Advertisement
ವಲ್ಲಭಭಾಯಿ ವಸ್ರಾಂಭಾಯಿ ಮರ್ವಾನಿಯಾ, ಗುಜರಾತಿನ ಜುನಾಗಡ್ ಜಿಲ್ಲೆಯ ಖಾಮ್‌ಧ್ರೋಲ್ ಗ್ರಾಮದವರು. 1943ರಲ್ಲಿ, ಅವರು ಕೃಷಿ ಕೆಲಸಕ್ಕೆ ಇಳಿದಾಗ ಅವರಿಗೆ 13 ವರ್ಷ ವಯಸ್ಸು! ಆಗಷ್ಟೇ 5ನೇ ತರಗತಿ ಮುಗಿಸಿದ್ದ ವಲ್ಲಭಭಾಯಿ, ತಮ್ಮ ತಂದೆಯವರಿಗೆ ಹೊಲದ ಕೆಲಸದಲ್ಲಿ ನೆರವಾಗುವ ಸಲುವಾಗಿ ವಿದ್ಯಾಭ್ಯಾಸ ತೊರೆದರು. ಈ ವರ್ಷ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ. ಅನಕ್ಷರಸ್ಥರಾಗಿದ್ದರೂ ಪದ್ಮಶ್ರೀ ಪಡೆಯುವಲ್ಲಿಯ ತನಕದ ಅವರ ಪಯಣ ಸುದೀರ್ಘವಾದುದು. ಬಹಳ ಹಿಂದೆ, ಅವರ 5 ಎಕರೆ ಹೊಲದಲ್ಲಿ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ದ್ವಿದಳಧಾನ್ಯಗಳು, ಆಹಾರಧಾನ್ಯಗಳು ಮತ್ತು ನೆಲಗಡಲೆ- ಇವನ್ನು ಫಸಲಿನ ಮಾರಾಟಕ್ಕಾಗಿ ಮತ್ತು ಜೋಳ, ಸಣ್ಣಜೋಳ, ರಾಜೊಕೋ 3 (ಇದೊಂದು ಮೇವಿನ ಹುಲ್ಲು) ಹಾಗೂ ಕ್ಯಾರೆಟ್- ಇವನ್ನು ಜಾನುವಾರುಗಳಿಗೆ ಆಹಾರವಾಗಿ ಬೆಳೆಯುತ್ತಿದ್ದರು. ಆಗ, ಜಾನುವಾರುಗಳಿಗಾಗಿ ಬೆಳೆಯುತ್ತಿದ್ದ ಕ್ಯಾರೆಟನ್ನು ಮನುಷ್ಯರೂ ತಿನ್ನಬಹುದೆಂಬ ಸಂಗತಿ ಗುಜರಾತಿನಲ್ಲಿ ಯಾರಿಗೂ ಗೊತ್ತಿರಲಿಲ್ಲ!
ಅದೊಂದು ದಿನ, ಜಾನುವಾರುಗಳಿಗೆ ತಿನ್ನಲು ಹಾಕುತ್ತಿದ್ದ ಕ್ಯಾರೆಟ್‌ನ ತುಂಡೊಂದನ್ನು ವಲ್ಲಭಭಾಯಿ, ಬಾಯಿಗೆ ಹಾಕಿಕೊಂಡರು; ಅದು ಬಹಳ ರುಚಿಯಾಗಿತ್ತು. ಹಾಗಾಗಿ, ತಾವು ಬೆಳೆಯುವ ಕ್ಯಾರೆಟ್‌ನ ಒಂದು ಭಾಗವನ್ನು ಮಾರಾಟ ಮಾಡಬೇಕೆಂದು ತಂದೆಯವರಿಗೆ ಹೇಳಿದರು. ಕ್ಯಾರೆಟ್‌ಗಳನ್ನು ಮಾರುಕಟ್ಟೆಗೆ ಒಯ್ದರು. ತಮ್ಮ ಗ್ರಾಹಕರೊಬ್ಬರಿಗೆ, ಕ್ಯಾರೆಟ್‌ನ ರುಚಿ ನೋಡಲು ವಿನಂತಿಸಿದರು. ಶುರುವಿನಲ್ಲಿ ತಿನ್ನಲು ಹಿಂದೆಮುಂದೆ ನೋಡಿದ ಆ ಗ್ರಾಹಕ ರುಚಿ ನೋಡಿದ ನಂತರ 5 ಕೆ.ಜಿ. ಕ್ಯಾರೆಟ್‌ಅನ್ನು ಖರೀದಿಸಿದರು. ಅದನ್ನು ನೋಡುತ್ತಿದ್ದ ಇನ್ನೊಬ್ಬರು ಗ್ರಾಹಕರು ಒಂದಿಡೀ ಚೀಲ ಕೊಂಡೊಯ್ದರು. ತಮ್ಮ ಮೊದಲ ಬ್ಯಾಚ್‌ನ ಕ್ಯಾರೆಟ್ ಮಾರಾಟದಲ್ಲಿ ವಲ್ಲಭಭಾಯಿ ಗಳಿಸಿದ್ದು 8 ರೂ. “ಅಂದಿನ ದಿನಗಳಲ್ಲಿ 50 ಪೈಸೆ ಹಣವೇ ನಮಗೆ ದೊಡ್ಡ ಮೊತ್ತ. ಆ ದಿನದ ಗಳಿಕೆಯನ್ನು ತಂದೆಯವರಿಗೆ ಕೊಟ್ಟಾಗ, ಹೆಚ್ಚುವರಿ 8 ರೂ. ಕಂಡು ಅವರಿಗೆ ಅಚ್ಚರಿ. ಅದು ಕ್ಯಾರೆಟ್ ಮಾರಾಟದಿಂದ ಬಂದ ಹಣ ಎಂದಾಗ ಅವರಿಗೆ ನಂಬಲಿಕ್ಕೇ ಆಗಲಿಲ್ಲ. ಯಾಕೆಂದರೆ, ಕೆಲವೊಮ್ಮೆ ಇಡೀ ತಿಂಗಳು ನಮಗೆ 8 ರೂ. ಗಳಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ನೆನಪು ಮಾಡಿಕೊಳ್ಳುತ್ತಾರೆ ವಲ್ಲಭಭಾಯಿ.
