ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್ ನಿಯಂತ್ರಣ ಹಿನ್ನೆಲೆಯಲ್ಲಿ ಜಾರಿಯಾಗಿರುವ “ವಾರಾಂತ್ಯದ ಕರ್ಫ್ಯೂ’ನ ಎರಡನೇ ವಾರದ ಮೊದಲ ದಿನ ಪೊಲೀಸರು ಕಟ್ಟುನಿಟ್ಟಾಗಿ ಪಾಲನೆ ಮಾಡಿದರು. ಈ ನಡುವೆಯೂ ವೃದ್ಧರೊಬ್ಬರ ಮನವಿಗೆ ಸ್ಪಂದಿಸಿದ ಪೊಲೀಸರು ಮಾನವಿಯತೆ ಮೆರೆದರು. ಜತೆಗೆ ಒಂದೆರಡು ಸ್ವಾರಸ್ಯಕರ ಘಟನೆಗಳು ವರದಿಯಾಗಿವೆ.
ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ವಿರುದ್ಧ ನಿರ್ದಾಕ್ಷಣ್ಯ ಕ್ರಮಕೈಗೊಂಡು, ವಾಹನ ಜಪ್ತಿ ಮಾಡಿದರು. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕನಿಷ್ಠ 8-10 ಕಡೆಗಳಲ್ಲಿ ವಾಹನ ತಪಾಸಣೆಗಾಗಿಯೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಶುಕ್ರವಾರ ರಾತ್ರಿ 10 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ತಪಾಸಣೆ ನಡೆಸಿದರು.
ನಂತರ ಶನಿವಾರ ಮುಂಜಾನೆ 5 ಗಂಟೆಯಿಂದಲೇ ವಾಹನ ತಪಾಸಣೆ ಆರಂಭಿಸಿ, ಜಪ್ತಿ ಮಾಡಿದರು. ಈ ವಾಹ ನಗಳ ವಿರುದ್ಧ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬ ಮಾಹಿತಿ ಸಂಗ್ರಹಿಸಿ, ನ್ಯಾಯಾಲಯಕ್ಕೆ ವರದಿ ನೀಡಲಿದ್ದಾರೆ. ನಂತರ ಸಂಚಾರ ನಿಯಮ ಉಲ್ಲಂಘನೆ ದಂಡದ ಜತೆಗೆ ಕೊರೊನಾ ನಿಯಮ ಉಲ್ಲಂಘನೆ ದಂಡವು ಪಾವತಿಸಿಬಿಡುಗಡೆ ಮಾಡಿಕೊಳ್ಳಬೇಕು. ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ನಗರದಲ್ಲಿ 42 ವಾಹನಗಳ( ಬೈಕ್, ಕಾರು, ಆಟೋ ಸೇರಿ) ಜಪ್ತಿ ಮಾಡಿದ್ದಾರೆ.
ಮದುವೆಗೆ ಎಂದು ಸುಳ್ಳು: ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಮಹಿಳೆಯರು ಸೇರಿ ಐವರು ಮೈಸೂರು ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಪೊಲೀಸರು ತಡೆದು ಪರಿಶೀಲಿಸಿದಾಗ ಮದುವೆ ಆಹ್ವಾನ ಪತ್ರಿಕೆ ಇರಲಿಲ್ಲ. ಬಳಿಕ ಪರಿಶೀಲಿಸಿದಾಗ ಯಾವುದೇ ಮದುವೆಗೆ ಹೋಗುತ್ತಿರಲಿಲ್ಲ. ಸುಮ್ಮನೆ ಹೊರಗಡೆ ಬಂದಿದ್ದಾರೆ ಎಂಬುದು ಗೊತ್ತಾಗಿದೆ. ನಂತರ ಕಾರು ಜಪ್ತಿ ಮಾಡಲಾಗಿದೆ. ಐವರು ಆಟೋದಲ್ಲಿ ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ಮತ್ತೂಂದು ಘಟನೆಯಲ್ಲಿ ಯುವಕನೊಬ್ಬ ತಾನೂ ಝೋಮ್ಯಾಟೋದಲ್ಲಿ ಫುಡ್ ಡೆಲಿವರಿ ಬಾಯ್ ಆಗಿದ್ದೇನೆ ಎಂದು ಹೇಳಿದ್ದಾನೆ.
ಆದರೆ, ಆತನ ಬ್ಯಾಗ್ ಪರಿಶೀಲಿಸಿದಾಗ ಫುಡ್ ಇರಲಿಲ್ಲ. ಅದನ್ನು ಪ್ರಶ್ನಿಸಿದಾಗ ಪರಿಚಯಸ್ಥರ ವಾಹನ ತಂದಿರುವುದಾಗಿ ಗೊತ್ತಾಗಿದೆ. ಅದನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.