ಬೆಂಗಳೂರು: ಇತ್ತೀಚೆಗೆ ಚಿಕ್ಕಮಕ್ಕಳಿಂದ ವೃದ್ಧವರೆಗಿನ ಎಲ್ಲ ವಯಸ್ಸಿನವರು ರೀಲ್ಸ್ (ಮನರಂಜನೆ ಮೊಬೈಲ್ ಆ್ಯಪ್)ನಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮಹಿಳೆ ಪತಿಯನ್ನು ತೊರೆದು ರೀಲ್ಸ್‌ನಲ್ಲಿ ಪರಿಚಯವಾದ ವ್ಯಕ್ತಿ ಜತೆ ನಾಪತ್ತೆಯಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಈ ಘಟನೆಯಿಂದ ವಿಚಲಿತಗೊಂಡಿರುವ ಪತಿ, ಸುಬೇದಾರಪಾಳ್ಯ ನಿವಾಸಿ ಜೋಸೆಫ್ ಆಂಟೋನಿ ಎಂಬುವರು ಪತ್ನಿ ನಮಿತಾ ಕುಮಾರಿ ಮತ್ತು ನಾಲ್ಕು ವರ್ಷದ ಮಗನನ್ನು ಹುಡುಕಿಕೊಡುವಂತೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ಎಲೆಕ್ಟ್ರೀಷಿಯನ್ ಕೆಲಸ ಮಾಡುವ ಜೋಸೆಫ್ ಆಂಟೋನಿ 9 ವರ್ಷಗಳ ಹಿಂದೆ ಜಾರ್ಖಂಡ್ ಮೂಲದ ನಮೀತಾ ಕುಮಾರಿ ಜತೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಮಧ್ಯೆ ನಮೀತಾ ಕುಮಾರಿ ಮೊಬೈಲ್ ಆ್ಯಪ್‌ಗಳ ಮೂಲಕ ರೀಲ್ಸ್‌ನಲ್ಲಿ ಹಾಡು, ಕುಣಿತದ ಹವ್ಯಾಸ ಇಟ್ಟುಕೊಂಡಿದ್ದರು. ಇದೇ ವೇಳೆ ಆರು ತಿಂಗಳ ಹಿಂದೆ ದೆಹಲಿ ಮೂಲದ ದೀಪಕ್ ಮೊಹರಾ ಎಂಬಾತನ ಪರಿಚಯವಾಗಿದೆ. ನಂತರ ಇಬ್ಬರು ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೋ ಕಾಲ್‌ನಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲದೆ, ಜ.8ರಂದು ದೀಪಕ್ ಮೇಹರಾ ಬೆಂಗಳೂರಿಗೆ ಬಂದು ನಮೀತಾ ಕುಮಾರಿಯನ್ನು ಭೇಟಿಯಾಗಿ ಹೋಗಿದ್ದ. ಈ ವಿಚಾರ ತಿಳಿದ ಜೋಸೆಫ್ ಪತ್ನಿಗೆ ಬುದ್ಧಿವಾದ ಹೇಳಿದ್ದರು ಎಂದು ಪೊಲೀಸರು ಹೇಳಿದರು.
ಮೊಬೈಲ್ ಒಡೆದು ಹಾಕಿ ನಾಪತ್ತೆ: ಆದರೂ ನಮೀತಾ ಕುಮಾರಿ, ಜ.26 ಮುಂಜಾನೆ 5 ಗಂಟೆ ಸುಮಾರಿಗೆ ಪತಿಯ ಮೊಬೈಲ್ ಅನ್ನು ನೀರಿನಲ್ಲಿ ಹಾಕಿ, ಆಕೆಯ ಮೊಬೈಲ್‌ನನ್ನು ಒಡೆದು ಹಾಕಿದ್ದಾಳೆ. ನಂತರ ನಾಲ್ಕು ವರ್ಷದ ಎರಡನೇ ಪುತ್ರನ ಜತೆ ಯಾವುದೇ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಹೀಗಾಗಿ ಪತ್ನಿ ನಮೀತಾಕುಮಾರಿ ಮತ್ತು ನಾಲ್ಕು ವರ್ಷದ ಮಗ ದೀಪಕ್ ಮೊಹರಾ ಜತೆಯೇ ಹೋಗಿರಬಹುದು. ಇಬ್ಬರನ್ನು ಹುಡುಕಿಕೊಡುವಂತೆ ಎಂದು ದೂರು ನೀಡಿದ್ದಾರೆ. ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.