Advertisement

ಕಾರಿನ ಚಕ್ರಕ್ಕೆ ಎಷ್ಟಿದೆ ಅಂಕ ? ಪರೀಕ್ಷಿಸಿ ಖರೀದಿಸಿ; ಜಾರಿಗೆ ಬರಲಿದೆ ಹೊಸ ನಿಯಮ

02:21 AM Jul 10, 2022 | Team Udayavani |

ರಸ್ತೆ ಅಪಘಾತಗಳನ್ನು  ತಡೆಯಲು ಸರಕಾರ ಕಾನೂನಾತ್ಮಕವಾಗಿ ಎಷ್ಟೇ ಪ್ರಯತ್ನಿಸಿದರೂ ದಿನೇದಿನೇ ಹೆಚ್ಚುತ್ತಲೇ ಇದೆ. 2020ರಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 1,31,714 ಮಂದಿ ಮೃತಪಟ್ಟಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ ವರದಿ ಮಾಡಿದೆ. ಈ ಅಪಘಾತಗಳಿಗೆ ಹಲವು ಕಾರಣಗಳಿವೆ. ಅದರಲ್ಲಿ  ವಾಹನಗಳ ಟಯರ್‌ ಸವೆತವೂ ಒಂದು ಪ್ರಮುಖ ಕಾರಣ.  ರಸ್ತೆ ಸುರಕ್ಷೆಗಾಗಿ ಕಾರ್‌ನಲ್ಲಿ ಏರ್‌ ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿತ್ತು. ಅಲ್ಲದೇ ಏರ್‌ ಬ್ಯಾಗ್‌ಗಳ ಸಂಖ್ಯೆಯನ್ನು 6ಕ್ಕೆ ಹೆಚ್ಚಿಸುವಂತೆ ಸೂಚಿಸಲಾಗಿತ್ತು. ಇತ್ತೀಚೆಗೆ ಸರಕಾರವು ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡಿದ್ದು ಇದರಲ್ಲಿ ಟೈರುಗಳು ಮತ್ತು ಅವುಗಳ ವಿನ್ಯಾಸಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಹೊಸ ಮಾದರಿಯ ಟಯರ್‌ಗಳು ಅ. 1ರಿಂದ ದೇಶಾದ್ಯಂತ ಲಭ್ಯವಾಗಲಿದ್ದು, ಇದನ್ನು ಅಳವಡಿಸಲು 2023ರ ಎ. 1ರ ವರೆಗೆ ಕಾಲಾವಕಾಶವಿದೆ.

Advertisement

ಟಯರ್‌ಗಳಲ್ಲಿ ಮೂರು ವರ್ಗ

ಟಯರ್‌ಗಳಲ್ಲಿ ಮೂರು ವರ್ಗಗಳಿವೆ. ಸಿ1, ಸಿ2 ಮತ್ತು ಸಿ3. ಸಿ1 ವರ್ಗದ ಟಯರ್‌ಗಳನ್ನು ಪ್ರಯಾಣಿಕ ಕಾರುಗಳಲ್ಲಿ ಬಳಸಲಾಗುತ್ತದೆ. ಸಿ2 ವರ್ಗದ ಟಯರುಗಳು ಸಣ್ಣ ವಾಣಿಜ್ಯ ವಾಹನಗಳಿಗೆ ಬಳಸಲಾಗುತ್ತದೆ. ಸಿ3 ವರ್ಗದ ಟಯರ್‌ಗಳು ಭಾರೀ ವಾಣಿಜ್ಯ ವಾಹನಗಳಲ್ಲಿ ಬಳಸಲಾಗುತ್ತದೆ. ಆಟೋಮೋಟಿವ್‌ ಇಂಡಿಯನ್‌ ಸ್ಟಾಂಡರ್ಡ್‌ನ ಹೊಸ ನಿಯಮಗಳು ಮತ್ತು ನಿಯತಾಂಕಗಳು ಈ ಮೂರು ವರ್ಗಗಳ ಟಯರ್‌ಗಳಿಗೆ ಅನ್ವಯವಾಗುವುದು.

ನಿಯತಾಂಕಗಳು ಎಂದರೇನು?

