ಸಾಗರ: ತಾಲೂಕು ಮಾಹಿತಿ ಹಕ್ಕು ಕಾರ್ಯಕರ್ತ ಓಂಕಾರ ತಾಳಗುಪ್ಪ ಅವರ ಮೇಲೆ ಜೀವ ಬೆದರಿಕೆ ಹಾಕಿದ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ವಿರುದ್ಧ ಜೀವ ಬೆದರಿಕೆ ದೂರು ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಸೋಮವಾರ ದಾಖಲಾಗಿದೆ.
ಈ ವರ್ಷದ ಜನವರಿ 12 ರಂದು ನಗರದ ಗಾಂಧಿ ಮೈದಾನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಾಗರ ಶಾಖೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ನಿವೃತ್ತ ನೌಕರರು, ಮಾಜಿ ಯೋಧರು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಅಭಿನಂದನೆ ಸಲ್ಲಿಸಲು ಏರ್ಪಡಿಸಿದ್ದ ತಾಲೂಕು ನೌಕರರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿ.ಎಸ್.ಷಡಕ್ಷರಿ, ತಾಳಗುಪ್ಪದ ಆರ್‌ಟಿಐ ಕಾರ್ಯಕರ್ತನಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನಾನು ಬೆದರುವಂತವನಲ್ಲ.ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ಆರ್‌ಟಿಐ ಮುಂದಿಟ್ಟುಕೊಂಡು ಏನೂ ಮಾಡಲಾಗುವುದಿಲ್ಲ. ಹೀಗಾದರೆ ಜೀವನ ಮಾಡುವುದು ಕಷ್ಟವಾಗಬಹುದು. ನನ್ನ ವಿರುದ್ಧ ಹೇಳಿಕೆ ನೀಡಿದ ಶಿಕಾರಿಪುರದ ಪ್ರಕರಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯನನ್ನು ಜೈಲಿಗೆ ಕಳುಹಿಸಿದ್ದೇನೆ ಎಂದು ಜೀವ ಬೆದರಿಕೆ ಹಾಕಿದರು ಎಂದು ಷಡಾಕ್ಷರಿ ವಿರುದ್ಧ ಓಂಕಾರ ಆರೋಪಿಸಿದ್ದಾರೆ.
ಈ ಪ್ರಕರಣ ಸಂಬಂಧ ತಡವಾಗಿ ಪೊಲೀಸರು ದೂರು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಿದ್ದಾರೆ.