Advertisement

ಮೂರು ಕಡೆ ಕಸದಿಂದ ಕರೆಂಟ್‌

12:35 PM Apr 16, 2018 | |

ಬೆಂಗಳೂರು: ವೈಜ್ಞಾನಿಕ ತ್ಯಾಜ್ಯ ಘಟಕಗಳು ನಿರೀಕ್ಷಿತ ಯಶಸ್ಸು ಕಾಣದ ಕಾರಣ ನಗರದ ಮೂರು ಕಡೆ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಸ್ಥಾಪನೆಗೆ ಬಿಬಿಎಂಪಿ ಯೋಜನೆ ರೂಪಿಸಿದ ಬೆನ್ನಲ್ಲೇ, ಘಟಕ ಸ್ಥಾಪನೆಗೆ ಕೈಜೋಡಿಸಿರುವ ವಿದೇಶಿ ಸಂಸ್ಥೆಗಳು ಅಗತ್ಯ ಸಿದ್ಧತೆಗೆ ಮುಂದಾಗಿವೆ.

Advertisement

ಬಿಬಿಎಂಪಿ ವತಿಯಿಂದ ನಗರದ ಏಳು ಭಾಗಗಳಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಭಾಗಗಳಲ್ಲಿ ದುರ್ವಾಸನೆ ಹರಡಿ, ಘಟಕಗಳನ್ನು ಮುಚ್ಚುವಂತೆ ಸಮೀಪದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುವ ಬದಲು ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆಗೆ ಪಾಲಿಕೆ ಮುಂದಾಗಿದೆ. 

ಅದರಂತೆ ಈಗಾಗಲೇ ಬಾಗಲೂರಿನಲ್ಲಿ ನಿತ್ಯ 600 ಟನ್‌ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಜತೆಗೆ ದೊಡ್ಡಬಿದರಕಲ್ಲು ಹಾಗೂ ಚಿಕ್ಕನಾಗಮಂಗಲದಲ್ಲಿ ಹಸಿ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸಲು ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿರುವ ಕಂಪನಿ ಪ್ರತಿನಿಧಿಗಳು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಮುಂದಾಗಿದ್ದಾರೆ.

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸಲು ಉದ್ದೇಶಿಸಿರುವ ಸ್ಥಳಗಳಿಗೆ ಇತ್ತೀಚೆಗೆ ಭೇಟಿ ನೀಡಿದ ಕಂಪನಿ ಪ್ರತಿನಿಧಿಗಳು, ನಗರದಲ್ಲಿ ಸೃಷ್ಟಿಯಾಗುತ್ತಿರುವ ತ್ಯಾಜ್ಯವನ್ನು ವಿದ್ಯುತ್‌ ಆಗಿ ಪರಿವರ್ತಿಸುವ ವಿಧಾನ, ಅಗತ್ಯ ಯಂತ್ರೋಪಕರಣಗಳು, ತ್ಯಾಜ್ಯ ಸಂಗ್ರಹ ಹಾಗೂ ವಿದ್ಯುತ್‌ ಉತ್ಪಾದನೆಗೆ ಅಗತ್ಯ ಉಪಕರಣಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ಘಟಕಕ್ಕೆ 250 ಕೋಟಿ ವೆಚ್ಚ: ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ಒಂದರ ಸ್ಥಾಪನೆಗೆ 250 ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ. ಘಟಕಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ವಿದೇಶಿ ಸಂಸ್ಥೆಯೇ ಭರಿಸಲಿದ್ದು, ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಪಾಲಿಕೆಯಿಂದ ನೀಡಲಾಗುತ್ತದೆ. ಘಟಕದಲ್ಲಿ ಉತ್ಪಾದಿಸುವ ವಿದ್ಯುತ್ತನ್ನು ಕಂಪನಿಯು ರಾಜ್ಯ ವಿದ್ಯುತ್‌ ಕಂಪನಿಗಳಿಗೆ ಮಾರಾಟ ಮಾಡಲಿದೆ.