ವಾಹನದ ಚಕ್ರಗಳಲ್ಲಿ ಮೂರು ಭಾಗಗಳಿವೆ. ರೋಲಿಂಗ್‌ ರೆಸಿಸ್ಟೆನ್ಸ್‌, ಒದ್ದೆಯಾದ ಹಿಡಿತ, ರೋಲಿಂಗ್‌ ಸೌಂಡ್‌ ಎಮಿಷನ್ಸ್‌.

Advertisement

ರೋಲಿಂಗ್‌ ಪ್ರತಿರೋಧ

ವಾಹನಗಳ ಚಕ್ರವು ನೆಲದ ಮೇಲೆ ಉರುಳಿದಾಗ ಅದರ ಮೇಲೆ ಅನ್ವಯಿಸಲಾಗುವ ಘರ್ಷಣೆಯನ್ನು ರೋಲಿಂಗ್‌ ಪ್ರತಿರೋಧ ಎಂದು ಕರೆಯಲಾಗುತ್ತದೆ. ವಾಹನ ಮುಂದಕ್ಕೆ ಅಥವಾ ಹಿಂದಕ್ಕೆ ಸಾಗಲು ಬಳಸುವ ಶಕ್ತಿಯನ್ನು ರೋಲಿಂಗ್‌ ಪ್ರತಿರೋಧ ಎನ್ನಲಾಗುತ್ತದೆ. ರೋಲಿಂಗ್‌ ಪ್ರತಿರೋಧ ಕಡಿಮೆ ಇದ್ದರೆ ಟಯರ್‌ಗೆ ಹೆಚ್ಚು ಒತ್ತಡ ಹೇರಬೇಕಾಗಿಲ್ಲ. ಇದರಿಂದ ಪೆಟ್ರೋಲ್‌ ಅಥವಾ ಡಿಸೇಲ್‌ ಬಳಕೆ ಕಡಿಮೆಯಾಗಿ ಮೈಲೇಜ್‌ ಸರಾಸರಿ ಹೆಚ್ಚಾಗುತ್ತದೆ. ಹೊಸ ವಿನ್ಯಾಸದ ಟಯರ್‌ಗಳನ್ನು ತಯಾರಿಸುವ ಕಂಪೆನಿಗಳು ರೋಲಿಂಗ್‌ ಪ್ರತಿರೋಧದ ಮೇಲೆ ಕೆಲಸ ಮಾಡುತ್ತವೆ. ಇದರಿಂದ ಟಯರ್‌ನ ಆಕಾರ, ಗಾತ್ರ ವಾಹನದ  ರೋಲಿಂಗ್‌ ಪ್ರತಿರೋಧವನ್ನು ಕಡಿಮೆ ಮಾಡಬಹುದು.

ಒದ್ದೆಯಾದ ಹಿಡಿತ ಮಳೆಗಾಲದಲ್ಲಿ ಅಥವಾ ರಸ್ತೆ ಒದ್ದೆಯಾಗಿದ್ದರೆ ವಾಹನಗಳು ಜಾರಿ ಬೀಳುವ ಸಾಧ್ಯತೆ ಅಧಿಕವಾಗಿರುತ್ತವೆ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತವೆೆ. ಹೀಗಾಗಿ ಹೊಸ ವಿನ್ಯಾಸದ ಟಯರ್‌ ತಯಾರಕರು ರಸ್ತೆಯಲ್ಲಿ ಒದ್ದೆ ಇದ್ದರೂ ಟಯರ್‌ ಜಾರುವ ಅಪಾಯವಿಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ.

ರೋಲಿಂಗ್‌ ಸೌಂಡ್‌ ಎಮಿಷನ್ಸ್‌

ಕೆಲವೊಮ್ಮೆ ಡ್ರೈವಿಂಗ್‌ ಮಾಡುವಾಗ ಟಯರ್‌ನಿಂದ ಸ್ವಲ್ಪ ಶಬ್ಧ ಬರುತ್ತದೆ. ಇದರಿಂದ ಕಾರು ಹಾಳಾಗುತ್ತಿದೆಯೋ ಇಲ್ಲವೋ ಎಂಬ ಗೊಂದಲ ಕಾಡುತ್ತದೆ. ಹೀಗಾಗಿ ಈ ಶಬ್ಧ ನಿಯಂತ್ರಣದ ಬಗ್ಗೆಯೂ ಗಮನ ಹರಿಸಬೇಕಿದೆ.

