್ಯವಾಗಿ ಆತನ ತಿಂಗಳ ಬಜೆಟ್‌ನ ಲೆಕ್ಕಾ ಉಲ್ಟಾ ಹೊಡೆಯುತ್ತದೆ.!

ಕ್ಯಾಶ್‌ಬ್ಯಾಕ್‌ ಉಡುಗೊರೆಯಲ್ಲ
ಶ್‌ಬ್ಯಾಕ್‌ ಎನ್ನುವುದು ಮಾಲ್‌/ಸಂಸ್ಥೆ/ ಅಂಗಡಿಯವರು ಅವರ ಕೈಯಿಂದ ಗ್ರಾಹಕರಿಗೆ ನೀಡುವ ಉಡುಗೊರೆಯಾಗಿರುವುದಿಲ್ಲ. ಯಾಕೆಂದರೆ, ಒಂದು ಮಾಲ್‌ನಲ್ಲಿ 5000 ರೂ. ಮೊತ್ತದ ಶಾಪಿಂಗ್‌ ಮಾಡಿದರೆ ಮಾಲ್‌ನವರು 500 ರೂ.ಗಳ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುತ್ತದೆ ಎಂದಿಟ್ಟುಕೊಳ್ಳಿ. ಈ 500 ರೂ. ಗ್ರಾಹಕನ 5000 ರೂ. ವಸ್ತುಗಳ ಮಧ್ಯೆಯೇ ಮಾಲ್‌ನವರು ಗೊತ್ತೇ ಆಗದಂತೆ ಪಡೆದಿರುತ್ತಾರೆ.! ಮುಂದೆ ಕ್ಯಾಶ್‌ಬ್ಯಾಕ್‌ ಆಫರ್‌ನೊಂದಿಗೆ 1000ರೂ.ಗಳ ಖರೀದಿ ಮಾಡಿದರೆ 500 ರೂ. ಗ್ರಾಹಕ ಪಾವತಿಸಬೇಕಿಲ್ಲ. ಅಲ್ಲಿಗೆ ಕ್ಯಾಶ್‌ಬ್ಯಾಕ್‌ ಚುಕ್ತಾ ಆಯಿತು. ಆದರೆ, ಗ್ರಾಹಕನಿಗೆ ಮಾತ್ರ ಇದರ ಒಳಮರ್ಮ ಗೊತ್ತೇ ಆಗುವುದಿಲ್ಲ. 

Advertisement

ಲಾಭವೂ ಇದೆ
ಗ್ರಾಹಕ ತನ್ನ ಆರ್ಥಿಕ ಶಿಸ್ತಿನೊಂದಿಗೆ ಮಾಲ್‌ನಲ್ಲಿ ಕ್ಯಾಶ್‌ ಬ್ಯಾಕ್‌ನೊಂದಿಗೆ ಪರಿಣತಿ ಪಡೆದರೆ ತುಂಬಾನೆ ಲಾಭವಿದೆ. ಗ್ರಾಹಕರನ್ನು ಸಂತೈಸಲು ಹಾಗೂ ಪ್ರೀತಿಗೆ ಪಾತ್ರವಾಗಲು ಕ್ಯಾಶ್‌ಬ್ಯಾಕ್‌ ಆಫರ್‌ ಗಳು ಇದ್ದರೆ ಅವುಗಳ ನಿಯಮಿತ ಬಳಕೆ ಹಾಗೂ ಮುಂದಾಲೋಚನೆ ಬಗ್ಗೆ ವಿಶೇಷ ಒತ್ತು ನೀಡಿದರೆ ಲಾಭವೇ ಇದೆ. ಗ್ರಾಹಕನಿಗೆ ಇನ್ನೊಂದು ವಸ್ತು ಕೊಂಡುಕೊಳ್ಳಲು ವೇದಿಕೆ ಸಿಕ್ಕಂತಾಗುತ್ತದೆ. ಹೀಗೆ ಕೆಲವು ರೀತಿಯ ಲಾಭಗಳು ಇದ್ದರೆ, ಇನ್ನು ಕೆಲವು ನಷ್ಟವೂ ಇದೆ. ಆದರೆ ಇದರ ಬಗ್ಗೆ ಕಣ್ಣಿಟ್ಟು-ಪರಿಶೀಲಿಸಿ ಹೆಜ್ಜೆ ಇಟ್ಟರೆ ಉತ್ತಮ.

ಬಾಟಲ್‌ ಹಾಕಿ ವಾಲೆಟ್‌ ಪಡೆಯಿರಿ!
ಇದೆಲ್ಲ ನಮ್ಮ ವ್ಯವಹಾರದ ಭಾಗವಾದರೆ, ಇದಕ್ಕೆ ಪೂರಕವಾಗುವಂತೆ ಇನ್ನೊಂದು ರೀತಿಯ ಕ್ಯಾಶ್‌ಬ್ಯಾಕ್‌ ಆಫರನ್ನು ರೈಲ್ವೇ ಇಲಾಖೆ ಪ್ರಕಟಿಸಿದೆ. ರೈಲು ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ ತ್ಯಾಜ್ಯಕ್ಕೆ ಕಡಿವಾಣ ಹಾಕಲು ನೈಋತ್ಯ ರೈಲ್ವೇಯು ಪ್ರಮುಖ ರೈಲು ನಿಲ್ದಾಣಗಳಲ್ಲಿ ‘ಬಾಟಲ್‌ ಕ್ರಷಿಂಗ್‌ ಮೆಷಿನ್‌’ ಅಳವಡಿಕೆಗೆ ಮುಂದಾಗಿದೆ. ಪೇಟಿಎಂ ವಾಲೆಟ್‌ ಹೊಂದಿರುವವರು ಈ ಯಂತ್ರಕ್ಕೆ ಬಾಟಲ್‌ ಹಾಕಿದರೆ 5 ರೂ. ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಬೆಂಗಳೂರು ರೈಲು ನಿಲ್ದಾಣದಲ್ಲಿ ಈ ಯೋಜನೆ ಈಗಾಗಲೇ ಜಾರಿ ಕೂಡ ಆಗಿದೆ. ಪೇಟಿಎಂ ಹೊಂದಿರುವವರು ಒಂದು ಬಾಟಲ್‌ ಹಾಕಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ಯಂತ್ರದಲ್ಲಿ ನೂದಿಸಿದರೆ 5 ರೂ. ವಾಲೆಟ್‌ಗೆ ಬರುತ್ತದೆಯಂತೆ! 

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next