Advertisement

ತ್ಯಾಜ್ಯ ಸಮಸ್ಯೆಗೆ ಪರಿಹಾರ: ಪಾಲಿಕೆಯಿಂದ ನಗರದ ಮೂರು ಕಡೆ ನಿರ್ಮಿಸಲು ಉದ್ದೇಶಿಸಿರುವ ಮೂರು ವಿದ್ಯುತ್‌ ಉತ್ಪಾದನಾ ಘಟಕಗಳಿಂದ ನಗರದ ತ್ಯಾಜ್ಯ ಸಮಸ್ಯೆಗೆ ಪರಿಹಾರ ದೊರೆಯಲಿದೆ. ನಿತ್ಯ ನಗರದಲ್ಲಿ 4 ಸಾವಿರ ಟನ್‌ ತ್ಯಾಜ್ಯ ಸೃಷ್ಟಿಯಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ಶೇ.40ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತಿದೆ. ಮೂರು ಘಟಕಗಳಿಂದ 1800 ಟನ್‌ ಹಸಿ ತ್ಯಾಜ್ಯ ವಿದ್ಯುತ್‌ ಆಗಿ ಪರಿವರ್ತನೆಯಾಗಲಿದ್ದು, ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳ ಅಭಿಪ್ರಾಯ.

ಬಯೋಮಿಥನೈಸೇಷನ್‌ ಘಟಕಗಳ ಪುನರಾರಂಭ: ಹಸಿ ತ್ಯಾಜ್ಯ ಸಂಸ್ಕರಣೆಯಿಂದ ವಿದ್ಯುತ್‌ ಉತ್ಪಾದಿಸಿ ಬೀದಿ ದೀಪಗಳನ್ನು ಬೆಳಗಲೆಂದು ನಗರದ 10 ಕಡೆ ನಿರ್ಮಿಸಿರುವ ಬಯೋಮಿಥನೈಸೇಷನ್‌ ಘಟಕಗಳನ್ನು ಸಹ ಪುನರಾರಂಭಿಸಲು ಬಿಬಿಎಂಪಿ ಮುಂದಾಗಿದೆ. ನಗರದ ಮತ್ತಿಕೆರೆ, ಸಿಂಗಾಪುರ, ಸ್ವಾತಂತ್ರ್ಯ ಉದ್ಯಾನ, ಕೆ.ಆರ್‌.ಮಾರುಕಟ್ಟೆ, ನಾಗಪುರ, ಕೋರಮಂಗಲ,

ಸೌತ್‌ ಎಂಡ್‌ ವೃತ್ತದ ಲಕ್ಷ್ಮಣರಾವ್‌ ಬುಲೇ ವಾರ್ಡ್‌, ಕೂಡ್ಲು ಬಳಿಯ ಕೆಸಿಡಿಸಿ ಘಟಕ, ದೊಮ್ಮಲೂರು, ಬೇಗೂರು ಸೇರಿದಂತೆ ಒಟ್ಟು 13 ಕಡೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ, ಅಸಮರ್ಪಕ ನಿರ್ವಹಣೆಯಿಂದ ಘಟಕಗಳು ಹಲವು ವರ್ಷಗಳಿಂದ ಸ್ಥಗಿತಗೊಂಡಿವೆ. ಚುನಾವಣೆ ನಂತರ ಎಲ್ಲ 13 ಘಟಕಗಳನ್ನು ಪಾಲಿಕೆಯಿಂದಲೇ ಆರಂಭಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. 

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಬಾಗಲೂರಿನಲ್ಲಿ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಲಾಗಿದೆ. ದೊಡ್ಡಬಿದರಕಲ್ಲು ಹಾಗೂ ಚಿಕ್ಕನಾಗಮಂಗಲದಲ್ಲಿಯೂ ಘಟಕಗಳ ನಿರ್ಮಾಣಕ್ಕೆ ಫ್ರಾನ್ಸ್‌ ಮೂಲದ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಘಟಕ ಸ್ಥಾಪನೆಗೆ ಅಗತ್ಯ ಸಿದ್ಧತೆಗಳನ್ನು ಕಂಪನಿ ಪ್ರತಿನಿಧಿಗಳು ಕೈಗೊಂಡಿದ್ದಾರೆ. 
-ಸಫ್ರಾಜ್‌ ಖಾನ್‌, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ

* ವೆಂ.ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next