Advertisement

ಈಡನ್‌ ಮೇಲೆ ಕಾರ್ಮೋಡ

12:05 PM Sep 20, 2017 | Team Udayavani |

ಕೋಲ್ಕತಾ: ಭಾರತ- ಆಸ್ಟ್ರೇಲಿಯ ನಡುವೆ ಗುರುವಾರ ಕೋಲ್ಕತಾದಲ್ಲಿ ನಡೆಯುವ ದ್ವಿತೀಯ ಏಕದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಕೋಲ್ಕತಾದಲ್ಲೀಗ ಸತತ ಮಳೆಯಾಗಿದ್ದು, ಇದು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆಯ ಪ್ರಕಟನೆ ತಿಳಿಸಿದೆ. 

Advertisement

ಗುರುವಾರವೂ ಭಾರೀ ಮಳೆ ಯಾಗುವ ಮುನ್ಸೂಚನೆ ಇದ್ದು, ಪಂದ್ಯವೇ ರದ್ದಾದರೂ ಆಶ್ಚರ್ಯವಿಲ್ಲ ಎನ್ನಲಾಗಿದೆ. ಚೆನ್ನೈಯಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯಕ್ಕೂ ಮಳೆಯ ದರ್ಶನವಾಗಿತ್ತು. ಭಾರತದ ಇನ್ನಿಂಗ್ಸಿಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ ಆಸ್ಟ್ರೇಲಿಯ ಇನ್ನೇನು ಇನ್ನಿಂಗ್ಸ್‌ ಆರಂಭಿಸಬೇಕೆನ್ನುವ ಹೊತ್ತಿನಲ್ಲಿ ಮಳೆ ಸುರಿದಿತ್ತು. ಬಳಿಕ ಆಸೀಸ್‌ ಸರದಿಯನ್ನು 21 ಓವರ್‌ಗಳಿಗೆ ಇಳಿಸಿ ಡಕ್‌ವರ್ತ್‌-ಲೂಯಿಸ್‌ ನಿಯಮದಂತೆ ಫ‌ಲಿತಾಂಶವನ್ನು ನಿರ್ಧರಿಸಲಾಗಿತ್ತು. ಚೆನ್ನೈಯಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಕ್ರಿಕೆಟಿಗರ ಆಗಮನ
ಭಾರತ ಮತ್ತು ಆಸ್ಟ್ರೇಲಿಯ ತಂಡ ಗಳ ಆಟಗಾರರು ಸೋಮವಾರವೇ ಕೋಲ್ಕತಾಕ್ಕೆ ಆಗಮಿಸಿದ್ದಾರೆ. ನೇತಾಜಿ ಸುಭಾಶ್ಚಂದ್ರ ಬೋಸ್‌ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕ್ರಿಕೆಟಿಗರು ಬಂದಿಳಿಯುವ ವೇಳೆ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಬಳಿಕ ಬಿಗಿ ಭದ್ರತೆ ನಡುವೆ ಕ್ರಿಕೆಟಿಗರು ತಂಡದ ಬಸ್ಸಿನಲ್ಲಿ ಹೊಟೇಲಿಗೆ ತೆರಳುವಾಗಲೂ ಮಳೆ ಸುರಿಯುತ್ತಲೇ ಇತ್ತು.

ಮಂಗಳವಾರ ಆಸ್ಟ್ರೇಲಿಯ ನಾಯಕ ಸ್ಮಿತ್‌ ಹಾಗೂ ಇತರ ಕೆಲವು ಆಟಗಾರರು ಅಂಗಳ ವೀಕ್ಷಿಸಲು “ಈಡನ್‌ ಗಾರ್ಡನ್ಸ್‌’ಗೆ ಆಗಮಿಸಿ ದರು. ಆದರೆ ಆಗ ಇಡೀ ಅಂಗಳಕ್ಕೆ ಮಳೆಯಿಂದ ರಕ್ಷಣೆ ನೀಡಲು ಹೊದಿಕೆ ಹಾಕಲಾಗಿತ್ತು. ಇದನ್ನು ನೋಡಿ ನಿರಾಶೆಯಿಂದ ವಾಪಸಾದರು.