ಹೊಸ ನಿಯಮ ಏನು ?

ಪೆಟ್ರೋಲ್‌ ಮತ್ತು ಡಿಸೇಲ್‌ ಉಳಿತಾಯಕ್ಕೆ ಅನು ಗುಣವಾಗಿ ಟಯರು ಗಳಿಗೆ ಸ್ಟಾರ್‌ ರೇಟಿಂಗ್‌ ವ್ಯವಸ್ಥೆಯನ್ನು ತರಲಾಗುತ್ತದೆ. ಪ್ರಸ್ತುತಬಿಐಎಸ್‌ ಅಂದರೆ ಬ್ಯೂರೋ ಆಫ್ ಇಂಡಿಯನ್‌ ಸ್ಟಾಂಡರ್ಸ್‌ ಭಾರತದಲ್ಲಿ ಮಾರಾಟ ಮಾಡುವ ಟಯರು ಗಳ ಗುಣಮಟ್ಟಕ್ಕೆ ನಿಯ ಮಗಳಿವೆ. ಆದರೆ ಗ್ರಾಹಕರು ಖರೀದಿ ವೇಳೆ ಈ ಬಗ್ಗೆ ಮಾಹಿತಿ ಕೇಳುವುದಿಲ್ಲ. ಹೀಗಾಗಿ ಇದು ಮಾರಾಟಗಾರರಿಗೆ ಪ್ರಯೋಜನ ಕೊಡುತ್ತದೆ.

ಏನಿದು ರೇಟಿಂಗ್‌ ವ್ಯವಸ್ಥೆ ?

ರೆಫ್ರಿಜರೇಟರ್‌ ಅಥವಾ ಎಸಿ ಖರೀದಿಸಲು ಹೋದಾಗ ಮೊದಲು ನೋಡುವುದು ರೇಟಿಂಗ್‌. ಇದು ಉತ್ಪನ್ನದ ಗುಣಮಟ್ಟದ ಬಗ್ಗೆ ಹೇಳುತ್ತದೆ. ಇದನ್ನು ಬ್ಯುರೋ ಆಫ್ ಎನರ್ಜಿ ಎಫಿಶಿಯನ್ಸಿ ನೀಡುತ್ತದೆ. ರೇಟಿಂಗ್‌ ನೀಡಿದ ವರ್ಷವೂ ದಾಖಲಾಗಿರುತ್ತದೆ. ಹೊಸದಾಗಿ ವಿನ್ಯಾಸಗೊಳಿಸುವ ಟಯರುಗಳಿಗೆ ಇದೇ ರೀತಿಯ ರೇಟಿಂಗ್‌ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತದೆ. ಖರೀದಿಯ ಮೊದಲು ಈ ರೇಟಿಂಗ್‌ ನೋಡಬಹುದು. ಆದರೆ ಈ  ವ್ಯವಸ್ಥೆ ಯನ್ನು ಹೇಗೆ ಮಾಡಲಾಗುತ್ತದೆ, ಗ್ರಾಹಕರಿಗೆ ಯಾವ ರೀತಿ ಸಹಾಯ ವಾಗುತ್ತದೆ ಎನ್ನುವುದರ ಮಾಹಿತಿಯನ್ನು ನೀಡಲಾಗಿಲ್ಲ,

