ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ಶುಕ್ರವಾರ ತಿಳಿಸಿದ್ದಾರೆ.
ವಶಕ್ಕೆ ಪಡೆದ ಆರೋಪಿ ರಿಯಾಝ್ (38) ಎನ್ನುವವನಾಗಿದ್ದು, ಮಂಗಳೂರಿನ ಫಳ್ನೀರ್ ನವನಾಗಿದ್ದು, ಘಟನೆಯಲ್ಲಿ ಬಳಸಿಕೊಳ್ಳಲಾಗಿದೆ ಎನ್ನಲಾದ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ದೂರುದಾರರು ಆರೋಪಿ ಮತ್ತು ವಾಹನವನ್ನು ಗುರುತಿಸಿದ್ದಾರೆ. ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಪ್ರಕರಣಗಳು ದಾಖಲಾಗಿಲ್ಲ ಮತ್ತು ವಶಕ್ಕೆ ಪಡೆದಾಗ ಆತನ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಅ. 13ರ ರಾತ್ರಿ ಸುಮಾರು 11.30ರ ಸಮಯದಲ್ಲಿ ಶಾಸಕ ಹರೀಶ್ ಪೂಂಜಾ ಅವರು ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರ್ ನಲ್ಲಿ ಬಂದ ತಂಡ ಶಾಸಕರ ಕಾರನ್ನು ಅಡ್ಡಗಟ್ಟಿ ದಾಳಿಗೆ ಯತ್ನಿಸಿತ್ತು ಎಂದು ದೂರು ದಾಖಲಾಗಿದೆ.
ಶಾಸಕರು ತಮ್ಮ ಕಾರನ್ನು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿ ತೆರಳುತ್ತಿದ್ದರು. ಶಾಸಕರ ಅಧಿಕೃತ ಕಾರು ಆ ಕಾರನ್ನು ಹಿಂಬಾಲಿಸುತ್ತಿತ್ತು. ಹರೀಶ್ ಪೂಂಜಾ ಅವರ ಅಧಿಕೃತ ವಾಹನ ಚಾಲಕ ಶಾಸಕರ ಕಾರನ್ನು ಚಲಾಯಿಸುತ್ತಿದ್ದರು. ಕಾರನ್ನು ತಡೆಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು, ತಲವಾರು ಝಳಪಿಸಿ ಪರಾರಿಯಾಗಿದ್ದರು ಎಂದು ದೂರು ದಾಖಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.