Advertisement

ಕಾರು, ಮನೆಯೂ ಈಗ ನನಗೆ ಡಿಸಿ ಕಚೇರಿ: ಶಶಿಕಾಂತ ಸೆಂಥಿಲ್‌

06:00 AM May 10, 2018 | |

ಮಂಗಳೂರು: ಒಂದು ಕಡೆ ಪಕ್ಷಗಳು ಹಾಗೂ ಅಭ್ಯರ್ಥಿಗಳು ಗೆಲುವು ಸಾಧಿಸುವುದಕ್ಕೆ ಕಸರತ್ತು, ಅಬ್ಬರದ ಪ್ರಚಾರ ಮತ್ತು ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದರೆ, ಇನ್ನೊಂದೆಡೆ ಯಾವುದೇ ಗೊಂದಲ, ಅಕ್ರಮಗಳಿಗೆ ಅವಕಾಶ ನೀಡದೆ ಇಡೀ ಚುನಾವಣೆಯ ಸುಸೂತ್ರ ನಿರ್ವಹಣೆಯ ಹೊಣೆ ಆಯಾ ಜಿಲ್ಲಾಧಿಕಾರಿಗಳ ಮೇಲಿರುತ್ತದೆ.

Advertisement

ಚುನಾವಣೆ ದಿನಾಂಕ ಘೋಷಣೆಯಾದ ಅನಂತರ ಮತದಾನ ನಡೆಯುವ ವರೆಗಿನ ದಿನಗಳಲ್ಲಿ ಒಬ್ಬ ಜಿಲ್ಲಾಧಿಕಾರಿ ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯಾಗಿಯೂ ಹೇಗೆ ಕೆಲಸ ಮಾಡುತ್ತಾರೆ ಎನ್ನುವ ಕುತೂಹಲ ಹಲವರಿಗೆ ಇರಬಹುದು. ಇದಕ್ಕೆ ಉತ್ತರವಾಗಿ
ದ. ಕನ್ನಡದ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ. 

ಪ್ರಜಾಪ್ರಭುತ್ವ ಹಬ್ಬ: ಚುನಾವಣೆ ನಡೆಸುವುದು ಪ್ರಜಾಪ್ರಭುತ್ವದ ಬಹುದೊಡ್ಡ ಇವೆಂಟ್‌ ಮ್ಯಾನೇಜ್‌ಮೆಂಟ್‌. ನಿಜಕ್ಕೂ ಇದು ಪ್ರಜಾಪ್ರಭುತ್ವದ ಹಬ್ಬ. ಇದನ್ನು ಎಷ್ಟು ಸಾಧ್ಯವೋ ಅಷ್ಟು ಯಶಸ್ವಿ ಗೊಳಿಸಬೇಕಿದೆ. ಅದಕ್ಕಾಗಿ ನಮ್ಮ ಅಧಿಕಾರಿಗಳ ತಂಡ ಕೆಲಸ ಮಾಡುತ್ತಿದೆ.

ಕಾರಲ್ಲೇ ಬಹುತೇಕ ಕೆಲಸ: “ನನ್ನ ಬಹುತೇಕ ಕೆಲಸಗಳು ಸಂಚರಿಸುವ ಕಾರಿನಲ್ಲಿಯೇ ನಡೆಯುತ್ತವೆ. ಕಾರಲ್ಲಿ ಹೋಗುವಾಗಲೇ ಮೊಬೈಲ್‌ ಸಹಾಯದಿಂದಲೇ ಬಹುತೇಕ ಕೆಲಸ ಮಾಡುತ್ತೇನೆ. ಉಳಿದಂತೆ ಮುಂಜಾನೆ ಎದ್ದ ಕೂಡಲೇ ಎಲ್ಲ ಆರ್‌ಒಗಳ ಜತೆಗೆ ಮಾತುಕತೆ ನಡೆಯುತ್ತದೆ. ಉಳಿದಂತೆ ಕಚೇರಿಯಲ್ಲಿರುವಾಗ ಇತರ ಕೆಲಸ ಗಳಿಗೆ ಒತ್ತು ನೀಡುತ್ತೇನೆ. ವಿವಿಧ ವಿಭಾಗಗಳ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಸೂಚನೆ ನೀಡುತ್ತೇನೆ. ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗದ ಉಸ್ತುವಾರಿ ಈ ಎರಡರಲ್ಲೂ ಯಾವುದೇ ವ್ಯತ್ಯಾಸ ಆಗದಂತೆ ಜವಾಬ್ದಾರಿ ನಿರ್ವಹಿಸಲಾಗುತ್ತದೆ.’

