ಬೆಂಗಳೂರು: ನಗರ ಸಶಸ್ತ್ರ ಮೀಸಲು ಪಡೆ(ಸಿಎಆರ್) ಪಶ್ಚಿಮ ಘಟಕದ ಆವರಣದಲ್ಲಿರುವ ಶಸ್ತ್ರಗಾರಕ್ಕೆ ನುಗ್ಗಿ ದಾಂಧಲೆ ನಡೆಸಿದಲ್ಲದೆ, ಕರ್ತವ್ಯ ನಿರತ ಕಾನ್‌ಸ್ಟೆàಬಲ್ ಮೇಲೆ ಹಲ್ಲೆ ನಡೆಸಿದ 20 ಮಂದಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಸಿಎಆರ್‌ನ ಕಾನ್ ಸ್ಟೇಬಲ್ ರುದ್ರೇಶ್ ನಾಯ್ಕ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಏನಿದು ಘಟನೆ?: ಉಲ್ಲಾಳ ಉಪನಗರ ಬಳಿ ನಗರ ಸಶಸ್ತ್ರ ಮೀಸಲು ಪಡೆಯ ಪಶ್ಚಿಮ ಘಟಕದಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರುದ್ರೇಶ್ ನಾಯ್ಕ, ಫೆ.8ರಂದು ಬೆಳಗ್ಗೆ 8 ಗಂಟೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ಬೆಳಗ್ಗೆ 10 ಗಂಟೆ ಸುಮಾರಿಗೆ ಸುಮಾರು 15-20 ಮಂದಿ ಸ್ಥಳಕ್ಕೆ ಬಂದು, “ಈ ಶಸ್ತ್ರಗಾರ ಜಾಗ ನಮಗೆ ಸೇರಿದ್ದು, ಈ ಕೂಡಲೇ ನೀವು ಜಾಗ ಖಾಲಿ ಮಾಡಬೇಕು’ ಎಂದು ಏರುಧ್ವನಿಯಲ್ಲಿ ಕೂಗಾಡಿದ್ದಾರೆ. ಜತೆಗೆ ರುದ್ರೇಶ್ ನಾಯ್ಕ ಅವರ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಈ ಸ್ವತ್ತು ಇಂದಿನಿಂದ ನಮಗೆ ಸೇರಿದ್ದು, ಯಾರಾದರೂ ಈ ಸ್ವತ್ತಿನ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೊರ ನಡೆದಿದ್ದಾರೆ. ಆ ಬಳಿಕ ಶಸ್ತ್ರಗಾರದಿಂದ ಹೊರಗಡೆ ಬಂದಾಗ ಅಲ್ಲಿಯೂ 60ಕ್ಕೂ ಹೆಚ್ಚು ಮಂದಿ ಗುಂಪು ಸೇರಿದ್ದರು. ಜತೆಗೆ 4 ಜೆಸಿಬಿಗಳು, 2 ಕ್ಯಾಂಟರ್, 1 ಲಾರಿ ಮತ್ತು 1 ನೀರಿನ ಟ್ಯಾಂಕರ್‌ಗಳನ್ನು ಸ್ಥಳಕ್ಕೆ ತರಿಸಿಕೊಂಡಿದ್ದರು. ಹೀಗಾಗಿ ಜಾಗದ ವಿಚಾರವಾಗಿ ತನ್ನ ಮೇಲೆ ಹಲ್ಲೆ ನಡೆಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರುದ್ರೇಶ್ ನಾಯ್ಕ ದೂರಿನಲ್ಲಿ ಕೋರಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಿವಾದದಲ್ಲಿ ಶಸ್ತ್ರಾಗಾರ ಜಾಗ
ಉಲ್ಲಾಳ ಉಪನಗರದಲ್ಲಿರುವ ಪಶ್ಚಿಮ ಸಿಎಆರ್ ಆವರಣದಲ್ಲಿರುವ ಶಸ್ತ್ರಾಗಾರ ಇರುವ ಜಾಗ ವಿವಾದದಲ್ಲಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ಹೈಕೋರ್ಟ್ ಆರೋಪಿಗಳ ಪರವಾಗಿ ಆದೇಶ ನೀಡಿತ್ತು ಎಂದು ಹೇಳಲಾಗಿದೆ. ಹೀಗಾಗಿ ಆರೋಪಿಗಳು ಶಸ್ತ್ರಗಾರಕ್ಕೆ ನುಗ್ಗಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.