ಟಯರ್‌ ಖರೀದಿ ವೇಳೆ ಗಮನದಲ್ಲಿರಲಿ

ಟಯರ್‌ ಖರೀದಿಸುವಾಗ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಗಾತ್ರ. ಗಾತ್ರವನ್ನು ತಿಳಿಯಲು ಟಯರ್‌ನ ಬದಿಯಲ್ಲಿ ನೋಡಬಹುದು. ಅದರಲ್ಲಿ (195/55 R 16 87 V) ಎಂದು ಹೇಳಿದ್ದರೆ ಇದರಲ್ಲಿ 195 ಮಿಮೀ ಅಗಲ, 55 ಅಂದರೆ ನಿರೀಕ್ಷಿತ ಎತ್ತರ. ಆರ್‌ ಎಂದರೆ ಟಯರ್‌ನ ರೇಡಿಯಲ್‌ ಮತ್ತು 16 ಎಂದರೆ ಟಯರ್‌ನ ಗಾತ್ರ ಇಂಚುಗಳಲ್ಲಿ, 87 ಎಂದರೆ ಲೋಡ್‌ ಇಂಡೆಕ್ಸಿಂಗ್‌ ಮತ್ತು ವಿ ಎಂದರೆ ಟಯರ್‌ನ ವೇಗದ ರೇಟಿಂಗ್‌.  ಟಯರ್‌ ಬದಲಾಯಿಸಲು ಹೋದಾಗ ಕಂಪೆನಿಯ ಪ್ರಮಾಣಿತ ಗಾತ್ರದ ಟಯರ್‌ ಪಡೆದು ವಾಹನದ ಶಕ್ತಿ, ಮೈಲೇಜ್‌ ಮತ್ತು ಕಾರ್ಯಕ್ಷಮತೆ ಎಷ್ಟಿದೆ ಎಂದು ತಿಳಿದುಕೊಳ್ಳಿ. ಚಕ್ರದ ಹೊರಮೈಯಲ್ಲಿರುವ ಮಾದರಿ ಸರಿಯಾಗಿದೆಯೇ ಎಂದು ಪರೀಕ್ಷಿಸಿ ಆಯ್ಕೆ ಮಾಡಿ. ಚಕ್ರದ ಹೊರಮೈಯಲ್ಲಿರುವ ಟ್ರೆಡ್‌ ಮಾದರಿಯು ಟಯರ್‌ ಹೆಚ್ಚು ಅಥವಾ ಕಡಿಮೆ ನೆಲದ ಹಿಡಿತವನ್ನು ಹೊಂದಲು ಕಾರಣವಾಗುತ್ತದೆ. ಹೀಗಾಗಿ ಮಳೆಯಲ್ಲಿ ಚಾಲನೆ ಮಾಡಿದರೂ ಟಯರ್‌ನ ಉತ್ತಮ ಟ್ರೆಡ್‌ ಮಾದರಿಯು ರಸ್ತೆಯನ್ನು ನೀರಿನಲ್ಲಿಯೂ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಕಾರು ಜಾರಿ ಬೀಳದಂತೆ ತಡೆಯುತ್ತದೆ.

ಆಟೋಮೋಟಿವ್‌ ಇಂಡಿಯನ್‌ ಸ್ಟಾಂಡರ್ಡ್‌ (ಎಐಎಸ್‌) ಎಂದರೇನು?

ದೇಶದಲ್ಲಿ ತಯಾರಾಗುವ ವಾಹನಗಳು ಇಂಡಿಯನ್‌ ಸ್ಟಾಂಡರ್ಡ್‌ (ಐಎಸ್‌) ಮತ್ತು ಆಟೋಮೇಟಿವ್‌ ಇಂಡಿಯನ್‌ ಸ್ಟಾಂಡರ್ಡ್‌ (ಎಐಎಸ್‌) ನಿಯಮಗಳನ್ನು ಅನುಸರಿಸಬೇಕು. ಇದು ವಾಹನದ ವಿನ್ಯಾಸ, ಉತ್ಪಾದನೆ, ನಿರ್ವಹಣೆ ಮತ್ತು ವಾಹನಗಳ ಮರು ಪಡೆಯುವಿಕೆಗಳನ್ನು ನೋಡಿಕೊಳ್ಳುತ್ತದೆ.

ವಿಮೆಯಲ್ಲೂ  ಸಿಗಲಿದೆ ಸುರಕ್ಷೆಯ ಆಯ್ಕೆ

ನಿಧಾನವೇ ಪ್ರಧಾನ ಎನ್ನುವ ಮಾತು ಕೇವಲ ರಸ್ತೆ ಬದಿ ಫ‌ಲಕಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಅದನ್ನು ಪಾಲಿಸುತ್ತಿದ್ದವರು ಬೆರಳೆಣಿಕೆ ಮಂದಿ ಮಾತ್ರ. ಆದರೆ ಇನ್ನು ಬಹುಶಃ ಈ ಸೂತ್ರವನ್ನು ವಾಹನ ಚಾಲನೆ ವೇಳೆ ಅಳವಡಿಸುವವರು ಹೆಚ್ಚಾಗಬಹುದು. ಯಾಕೆಂದರೆ ಇದರಿಂದ ಕೊಂಚ ಹಣ ಉಳಿಸಬಹುದು.