ಎಲ್ಲವೂ ವೇಳಾಪಟ್ಟಿ ಪ್ರಕಾರ: ರಾತ್ರಿ ಮನೆಗೆ ಹೋದ ಕೂಡಲೇ ಮರುದಿನದ ಕೆಲಸ ಹಾಗೂ ಸಮಯ ಹೊಂದಿಸುವ ಚಾರ್ಟ್‌ ಸಿದ್ಧಪಡಿಸುತ್ತೇನೆ. ಜಿಲ್ಲಾ ಮುಖ್ಯ ಚುನಾವಣಾಧಿಕಾರಿಯಾಗಿ ನನ್ನ ಪಾಲಿಗೆ ಈಗ ಕಾರು-ಮನೆಯೇ ಡಿಸಿ ಕಚೇರಿಯಾಗಿದೆ. 

Advertisement

ಪಕ್ಷಗಳು ಸಹಕರಿಸುತ್ತಿವೆ: ಪಕ್ಷದವರು ನಿಯಮ ಬದ್ಧವಾಗಿ ಪ್ರಚಾರದಲ್ಲಿದ್ದಾರೆ. ಅದರಲ್ಲೂ ಚುನಾವಣೆ ಘೋಷಣೆಯಾದ ತತ್‌ಕ್ಷಣದಿಂದ ಎಲ್ಲ ಪಕ್ಷದವರು ಜಿಲ್ಲಾಡಳಿತದ ಕಾರ್ಯಯೋಜನೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ವಿಶೇಷ ಅಭಿಯಾನ ಕಾರ್ಯಕ್ರಮವನ್ನು ಮುಕ್ತವಾಗಿ ಮಾಡಲು ಸಾಧ್ಯವಾಗಿದೆ. ಬೇರೆಡೆ ಇಂಥ ಸ್ಥಿತಿ ಅಪರೂಪ. 

ಸೋತವರು ಶ್ಲಾಘಿಸಬೇಕು: ಡಿಸಿ ಕರ್ತವ್ಯ ಜತೆಗೆ ಚುನಾವಣಾ ಉಸ್ತುವಾರಿ ನಿಭಾಯಿಸ ಬೇಕಾಗುತ್ತದೆ. ಲೋಪ ಇಲ್ಲದಂತೆ ಚುನಾವಣೆ ನಿರ್ವಹಿಸಲು ಕಷ್ಟ. ಆದರೆ ನಿಷ್ಪಕ್ಷ ಚುನಾವಣೆ ನಡೆಸುವುದು ಮುಖ್ಯ. ಗೆದ್ದವರು ನನ್ನ ಬಳಿಗೆ ಬಂದು ಈ ಸಲ ಚುನಾವಣೆ ಅತ್ಯಂತ ಯಶಸ್ವಿಯಾಗಿದೆ ಎಂದು ಹೇಳುವ ಬದಲು, ಸೋತವರು ಚುನಾವಣೆ ಪರಿಪೂರ್ಣವಾಗಿ ನಡೆದಿದೆ ಎಂದು ಹೇಳಬೇಕು. ಇದು ನನ್ನ ಗುರಿ.

ಪ್ರಾಮಾಣಿಕ ಅಧಿಕಾರಿಗಳ ತಂಡ
ಅಧಿಕಾರಿಗಳಿಗೆ ಪ್ರೇರಣೆ ಹಾಗೂ ಸ್ಫೂರ್ತಿ ನೀಡುವ ಕೆಲಸವನ್ನು ಪ್ರಾಮಾಣಿಕ ವಾಗಿ ಮಾಡುತ್ತಿದ್ದೇನೆ. ನಮ್ಮ ಎಲ್ಲ ಅಧಿಕಾರಿ ವರ್ಗ ಕಾನೂನು, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಯಿಂದ ಕೆಲಸ ನಿರ್ವಹಿಸುತ್ತಾರೆ. ಜಿಲ್ಲೆಯ ಹಿರಿಮೆ ಯೆಂದರೆ, ಎಲ್ಲೆಡೆ ಪ್ರಬುದ್ಧ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚುನಾವಣೆ ಕೆಲಸ ಸಲೀಸಾಗಿ ನಡೆಯುತ್ತಿದೆ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next