Advertisement
112 ವಿಧದ ಒಟ್ಟು 580 ಕಾರುಗಳಿದ್ದು ಅವೆಲ್ಲವೂ ಚಾಲನೆಗೆ ಸಮರ್ಥವಾಗಿವೆ. ಕಾರಿನ ಸಂಗ್ರಹ ಶುರುವಾಗಿದ್ದು 1957ರಲ್ಲಿ. ಅನಿವಾರ್ಯ ಕಾರಣಗಳಿಂದ 1977ರಲ್ಲಿ ಸಂಗ್ರಹ ಸ್ಥಗಿತಗೊಳಿಸಬೇಕಾಯ್ತು. ಇಲ್ಲದಿದ್ದರೆ ಇಂದು ಅಲ್ಲಿ ಸಹಸ್ರಾರು ಮಾದರಿಯ ಕಾರುಗಳಿರುತ್ತಿದ್ದವು. ಹಾಗಿದ್ದರೂ ಜಗತ್ತಿನ ಪ್ರತಿಷ್ಠಿತ ಕಾರು ಸಂಗ್ರಹಾಲಯಗಳ ಸಾಲಿನಲ್ಲಿ ಷ್ಲುಂಫ್ ಮೊದಲಿದೆ.
ಈ ಸಂಗ್ರಹಾಲಯ ಸ್ಥಾಪಿಸಿದ್ದು, ಇಟಲಿಯ ಕಾನ್ಸ್ ಷ್ಲುಂಫ್ ಮತ್ತು ಫ್ರಿಟ್ಸ್ ಷ್ಲುಂಫ್ ಸಹೋದರರು. ತಾಸಿಗೆ 480 ಕಿ. ಮೀ ಸಾಮರ್ಥ್ಯದ ಬುಗಾಟ್ಟಿ ಕಾರಿನೊಂದಿಗೆ 1942ರಲ್ಲಿ ಸಂಗ್ರಹ ಶುರುವಾಯ್ತು. 1957ರ ಬಳಿಕ ಬೇರೆ ಬೇರೆ ಕಾರುಗಳನ್ನು ಸಂಗ್ರಹಾಲಯ ಸೇರಿದವು. 1963ರಲ್ಲಿ ಅಮೆರಿಕದ ಷೇಕ್‌ಸ್ಪಿಯರ್ ಎಂಬ ಸಂಗ್ರಾಹಕನಿಂದ 30 ಕಾರುಗಳನ್ನು ಸಂಗ್ರಹಿಸಿದರು. ಫ್ರಾನ್ಸ್‌ನ ಬೇರೆ ಬೇರೆ ಕಂಪನಿಗಳ 102 ಕಾರುಗಳು ಸೇರಿಕೊಂಡವು. ಸ್ವಿಜರ್ಲಂಡ್, ಇಂಗ್ಲೆಂಡ್, ಇಟಲಿ, ಜರ್ಮನಿ, ಅಮೆರಿಕಗಳ ಕಾರುಗಳೂ ಸಂಗ್ರಹವಾದವು. ಅಂತಾರಾಷ್ಟ್ರೀಯ ಕಾರು ಸಂಗ್ರಾಹಕರ ಕ್ಲಬ್ ಒಂದನ್ನು ಸ್ಥಾಪಿಸಿ ಅದರ ಸದಸ್ಯರ ಮೂಲಕ ಕೆಲವು ಕಾರುಗಳನ್ನು ವಿನಿಮಯವೂ ಮಾಡಿಕೊಂಡರು. ಮೊದಲು ಜವಳಿ ಕಾರ್ಖಾನೆಯಲ್ಲೇ ಕಾರು ಸಂಗ್ರಹವಾಗುತ್ತಿತ್ತು. ಕೊಂಡ ಕಾರುಗಳನ್ನು ಸುಸ್ಥಿಯಲ್ಲಿಡಲು ಷ್ಲುಂಫ್ ಸಹೋದರರು ಒಂದು ಗ್ಯಾರೇಜನ್ನೂ ತೆರೆದರು. ಪ್ರತಿ ಕಾರನ್ನೂ ಚಾಲನೆಗೆ ಅನುಕೂಲಗೊಳಿಸಿದರು. ಕಾರು ಖರೀದಿಗಾಗಿ ಹತ್ತು ವರ್ಷಗಳಲ್ಲಿ 12 ಮಿಲಿಯನ್ ಫ್ರೆಂಚ್ ಫ್ರಾಂಕ್‌ಗಳಾಯಿತಂತೆ.
