ಕಲಬುರಗಿ: ಜಿಲ್ಲೆಯ ಕಾಳಗಿ ತಾಲೂಕಿನ ತಾಂಡಾದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಗಾಂಜಾ ದಾಸ್ತಾನು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಸಿಪಿಐ ಭೋಜರಾಜ ರಾಠೋಡ್ ಸೇರಿ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಸಿಪಿಐ ಭೋಜರಾಜ ರಾಠೋಡ, ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ, ಪೇದೆಗಳಾದ ಶರಣಪ್ಪ, ಅನಿಲ್ ಭಂಡಾರಿ ಎಂಬುವರನ್ನು ಅಮಾನತುಗೊಳಿಸಿ ಎಸ್ ಪಿ ಡಾ.ಸಿಮಿ ಮರಿಯಂ ಜಾರ್ಜ್ ಆದೇಶಿಸಿದ್ದಾರೆ.
ಕಾಳಗಿ ಸಮೀಪದ ಲಕ್ಷ್ಮಣ ನಾಯಕ ತಾಂಡಾದ ಕುರಿ ಫಾರ್ಮ್ ನಲ್ಲಿ 1,200 ಕೆಜಿ ಗಾಂಜಾ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿಸಿದ್ದರು. ಪ್ರಮುಖ ಆರೋಪಿ ಚಂದ್ರಕಾಂತ್ ಎಂಬುವನನ್ನು ಬೆಂಗಳೂರು ಪೊಲೀಸರು ಹಿಡಿದುಕೊಂಡು ಹೋಗಿದ್ದರು. ಗಾಂಜಾ ಪತ್ತೆಯಾದ ಕುರಿ ಫಾರ್ಮ್ ಕಾಳಗಿ ಪೊಲೀಸ್ ಠಾಣೆಯಿಂದ ಕೇವಲ ಒಂದೂವರೆ ಕಿ.ಮೀ. ದೂರ ಇದ್ದರೂ ಇಷ್ಟು ದೊಡ್ಡ ಜಾಲ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿರಲಿಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
ಇದನ್ನೂ ಓದಿ: ಬಾಲಿವುಡ್ ನಶೆ ಜಾಲದಲ್ಲಿ ಸಾರಾ ಆಲಿಖಾನ್, ರಾಕುಲ್ ಪ್ರೀತ್, ಮುಖೇಶ್ ಚಾಬ್ರಾ!ಬಾಯ್ಬಿಟ್ಟ ರಿಯಾ
ಬೆಂಗಳೂರಿಂದ ಪೊಲೀಸರು ಜಿಲ್ಲೆಗೆ ಬಂದು ಕಾರ್ಯಾಚರಣೆ ನಡೆಸಿ ಕ್ವಿಂಟಾಲ್ ಗಟ್ಟಲೆ ಗಾಂಜಾ ವಶಪಡಿಸಿಕೊಂಡು ಹೋಗಿದ್ದು ಜಿಲ್ಲೆಯ ಪೊಲೀಸರಿಗೆ ಮುಜುಗರ ಉಂಟುಮಾಡಿತ್ತು.