ನವೀಕರಣಗೊಂಡ “ಈಡನ್‌ ಗಾರ್ಡನ್ಸ್‌’ನಲ್ಲಿ ಅತ್ಯುತ್ತಮ ಮಟ್ಟದ ಡ್ರೈನೇಜ್‌ ವ್ಯವಸ್ಥೆ ಇರುವುದರಿಂದ ಮಳೆ ನಿಂತ ಕೆಲವೇ ನಿಮಿಷದಲ್ಲಿ ಪಂದ್ಯ ಆರಂಭಿಸಬಹುದೆಂಬುದು ಬಂಗಾಲ ಕ್ರಿಕೆಟ್‌ ಮಂಡಳಿಯ ನಿರೀಕ್ಷೆ.

Advertisement

“ಈಡನ್‌ ಗಾರ್ಡನ್ಸ್‌’ 66 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ. ಮಳೆ ಸಹಕರಿಸಿದರೆ ಸ್ಟೇಡಿಯಂ ತುಂಬೀತು. ಇಲ್ಲವೇ ಜನರೆಲ್ಲ ದುರ್ಗಾ ಪೂಜೆಯ ಪೆಂಡಾಲ್‌ನಲ್ಲೇ ಜಮಾಯಿಸಬಹುದು. ಈ ಪಂದ್ಯ ನವರಾತ್ರಿ ವೇಳೆಯಲ್ಲೇ ನಡೆಯುತ್ತಿ ರುವುದರಿಂದ ವೀಕ್ಷಕರು ಟಿಕೆಟ್‌ ಖರೀದಿ ಬಗ್ಗೆ ಈವರೆಗೆ ಹೆಚ್ಚಿನ ಆಸಕ್ತಿ ವಹಿಸಿಲ್ಲ.

ನಿಧಾನ ಗತಿಯ ಟ್ರ್ಯಾಕ್‌
ಮುಂದಿನ ದಿನಗಳಲ್ಲೂ ಪಿಚ್‌ ಹೊದಿಕೆಯನ್ನು ತೆರೆಯದೇ ಹೋದರೆ ಇದು ಪಂದ್ಯದ ವೇಳೆ ನಿಧಾನ ಗತಿಯಿಂದ ವರ್ತಿಸುವ ಸಾಧ್ಯತೆ ಇದೆ ಎಂಬುದಾಗಿ ಪೂರ್ವ ವಲಯದ ಕ್ಯುರೇಟರ್‌ ಆಶಿಷ್‌ ಭೌಮಿಕ್‌ ಹೇಳಿದ್ದಾರೆ.

“ಮಳೆ ಸುರಿಯುತ್ತಲೇ ಇರುವುದರಿಂದ ಪಿಚ್‌ ಹೊದಿಕೆ ತೆಗೆಯುವ ಹಾಗಿಲ್ಲ. ಆಗ ತೇವಾಂಶದಿಂದಾಗಿ ಚೆಂಡು ನಿಧಾನ ಗತಿ ಪಡೆದುಕೊಳ್ಳಲಿದೆ’ ಎಂದು ಭೌಮಿಕ್‌ ಹೇಳಿದರು. ಭಾರತ ತಂಡದ ಮಾಜಿ ನಾಯಕ, “ಕ್ಯಾಬ್‌’ ಅಧ್ಯಕ್ಷ ಸೌರವ್‌ ಗಂಗೂಲಿ “ಈಡನ್‌’ನಲ್ಲೇ ಬೀಡುಬಿಟ್ಟಿದ್ದು, ಮೈದಾನದ ಸಿಬಂದಿಗೆ ಸೂಕ್ತ ಸಲಹೆ-ಸೂಚನೆ ನೀಡುತ್ತಲೇ ಇದ್ದಾರೆ. ಈಡನ್‌ ಗಾರ್ಡನ್ಸ್‌ನ ಮುಖ್ಯ ಕ್ಯುರೇಟರ್‌ ಸುಜನ್‌ ಮುಖರ್ಜಿ ಪ್ರಕಾರ ಇಲ್ಲಿನ ಪಿಚ್‌ ಬ್ಯಾಟಿಂಗ್‌ ಹಾಗೂ ಬೌಲಿಂಗಿಗೆ ಸಮಾನ ರೀತಿಯಲ್ಲಿ  ಸ್ಪಂದಿಸಲಿದೆ. ಪ್ರಕೃತಿ ಸಹಕರಿಸಲಿ ಎಂಬುದು ಅವರ ಹಾರೈಕೆ.

Advertisement

Udayavani is now on Telegram. Click here to join our channel and stay updated with the latest news.

Next