ವಾಹನ ಚಾಲನೆಯ ಆಧಾರದ ಮೇಲೆ ಮೋಟಾರು ವಿಮಾ ಪಾಲಿಸಿಯನ್ನು ಖರೀದಿಸಲು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಸಾಮಾನ್ಯ ವಿಮಾ ಕಂಪೆನಿಗಳಿಗೆ ಟೆಲಿಮ್ಯಾಟಿಕ್ಸ್‌ ಆಧಾರಿತ ಮೋಟಾರು ವಿಮಾ ಕವರ್‌ ಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ.

ಎರಡು ಆಯ್ಕೆ

ಗ್ರಾಹಕರು ತಮ್ಮ ಡ್ರೈವಿಂಗ್‌ ನಡವಳಿಕೆಯ ಆಧಾರದಲ್ಲಿ ಮೋಟಾರು ವಿಮೆ ಪಾಲಿಸಿಯನ್ನು ಖರೀದಿ ಮಾಡಬಹುದು. ಇದರಲ್ಲಿ ನೀವು ಚಾಲನೆ ಮಾಡಿದಂತೆ (ಪೇ ಆ್ಯಸ್‌ ಯೂ ಡ್ರೈವ್‌) ಪಾವತಿಸಿ ಮತ್ತು ನೀವು ಚಾಲನೆ ಮಾಡುವ ರೀತಿಯ ಆಧಾರ (ಪೇ ಹೌ ಯು ಡ್ರೈವ್‌)ದಲ್ಲಿ ಪಾವತಿಸಿ ಎನ್ನುವ ಎರಡು ಆಯ್ಕೆಗಳಿರುತ್ತವೆ. ವಿಮೆದಾರನು ಎಷ್ಟು ಮತ್ತು ಹೇಗೆ ಡ್ರೈವ್‌ ಮಾಡುತ್ತಾನೆ ಎಂಬುದರ ಆಧಾರದ ಮೇಲೆ ಪ್ರೀಮಿಯಂ ಪಾವತಿಸಲು ಅವಕಾಶವಿದೆ. ಇದು ಕಡಿಮೆ ವಾಹನ ಓಡಿಸುವವರು, ಸುರಕ್ಷಿತ ಮತ್ತು ಅಪಘಾತ ರಹಿತ ಚಾಲನೆ ಮಾಡುವವರಿಗೆ ಹೆಚ್ಚು ಲಾಭದಾಯಕವಾಗಿರುತ್ತದೆ.

ಇನ್ನು ವಾಹನ ವಿಮೆಯಲ್ಲಿ  ಕಾರಿನ ಸುರಕ್ಷೆಗೆ ಆದ್ಯತೆ ನೀಡಲಾಗುತ್ತದೆ. ಕಾರಿನಲ್ಲಿ ಕಳ್ಳತನ ಮಾಡಲು ಸಾಧ್ಯವಿಲ್ಲದ ಸಾಧನಗಳಿದ್ದರೆ ವಿಮೆ ಗಾರರು ಪ್ರೀಮಿಯಂನಲ್ಲಿ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಈ ಸಾಧನ ವನ್ನು ಆಟೋಮೋಟಿವ್‌ ರಿಸರ್ಚ್‌ ಅಸೋಸಿ ಯೇಶನ್‌ ಆಫ್ ಇಂಡಿಯಾ ಅನುಮೋದಿಸಿರಬೇಕು.

