Advertisement

ಸೇವೆಯಲ್ಲಿ ಅಸಡ್ಡೆ, ಅಸಹಕಾರ ಸಲ್ಲದು; ಸಿಎಂ ಬೊಮ್ಮಾಯಿ

09:45 PM May 02, 2022 | Team Udayavani |

ಬೆಂಗಳೂರು: ದೀನದಲಿತರು ಸೇರಿದಂತೆ ಸಾಮಾನ್ಯರಿಗೆ ಸರ್ಕಾರಿ ಸೇವೆಗಳನ್ನು ನೀಡುವಲ್ಲಿ ನೌಕರರ ಅಸಡ್ಡೆ, ಅಸಹಕಾರ, ವಿಳಂಬ ಧೋರಣೆ ಸಲ್ಲದು. ಈ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ; ಮುಲಾಜೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್‌ ಎಚ್ಚರಿಕೆ ನೀಡಿದರು.

Advertisement

ವಿಧಾನಸೌಧದ ಬ್ಯಾಂಕ್ವೇಟ್‌ ಹಾಲ್‌ನಲ್ಲಿ ಸೋಮವಾರ ಸಮಾಜಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ “ಕಲ್ಯಾಣ ಮಿತ್ರ’ ಸಹಾಯವಾಣಿ ಲೋಕಾರ್ಪಣೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಇನ್ನೂ ಎಷ್ಟು ದಿನ ಜನ ಕಾಯಬೇಕು? ವ್ಯವಸ್ಥೆಯಲ್ಲಿ ಅವರಿಗೆ ದೀನದಲಿತ ವರ್ಗಕ್ಕೆ ನ್ಯಾಯ ಸಿಕ್ಕಿರುವುದಿಲ್ಲ. ಸರ್ಕಾರವೇ ಮುತುವರ್ಜಿವಹಿಸಿ ಆ ವರ್ಗಕ್ಕೆ ನ್ಯಾಯ ಕಲ್ಪಿಸಬೇಕಾಗುತ್ತದೆ. ನ್ಯಾಯ ಕೊಡುವುದಷ್ಟೇ ಅಲ್ಲ; ಅವಕಾಶ ನೀಡುವ ಕಾಲವೂ ಬಂದಿದೆ. ದೀನದಲಿತರು ಸ್ವಾಭಿಮಾನದ ಬದುಕು ಸಾಗಿಸುವುದು ಬಹಳ ಮುಖ್ಯ. ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ಕಾನೂನು ಬಲವನ್ನೂ ನೀಡಿದ್ದೇವೆ. ಆದಾಗ್ಯೂ ಅದರಂತೆ ನಡೆದುಕೊಳ್ಳಲು ನಿಮಗೆ ಏನು ತೊಂದರೆ? ಈ ವಿಳಂಬ ಧೋರಣೆ, ಅಸಡ್ಡೆ, ಅಸಹಕಾರವನ್ನು ಇನ್ಮುಂದೆ ಒಪ್ಪುವುದಿಲ್ಲ ಎಂದು ಎಚ್ಚರಿಸಿದರು.


“ದಾಖಲೆಗಳು ಸರಳೀಕರಣವಾಗಬೇಕು. ಇಲಾಖೆಗಳ ಸಮನ್ವಯ. ನೌಕರರಲ್ಲಿ ತಾಳಮೇಳ ಇವೆಲ್ಲವುಗಳ ಅಮೂಲಾಗ್ರ ಬದಲಾವಣೆಯ ಅವಶ್ಯಕತೆ ಇದೆ. ಅತ್ಯಂತ ಸರಳವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಅವುಗಳನ್ನು ಫ‌ಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದ ಅವರು, ಈ ದಿಸೆಯಲ್ಲಿ ಈಗಾಗಲೇ ಸರ್ಕಾರ ಕಾರ್ಯಪ್ರವೃತ್ತವಾಗಿದೆ.

ತಾಲ್ಲೂಕು ಮಟ್ಟದಿಂದ ಪ್ರಧಾನ ಕಾರ್ಯದರ್ಶಿಗಳವರೆಗೆ ಯಾವೊಂದು ಕಡತದ ನಿರ್ಣಯಕ್ಕೆ ಆಡಳಿತಾತ್ಮಕವಾಗಿ 15-16 ಹಂತಗಳಿವೆ. ಈ ಹಂತಗಳಿಗೆ ಕತ್ತರಿ ಹಾಕಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕಡತದಲ್ಲಿ ಬರೀ ರುಜು ಹಾಕುವ ಐಎಎಸ್‌ ಅಧಿಕಾರಿಗಳು ನನಗೆ ಬೇಡ. ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಅಧಿಕಾರಿಗಳು ಬೇಕು’ ಎಂದರು.

ಇದೇ ವೇಳೆ ಏಕೀಕೃತ ಪರಿಶಿಷ್ಟ ಜಾತಿ ಮತ್ತು ಪಂಗಡಗಳ 24×7 ಸಹಾಯವಾಣಿ “ಕಲ್ಯಾಣ ಮಿತ್ರ’ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

Advertisement

ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್‌. ನಾಗೇಶ್‌, ವಿಧಾನ ಪರಿಷತ್‌ ಸದಸ್ಯರಾದ ಅ. ದೇವೇಗೌಡ, ವೈ.ಎ. ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next