Related Articles
ಮರ್ಸಿಡಿಸ್ ಬೆಂಝ್, ಬುಗಾಟ್ಟಿ ಮಾಸೆರೋಟಿ, ಯುದ್ಧಪೂರ್ವದ ಪ್ರಿಕ್ಸ್, ರಾಯಲ್, ರೋಯಾಲ್ ಎಸ್‌ಡೆಲ್, ಎಬಿಸಿ, ಅಲ್ಫಾರೋಮಿಯಾ, ಅಮಿಲ್ಕರ್, ಸಿಕೊಲೊ, ಪೋರ್ಷೆ, ರಾವೆಲ್, ಗೋರ್ಡೆನೀಸ್ ಬ್ಲೂ ಹೀಗೆ ನಾವು ಹೆಸರೇ ಕೇಳಿರದ ಕಂಪನಿಗಳ ನಾನಾ ಗಾತ್ರ, ವೈಶಿಷ್ಟ್ಯದ ಕಾರುಗಳಿವೆ ಇಲ್ಲಿ. 1942ರಲ್ಲಿ ಪಾಲ್ ಅಲೈìನ್ಸ್ ವಿನ್ಯಾಸಗೊಳಿಸಿದ ಅಲ್ಯುಮಿನಿಯಂ ಕವಚದ ಕೋಳಿ ಮೊಟ್ಟೆಯ ಆಕಾರದ ಕಾರೂ ಇವುಗಳಲ್ಲೊಂದು.
Advertisement
ಪ್ರತಿಭಟನೆಯಿಂದ ತೆರವಾಯಿತು ವಸ್ತು ಸಂಗ್ರಹಾಲಯ ಆದರೆ 1977ರಲ್ಲಿ ಕಾರ್ಮಿಕ ಸಂಘಟನೆ, ಷ್ಲುಂಫ್ ಸಹೋದರರ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ನೌಕರರನ್ನು ವೇತನದ ವಿಷಯದಲ್ಲಿ ಎತ್ತಿ ಕಟ್ಟಿದರು. 2000 ಕಾರ್ಮಿಕರು ಲಾಕೌಟ್ ಮಾಡಿ ಪ್ರತಿಭಟನೆ ನಡೆಸಿದರು. ಅಮೂಲ್ಯವಾದ ಒಂದು ಕಾರನ್ನು ಸುಟ್ಟು ಹಾಕಿದರು. ಸಹೋದರರು ಅವರ ಬೇಡಿಕೆಗಳನ್ನು ಈಡೇರಿಸಲಾಗದೆ ಸ್ವಿಟ್ಜರ್‌ಲೆಂಡ್‌ಗೆ ಪಲಾಯನ ಮಾಡಿದರು. ಕಾರ್ಮಿಕರು ಕಾರು ಸಂಗ್ರಹಾಲಯವನ್ನು ಬಾಗಿಲು ತೆರೆದು ಪ್ರದರ್ಶನಕ್ಕಿಟ್ಟರು. ಮೊದಲ ವರ್ಷ 80 ಸಾವಿರ ಜನರು ಶುಲ್ಕ ಕೊಟ್ಟು ಈ ಅದ್ಭುತ ಸಂಗ್ರಹವನ್ನು ವೀಕ್ಷಿಸಿದರು. ನಂತರ ಫ್ರಾನ್ಸ್ ಸರಕಾರ ಇದೊಂದು ರಾಷ್ಟ್ರೀಯ ಪರಂಪರೆಯ ಐತಿಹಾಸಿಕ ಸಂಗ್ರಹವೆಂದು ಪರಿಗಣಿಸಿ ಕಾರು ಸಂಗ್ರಹಾಲಯವನ್ನು ವಶಕ್ಕೆ ತೆಗೆದುಕೊಂಡಿತು. 1982ರಲ್ಲಿ ಅಟೊಮೊಬೈಲ್ ಮ್ಯೂಸಿಯಂ ಎಂಬ ಹೆಸರಿನಲ್ಲಿ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿತು. 1999ರಲ್ಲಿ ಸರಕಾರವು ಷ್ಲುಂಫ್ ಸಹೋದರರ ಕಾರ್ಖಾನೆಯ ಹೊರಭಾಗದಲ್ಲಿ ಕಾರುಗಳ ಸಂಗ್ರಹಕ್ಕೆ ವಿಶಾಲವಾದ ಆಧುನಿಕ ಸೌಲಭ್ಯಗಳಿರುವ ಸ್ಥಳವನ್ನು ಏರ್ಪಡಿಸಿ ಅವರ ತಾಯಿಗೆ ಈ ಸಂಗ್ರಹಾಲಯವನ್ನು ಸಮರ್ಪಿಸಿದೆ. ಹತ್ತು ವರ್ಷಗಳಲ್ಲಿ 4 ದಶಲಕ್ಷ ಜನ ಸಂಗ್ರಹವನ್ನು ವೀಕ್ಷಿಸಿದ್ದಾರೆ. ರಜಾ ದಿನಗಳ ಹೊರತು ಎಲ್ಲ ದಿನಗಳಲ್ಲೂ ಅದರ ವೀಕ್ಷಣೆಗೆ ಅವಕಾಶವಿದೆ. * ಪ. ರಾಮಕೃಷ್ಣ ಶಾಸ್ತ್ರಿ