ಕಡ್ಡಾಯ ಕಡಿತ

ಬಹುತೇಕ ಎಲ್ಲ ವಿಮೆ ಪಾಲಿಸಿಗಳು ಕಡ್ಡಾಯ ಕಡಿತವನ್ನು ಹೊಂದಿವೆ. ಇದು ವಿಮಾದಾರನು ಭರಿಸಬೇಕಾದ ಕ್ಲೈಮ್‌ ಮೊತ್ತವಾಗಿದೆ. ಕಡ್ಡಾಯ ಕಡಿತ ಮೊತ್ತವನ್ನು ವಿಮಾ ಕಂಪೆನಿ ನಿರ್ಧರಿಸುತ್ತದೆ. ಇದು ಪ್ರೀಮಿಯಂ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಹೆಚ್ಚಿನ ಕಡಿತಗಳು ಮತ್ತು ನಷ್ಟಗಳ ಸಮಯದಲ್ಲಿ ನೀವು ಹೆಚ್ಚಿನ ಮೊತ್ತವನ್ನು ಭರಿಸಲು ಸಿದ್ಧರಿದ್ದರೆ ಪ್ರೀಮಿಯಂ ವೆಚ್ಚವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ವಾಹನ ವಿಮೆ ಎರಡು ಅಂಶಗಳನ್ನು ಒಳಗೊಂಡಿ ರುತ್ತದೆ. ಥರ್ಡ್‌ ಪಾರ್ಟಿ ಕವರ್‌ ಮತ್ತು ಸ್ವಂತ ಹಾನಿ ಕವರ್‌. ರಸ್ತೆಯಲ್ಲಿ ವಾಹನ ಚಲಾಯಿಸಲು ಥರ್ಡ್‌ ಪಾರ್ಟಿ ಕವರ್‌ ಕಡ್ಡಾಯವಾಗಿದೆ. ಆದರೆ ಸ್ವಂತ ಹಾನಿ ಸ್ವಯಂಪ್ರೇರಿತವಾಗಿರುತ್ತದೆ. ನಿಮ್ಮ ಕಾರು 10 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ, ನೀವು ಈ ಘಟಕವನ್ನು ಬಿಟ್ಟು ಬಿಡಬಹುದು ಮತ್ತು ಮೂರನೇ ವ್ಯಕ್ತಿಯ ಕವರ್‌ ಅನ್ನು ಮಾತ್ರ ತೆಗೆದುಕೊಳ್ಳುವ ಮೂಲಕ ಪ್ರೀಮಿಯಂ ಅನ್ನು ಉಳಿಸಬಹುದು.

ವಿವಿಧ ವಾಹನ ಒಂದೇ ಪಾಲಿಸಿ

ಇನ್ನು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿದವರು ಪ್ರಸ್ತುತ ಆರೋಗ್ಯ ವಿಮೆ ತೆಗೆದುಕೊಳ್ಳುವಂತೆ ಫ್ಲೋಟರ್‌ ಮೋಟರ್‌ ವಿಮೆಯನ್ನು ತೆಗೆದುಕೊಳ್ಳಬಹುದು. ಇದರಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿರುವವರು ವಿವಿಧ ವಾಹನಗಳಿಗೆ ಪ್ರತ್ಯೇಕ ಪಾಲಿಸಿಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಪ್ರೀಮಿಯಂ ಸಾಂಪ್ರದಾಯಿಕ ಪಾಲಿಸಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ ಇದು ಹೆಚ್ಚು ಪಾಲಿಸಿಗಳನ್ನು ಖರೀದಿಸುವುದಕ್ಕಿಂತ ಅಗ್ಗವಾಗಿರುತ್ತದೆ. ಅಲ್ಲದೇ ಯಾವುದೇ ಕ್ಲೈಮ್‌ ಮಾಡದೇ ಇದ್ದರೆ ವಿಮಾ ಕಂಪೆನಿಯು ನೋ ಕ್ಲೈಮ್‌ ಬೋನಸ್‌ ಅನ್ನು ನೀಡುತ್ತದೆ. ಇದು ಶೇ. 20ರಿಂದ ಪ್ರಾರಂಭವಾಗುತ್ತದೆ. ಇದರಿಂದ ಕ್ಲೈಮ್‌ ಮುಕ್ತ ವರ್ಷಗಳಲ್ಲಿ ನೋ ಕ್ಲೈಮ್‌ ಬೋನಸ್‌ ಅನ್ನು ಪಡೆಯಬಹುದು.

– ವಿದ್ಯಾ ಇರ್ವತ್ತೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next