Advertisement
ಅಂತ್ಯೋದಯ ಚೀಟಿ ಹಾಗೂ ಆದ್ಯತಾ ಕುಟುಂಬ (ಬಿಪಿಎಲ್)ದ ಚೀಟಿಗೆ ಉಚಿತ ಅಕ್ಕಿ ನೀಡಲಾಗುತ್ತದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಚ್ಚಲು ಅಕ್ಕಿ ಬದಲಿಗೆ ಬೆಳ್ತಿಗೆಯನ್ನು ಹೆಚ್ಚಾಗಿ ನೀಡುವುದರಿಂದ ಬಹುತೇಕರು ಅದನ್ನು ತಿಂಡಿಗೆ ಉಪಯೋಗಿಸುತ್ತಾರೆ ಮತ್ತು ಉಳಿದ ಅಕ್ಕಿಯನ್ನು ಕೆ.ಜಿ.ಗೆ 10ರಿಂದ 12 ರೂ.ಗಳಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಖಚಿತ ದೂರು ಅಥವಾ ಮಾಹಿತಿ ಇಲಾಖೆಗೆ ಬಂದರೆ ಆಯಾ ತಾಲೂಕಿನ ಆಹಾರ ನಿರೀಕ್ಷಕರ ಮೂಲಕ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗುತ್ತದೆ. ಉಭಯ ಜಿಲ್ಲೆಗಳಲ್ಲಿ ಈಗಾಗಲೇ ಈ ರೀತಿ ನೂರಾರು ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಮಾರಾಟ ಮಾಡಿದವರ ಕಾರ್ಡ್ ಕೂಡ ರದ್ದು ಮಾಡಲಾಗುತ್ತದೆ. ಈ ಅಧಿಕಾರ ಇಲಾಖೆಯ ಅಧಿಕಾರಿಗಳಿಗೆ ಇದೆ.
ಅನೇಕ ಹಳ್ಳಿಗಳಲ್ಲಿ ಪಡಿತರ ವ್ಯವಸ್ಥೆಯಲ್ಲಿ ಪಡೆದ ಅಕ್ಕಿಯನ್ನು ಖರೀದಿಸಲು ಮನೆ ಮನೆಗೆ ಸಗಟು ವ್ಯಾಪಾರಸ್ಥರು ಹೋಗುತ್ತಾರೆ. ಪಡಿತರ ವಿತರಣೆಯಾದ ಮೂರ್‍ನಾಲ್ಕು ದಿನಗಳ ಅನಂತರ ಅಥವಾ ಎರಡು ಮೂರು ತಿಂಗಳಿ ಗೊಮ್ಮೆ ಒಂದೊಂದು ಮನೆಗೆ ಹೋಗುತ್ತಾರೆ. ಕನಿಷ್ಠ 50ರಿಂದ 100 ಕೆ.ಜಿ. ಇದ್ದರೆ ಮಾತ್ರ ಖರೀದಿಸುತ್ತೇವೆ ಎಂಬ ಷರತ್ತು ಹಾಕುತ್ತಾರೆ. ಕೆಲವು ಕಾರ್ಡ್‌ದಾರರು ಸ್ಥಳೀಯ ಅಂಗಡಿಗಳಿಗೂ ಮಾರುತ್ತಾರೆ. ಈಗಾಗಲೇ ಇಂತಹ ಕೆಲವು ಜಾಲವನ್ನು ಭೇದಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದರು. ನಿರ್ದಾಕ್ಷಿಣ್ಯ ಕ್ರಮ
ಇದೊಂದು ವ್ಯವಸ್ಥಿತವಾದ ಜಾಲ. ಸರಕಾರದ ಸೌಲಭ್ಯ ದುರುಪಯೋಗ ಆಗಬಾರದು. ಈ ಬಗ್ಗೆ ಸ್ಥಳೀಯ ವಾಗಿಯೂ ಜಾಗೃತಿ ಮೂಡಿಸುತ್ತಿದ್ದೇವೆ. ನಿಖರವಾದ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುತ್ತದೆ. ಸಾರ್ವಜನಿಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಿದಾಗ ಮಾತ್ರ ಪತ್ತೆ ಸಾಧ್ಯ ಎಂದು ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Related Articles
ಪಡಿತರ ಆಹಾರ ಧಾನ್ಯ ಕಾಳಸಂತೆಯಲ್ಲಿ ಮಾರುತ್ತಿರುವ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸಹಾಯವಾಣಿ 1967ಕ್ಕೆ ಅಥವಾ ತಹಶೀಲ್ದಾರ್ ಕಚೇರಿ/ಉಪ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ತಿಳಿಸಿದ್ದಾರೆ.
Advertisement
ದ.ಕ. ಜಿಲ್ಲೆಯಲ್ಲಿ ಒಂದು ದೂರು ಬಂದಿದೆ. ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆಹಾರ ನಿರೀಕ್ಷಕರ ಮೂಲಕ ಆಗಿಂದಾಗೆ ದಾಳಿ ಮಾಡಿಸುತ್ತಿರುತ್ತೇವೆ. ಕಾಳಸಂತೆಯಲ್ಲಿ ಪಡಿತರದ ಮಾರಾಟ – ಖರೀದಿ ಎರಡೂ ಗಂಭೀರ ಅಪರಾಧ. ಅಂಥವರ ಕಾರ್ಡ್ ರದ್ದು ಮಾಡುವ ಜತೆಗೆ ಖರೀದಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.– ಮೊಹಮ್ಮದ್ ಐಸಾಕ್, ಕೆ.ಪಿ. ಮಧುಸೂದನ್,
ಉಪ ನಿರ್ದೇಶಕರು,
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಡುಪಿ, ದ.ಕ.