Advertisement

ರಾಜ್ಯ ಸರಕಾರ‌ದಿಂದ ಕೊಡಗು ಸಂತ್ರಸ್ತರ ಅವಗಣನೆ: ಜೆಡಿಎಸ್‌

07:55 PM Nov 02, 2019 | Team Udayavani |

ಮಡಿಕೇರಿ: ಕೊಡಗಿನ ಪ್ರವಾಹ ಸಂತ್ರಸ್ತರ ಸಂಕಷ್ಟಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್‌.ಕೆ.ಕುಮಾರಸ್ವಾಮಿ ಅವರು ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಜೆಡಿಎಸ್‌ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Advertisement

ಸದಸ್ಯತ್ವ ಅಭಿಯಾನ ಮತ್ತು ರಾಜ್ಯ ಸರಕಾರದ ನಿರ್ಲಕ್ಷ್ಯದ ವಿರುದ್ಧ ಕೊಡಗು ಜೆಡಿಎಸ್‌ ಹಮ್ಮಿಕೊಂಡಿರುವ ಅಭಿಯಾನದ ಪಾದಯಾತ್ರೆಗೆ ಕೊಡ್ಲಿಪೇಟೆಯ ಶ್ರೀಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಈ ಹಿಂದೆ ರಾಜ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಸರಕಾರವಿದ್ದಾಗ ಕೊಡಗಿನ ಮಳೆಹಾನಿ ಸಂತ್ರಸ್ತರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸಿ ಅಗತ್ಯ ಪರಿಹಾರವನ್ನು ನೀಡಲಾಗಿತ್ತು. ನಿರಾಶ್ರಿತರಿಗೆ ಸುಮಾರು 800 ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಯನ್ನು ರೂಪಿಸಲಾಯಿತು. ಆದರೆ ಈಗಿನ ಸರಕಾರ ಸಂತ್ರಸ್ತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಮತ್ತು ಇಲ್ಲಿಯವರೆಗೆ ಸೂಕ್ತ ರೀತಿಯ ಪರಿಹಾರವನ್ನು ವಿತರಿಸಿಲ್ಲವೆಂದು ಆರೋಪಿಸಿದರು.

ಎನ್‌ಡಿಆರ್‌ಎಫ್ ನಿಯಮದಂತೆ ಪರಿಹಾರ ವಿತರಿಸಲಾಗಿದೆಯೇ ಹೊರತು ಕೊಡಗಿನ ಸಂತ್ರಸ್ತರಿಗೆ ಪ್ರತ್ಯೇಕ ಅನುದಾನವನ್ನೇನು ಮೀಸಲಿಟ್ಟಿಲ್ಲ. ಆದರೆ ಹಿಂದಿನ ಮೈತ್ರಿ ಸರಕಾರ ವಿಶೇಷ ಅನುದಾನವನ್ನು ನೀಡಿತ್ತು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸಂತ್ರಸ್ತರನ್ನು ಕಡೆಗಣಿಸಿರುವ ಸರಕಾರದ ವಿರುದ್ಧ ಕೊಡ್ಲಿಪೇಟೆಯಿಂದ ಶನಿವಾರಸಂತೆಯವರೆಗೆ ಸಾಂಕೇತಿಕವಾಗಿ ಪ್ರತಿಭಟನಾ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಸೂಕ್ತ ರೀತಿಯ ಸ್ಪಂದನೆ ದೊರೆಯದಿದ್ದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್‌ ಮಾತನಾಡಿದರು. ಕಾರ್ಯಕರ್ತರ ಸಹಕಾರದೊಂದಿಗೆ ಪ್ರತೀ ಬೂತ್‌ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲಾಗುವುದು ಎಂದು ಹೇಳಿದರು. ಜಿಲ್ಲಾಧ್ಯಕ್ಷ ಅಧ್ಯಕ್ಷ ಸಂಕೇತ್‌ ಪೂವಯ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಮಹಿಳಾ ಘಟಕದ ಅಧ್ಯಕ್ಷೆ ಶಾಂತಿ ಅಚ್ಚಪ್ಪ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‌ಖಾನ್‌, ಪ್ರಧಾನ ಕಾರ್ಯದರ್ಶಿ ಆದಿಲ್‌ ಪಾಷ, ಖಜಾಂಚಿ ಡೆನ್ನಿ ಬರೋಸ್‌, ಪ್ರಧಾನ ಕಾರ್ಯದರ್ಶಿ ಸುನೀಲ್‌, ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷ ಶೇಖರ್‌, ಹಾಗೂ ಎಲ್ಲಾ ಬೂತ್‌ ಮಟ್ಟದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

ಕೊಡ್ಲಿಪೇಟೆಯಲ್ಲಿ ಆರಂಭವಾದ ಪಾದಯಾತ್ರೆ ಶನಿವಾರಸಂತೆಯ ನಂದೀಶ್ವರ ಮಂಟಪದಲ್ಲಿ ಸಮಾರೋಪಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next