ಲಕ್ಷ್ಮೇಶ್ವರ (ಗದಗ) : ಚಲಿಸುತ್ತಿದ್ದ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಜಿಲ್ಲೆಯ ಲಕ್ಷ್ಮೇಶ್ವರದ ಅಡಕರಕಟ್ಟಿ ಗ್ರಾಮದ ಬಳಿ ನಡೆದಿದೆ.
ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷ್ಮೇಶ್ವರ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಅವರ ಜೊತೆಯಲ್ಲಿದ್ದವರೊಬ್ಬರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಲಕ್ಷ್ಮೇಶ್ವರ ತಾಲೂಕು ಪಂಚಾಯ್ತಿ ಅಧ್ಯಕ್ಷ ಪರಸಪ್ಪ ಇಮ್ಮಡಿ ಅವರು ತಮ್ಮ ಕಾರಿನಲ್ಲಿ ಸ್ವಗ್ರಾಮ ಬಟ್ಟೂರಿನಿಂದ ಲಕ್ಷ್ಮೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅರಕಟ್ಟಿ ಬಳಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
ಇದರಿಂದ ಆತಂಕಗೊಂಡ ಪರಸಪ್ಪ ಇಮ್ಮಡಿ ಹಾಗೂ ಮತ್ತೊಬ್ಬರು ತಕ್ಷಣ ಕಾರಿನಿಂದ ಕೆಳಗಿಳಿದರು. ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸುವ ಕಾರ್ಯಕ್ಕೆ ಕೈಹಾಕಿದರು. ಆದರೆ ಅಷ್ಟೊತ್ತಿಗಾಗಲೇ ಕಾರು ಬಹುತೇಕ ಸುಟ್ಟು ಹೋಗಿತ್ತು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಲಕ್ಷ್ಮೇಶ್ವರ ಠಾಣೆ ಪೊಲೀಸರು ಘಟನೆಯ ಮಾಹಿತಿಯನ್ನು ಪಡೆದುಕೊಂಡು ಪರಿಶೀಲನೆ ನಡೆಸಿದರು.