Related Articles
ತದನಂತರ ಹನಿ ನೀರಾವರಿ ಅಳವಡಿಸಿ, ಸಸಿಗಳಿಗೆ ಮುಚ್ಚಿಗೆ ಹಾಕಲು ಶುರುಮಾಡಿದ ವಲ್ಲಭಭಾಯಿ, ತನ್ನ ಕೃಷಿ ಜಮೀನನ್ನು 4 ಎಕರೆಗಳಿಂದ 40 ಎಕರೆಗಳಿಗೆ ವಿಸ್ತರಿಸಿಕೊಂಡರು. ಈ ಸುಧಾರಿತ ಕೃಷಿಕ್ರಮಗಳಿಂದಾಗಿ ಕ್ಯಾರೆಟ್‌ನ ಗುಣಮಟ್ಟವೂ ಸುಧಾರಿಸಿತು. ಅಲ್ಲಿಯ ಮಾರುಕಟ್ಟೆಯಲ್ಲಿ ಈ ಕ್ಯಾರೆಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇತ್ತು. ಹಾಗಾಗಿ ಇದರ ಬೀಜ ಉತ್ಪಾದಿಸಿ, ಅವನ್ನು ಇತರ ರೈತರಿಗೆ ಹಂಚಲು ನಿರ್ಧರಿಸಿದರು. ಬೀಜೋತ್ಪಾದನೆಗಾಗಿ ಅತ್ಯುತ್ತಮ ಸಸಿಗಳನ್ನೇ ಆಯ್ಕೆ ಮಾಡಿದರು. 1985ರಲ್ಲಿ ದೊಡ್ಡ ಪ್ರಮಾಣದಲ್ಲಿ ಬೀಜೋತ್ಪಾದನೆ ಶುರು ಮಾಡಿ ಈ ತಳಿಯನ್ನು “ಮಧುವನ್ ಕ್ಯಾರೆಟ್’ ಎಂದು ಕರೆದರು.
Advertisement
ಈಗ ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಬೆಳೆಯಲಾಗುವ ಮಧುವನ್ ಕ್ಯಾರೆಟ್‌ನ ಸರಾಸರಿ ಇಳುವರಿ ಹೆಕ್ಟೇರಿಗೆ 40- 50 ಟನ್. ಮುಂಗಾರು 2016- 17ರಲ್ಲಿ ಜೈಪುರದ ರಾಜಸ್ಥಾನ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಈ ತಳಿಯ ದೃಢೀಕರಣ ಪ್ರಯೋಗ ನಡೆಸಿತು. ಇದರ ಫಸಲು (ಹೆಕ್ಟೇರಿಗೆ 74.2 ಟನ್) ಮತ್ತು ಪ್ರತಿ ಸಸಿಯ ಒಟ್ಟು ಬೆಳೆ ಅಂದರೆ ಎಲೆ ಮತ್ತು ಬೇರಿನ ತೂಕ (275 ಗ್ರಾಂ) ಇತರ ತಳಿಗಳಿಗಿಂತ ಹೆಚ್ಚಾಗಿರುವುದು ದೃಢಪಟ್ಟಿತು. ಅನಂತರ, ಅದೇ ವರ್ಷ ರಾಷ್ಟ್ರೀಯ ಅನುಶೋಧನಾ ಪ್ರತಿಷ್ಠಾನ ಗುಜರಾತ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳಲ್ಲಿ ಈ ತಳಿ ಬೆಳೆಸಿ ಪ್ರಯೋಗ ನಡೆಸಿದಾಗಲೂ ಇದರ ಇಳುವರಿ ಅತ್ಯುತ್ತಮವೆಂಬುದು ಖಚಿತವಾಯಿತು. ಚಿಪ್ಸ್, ಜ್ಯೂಸ್ ಮತ್ತು ಉಪ್ಪಿನಕಾಯಿ- ಇಂತಹ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಗೂ, ಈ ತಳಿ ಸೂಕ್ತ.
