ಸಿಯೋಲ್ : ದಕ್ಷಿಣ ಕೊರಿಯಾ ಹಾಗೂ ಜಪಾನ್ ನಡುವಿನ ಜೆಜು ದ್ವೀಪ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಸರಕು-ಸಾಗಣೆ ಹಡಗೊಂದು ಮುಳುಗಡೆಗೊಂಡಿದ್ದು, 22 ಸಿಬ್ಬಂದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
12 ಮಂದಿಯನ್ನು ಪಾರು ಮಾಡಲಾಗಿದ್ದು, ಉಳಿದ 8 ಮಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಜಪಾನಿನ ನಾಗಸಾಕಿಯಿಂದ 160 ಕಿ.ಮೀ ಹಾಗೂ ದ. ಕೊರಿಯಾದಿಂದ 150 ಕಿ.ಮೀ.
ದೂರದಲ್ಲಿರುವ ದ್ವೀಪ ಪ್ರದೇಶದಲ್ಲಿ ಬುಧವಾರ ಹಡಗು ಮುಳುಗಡೆಯಾಗಿದ್ದು, ಪ್ರದೇಶದಲ್ಲಿ ತೀವ್ರ ಗಾಳಿಯಿದ್ದ ಕಾರಣ ಪಾರುಗಾಣಿಕಾ ಕಾರ್ಯಾಚರಣೆಗೆ ವಿಮಾನಗಳು ಹಾಗೂ ನೌಕೆಗಳು ಧಾವಿಸಲು ತಡವಾಗಿದೆ.
22 ಮಂದಿಯ ಪೈಕಿ 14 ಮಂದಿಯನ್ನು ಪಾರು ಮಾಡಲಾಗಿತ್ತಾದರೂ, ಅವರಲ್ಲಿ 9 ಮಂದಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ಜಪಾನ್‌ಗೆ ಏರ್‌ಲಿಫ್ಟ್ ಮಾಡಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯದಲ್ಲಿ ಇಬ್ಬರು ಮೃತಪಟ್ಟಿರುವುದು ದೃಢವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವವರು ಜೀವಂತವಿರುವರೇ ಎಂಬುದನ್ನು ಇನ್ನೂ ಸಿಬ್ಬಂದಿ ತಿಳಿಸಿಲ್ಲ.
Related Articles
ಹಡಗಿನಲ್ಲಿದ್ದ ಸಿಬ್ಬಂದಿ ಪೈಕಿ 14 ಮಂದಿ ಚೀನಾ ಪ್ರಜೆಗಳಿದ್ದು, ಅವರಲ್ಲಿ 5 ಮಂದಿಯನ್ನು ಪಾರು ಮಾಡಲಾಗಿದೆ. ಅವರು ಜೀವಂತವಾಗಿದ್ದಾರೆ. 8 ಮಂದಿ ಮ್ಯಾನ್ಮಾರ್ ಮೂಲದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಣೆಯಾಗಿರುವ ಸಿಬ್ಬಂದಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. 6,551 ಟನ್ ತೂಕವಿದ್ದ ಜಿನ್ ಟಿಯಾನ್ ಎನ್ನುವ ಹಡಗು ಮುಳುಗಡೆಯಾಗಿದೆ ಎನ್ನಲಾಗಿದ್ದು, ಇದು ಹಾಂಗ್ ಕಾಂಗ್ ಮೂಲದ ಲಾಂಗ್ ಬ್ರೈಟ್ ಶಿಪ್ಪಿಂಗ್ ಲಿಮಿಟೆಡ್ ಸಂಸ್ಥೆಗೆ ಸೇರಿದ್ದು ಎನ್ನಲಾಗಿದೆ.
ಸಂಕಷ್ಟ ಕರೆ ಬಂದ ಬಳಿಕ ಮುಳುಗಡೆ
ಮಂಗಳವಾರ ತಡರಾತ್ರಿ 11.15ರ ಸಮಯಕ್ಕೆ ಹಡಗಿನಿಂದ ಕರಾವಳಿ ಭದ್ರತಾಪಡೆಗೆ ಅಪಾಯದ ಕರೆ ಬಂದಿದೆ. ಆದರೆ, ಪ್ರದೇಶದಲ್ಲಿ ಗಂಟೆಗೆ 56 ಕಿ.ಮೀ ವೇಗದಲ್ಲಿ 13 ಅಡಿ ಎತ್ತರದಲ್ಲಿ ಗಾಳಿ ಬೀಸುತ್ತಿದ್ದ ಕಾರಣ, ಅಲರ್ಟ್ ನೀಡಿದದ ಹಿನ್ನೆಲೆ ಪಾರುಗಾಣಿಕೆ ಕಾರ್ಯಾಚರಣೆಗೆ ತೆರಳಲು ಸಾಧ್ಯವಾಗಿಲ್ಲ. ಬುಧವಾರ ಬೆಳಗ್ಗಿನ ಜಾವ 2.41ರ ಸಮಯಕ್ಕೆ ಹಡಗಿನ ಕ್ಯಾಪ್ಟನ್, ಸ್ಯಾಟ್‌ಲೆçಟ್ ಕರೆ ಮಾಡಿದ್ದು, ಹಡಗು ಮುಳುಗುತ್ತಿರುವ ಹಿನ್ನೆಲೆ ಸಿಬ್ಬಂದಿ ದ್ವೀಪಕ್ಕೆ ಜಿಗಿಯಲು ನಿರ್ಧರಿಸಿದ್ದಾರೆ ಎಂದು ಕೊನೆಯ ಸಂವಹನ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-ದ್ವೀಪದಲ್ಲಿ ಕಾರ್ಗೋ ಹಡಗು ಮುಳುಗಡೆ
– 14 ಚೀನಿ, 8ಮ್ಯಾನ್ಮಾರ್ ಪ್ರಜೆಗಳಿದ್ದ ಹಡಗು
– 5 ಚೀನಿಯರು ಅಪಾಯದಿಂದ ಪಾರು
– ತೀವ್ರ ಗಾಳಿ ಹಿನ್ನೆಲೆ ಮುಳುಗಡೆ ಸಾಧ್ಯತೆ