ಕೃಷಿಯೇ ತಪಸ್ಸುಕೆಲಸಗಾರರಿಂದ ಯಾವುದೇ ಕೃಷಿ ಕೆಲಸವನ್ನು ಮಾಡಿಸುತ್ತಿಲ್ಲ ವಲ್ಲಭಭಾಯಿ ಕುಟುಂಬ. ಕ್ಯಾರೆಟ್ ಬಿತ್ತನೆಯಿಂದ ತೊಡಗಿ ಬೀಜಗಳನ್ನು ಪ್ಯಾಕ್ ಮಾಡುವವರೆಗಿನ ಎಲ್ಲ ಕೆಲಸಗಳನ್ನೂ ಕುಟುಂಬದ ಸದಸ್ಯರೇ ನಿರ್ವಹಿಸುತ್ತಿದ್ದಾರೆ. ಪ್ರತಿ ಎಕರೆ ಕ್ಯಾರೆಟ್ ತಮ್ಮ ಕುಟುಂಬ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದೆ ಎಂದು ತಿಳಿಸುತ್ತಾರೆ ವಲ್ಲಭಭಾಯಿಯವರ ಮಗ ಅರವಿಂದ ಭಾಯಿ. 97 ವರ್ಷಗಳ ತುಂಬು ಬದುಕಿನಲ್ಲಿ ಒಂದು ತಪಸ್ಸಿನಂತೆ ಕ್ಯಾರೆಟ್ ಕೃಷಿ ಹಾಗೂ ಬೀಜೋತ್ಪಾದನೆ ಮುಂದುವರಿಸಿದವರು ವಲ್ಲಭಭಾಯಿ. ಈ ಜೀವಮಾನದ ಸಾಧನೆಗೆ ಪದ್ಮಶ್ರೀ ಪುರಸ್ಕೃತರಾಗಿ ಏಕಧ್ಯಾನದ ಕೃಷಿಯಿಂದ ಯಾವ ಸಾಧನೆಯ ಶಿಖರ ಏರಬಹುದೆಂದು ತೋರಿಸಿಕೊಟ್ಟಿದ್ದಾರೆ, ಅವರು. ನವಾಬರಿಗೆ ಸರಬರಾಜು
ಅಲ್ಲಿಯವರೆಗೆ ಮನುಷ್ಯರು ತಿನ್ನದೇ ಇದ್ದ ಕ್ಯಾರೆಟ್‌ನ ರುಚಿ ಜನರಿಂದ ಜನರಿಗೆ ಹರಡುತ್ತಿದ್ದಂತೆಯೇ ಬೇಡಿಕೆ ಹೆಚ್ಚಿತು. ಕೆಲವೇ ದಿನಗಳಲ್ಲಿ ಜುನಾಗಡ್‌ನ ನವಾಬ ಮೂರನೆಯ ಮಹಮ್ಮದ್ ಮಹಬತ್ ಖಾನ್ ಅವರಿಗೆ ಈ ವಿಶೇಷ ತರಕಾರಿಯ ಸುದ್ದಿ ಸಿಕ್ಕಿತು. ತದನಂತರ ನವಾಬರ ಅರಮನೆಯ ಭೋಜನಾಲಯಗಳಿಗೆ ವಲ್ಲಭಭಾಯಿ ಅವರಿಂದ ಕ್ಯಾರೆಟಿನ ನಿರಂತರ ಪೂರೈಕೆ. ಆದರೆ, ಭಾರತ ಸ್ವಾತಂತ್ರ್ಯ ಗಳಿಸಿದಾಗ, ಜುನಾಗಡದ ನವಾಬರು ಕರಾಚಿಗೆ ಹೋಗಿ ನೆಲೆಸಿದರು. ಅದೇನಿದ್ದರೂ. ನವಾಬರ ಅರಮನೆಗೆ ಕ್ಯಾರೆಟ್ ಪೂರೈಕೆ ಮಾಡಿದ ಆ ನಾಲ್ಕು ವರುಷಗಳಲ್ಲಿ ಉತ್ತಮ ಆದಾಯ ಗಳಿಸಿದರು ವಲ್ಲಭಭಾಯಿ. -ಅಡ್ಡೂರು ಕೃಷ್ಣರಾವ್