Advertisement

ನರಭಕ್ಷಕ ಚಿರತೆ ಸೆರೆಗೆ ಸಮರೋಪಾದಿ ಕೆಲಸವಾಗಲಿ

11:46 PM Jan 23, 2023 | Team Udayavani |

ರಾಜ್ಯದ ನಾನಾ ಕಡೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ಜರಗುತ್ತಲೇ ಇವೆ. ಇತ್ತೀಚಿನ ದಿನಗಳಲ್ಲಂತೂ ಹೊಲ ಮತ್ತು ತೋಟಗಳಿಗೆ ಆನೆ ದಾಳಿ, ಮಾನವರ ಮೇಲೆ ಚಿರತೆ ದಾಳಿಯಂಥ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ಜನವಸತಿ ಪ್ರದೇಶಗಳಿಗೆ ಚಿರತೆಗಳು ದಾಂಗುಡಿ ಇಡುತ್ತಿರುವುದು ಅರಣ್ಯ ಇಲಾಖೆಯನ್ನೇ ಚಿಂತೆಗೀಡು ಮಾಡಿರುವುದರಲ್ಲಿ ಸುಳ್ಳಲ್ಲ.

Advertisement

ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೈಸೂರು ಸುತ್ತಮುತ್ತ ಚಿರತೆ ದಾಳಿಯಂಥ ಘಟನೆಗಳು ಮರುಕಳಿಸುತ್ತಲೇ ಇವೆ. ತಿ.ನರಸೀಪುರ ತಾಲೂಕಿನಲ್ಲಿ ಇದು ಹೆಚ್ಚಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಮಂದಿ ಚಿರತೆ ದಾಳಿಯಿಂದಾಗಿ ಸಾವನ್ನಪ್ಪಿದ್ದಾರೆ. ಅಲ್ಲದೆ ಕಳೆದ ನಾಲ್ಕು ದಿನಗಳಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿರುವುದು ಸುತ್ತಮುತ್ತಲಿನ ಜನರಲ್ಲಿ ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಅತ್ತ ಎಚ್‌.ಡಿ.ಕೋಟೆಯ ಬಳ್ಳೆ ಅರಣ್ಯ ಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯೊಬ್ಬನ ಮೇಲೆ ಹುಲಿಯೊಂದು ದಾಳಿ ಮಾಡಿ ಸಾಯಿಸಿದೆ. ಈ ಘಟನೆಯೂ ಆತಂಕಕ್ಕೆ ಕಾರಣವಾಗಿದೆ.

ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿರುವ ಕಾರಣದಿಂದಾಗಿ ಜನರ ಸಹನೆಯ ಕಟ್ಟೆಯೂ ಒಡೆದಿದೆ. ಹೀಗಾಗಿಯೇ ರವಿವಾರ ತಿ.ನರಸೀಪುರದ ಸುತ್ತಮುತ್ತಲಿನ ಜನ ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಇದರ ನಡುವೆಯೇ, ರವಿವಾರ ಮೈಸೂರಿನಲ್ಲೇ ಇದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವುದಾಗಿ ಹೇಳಿದ್ದಾರೆ. ಜತೆಗೆ ವಿಶೇಷ ತಂಡವನ್ನೂ ರಚಿಸಲು ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಚಿರತೆ ಹಿಡಿಯುವ ಸಲುವಾಗಿ 130 ಅರಣ್ಯ ಸಿಬಂದಿ ಶ್ರಮಿಸುತ್ತಿದ್ದಾರೆ.

ಈಗ ಆತಂಕ ಹೆಚ್ಚಾಗಲು ಕಾರಣ, ತಿ.ನರಸೀಪುರದ ಸುತ್ತ ನಡೆದಿರುವ ನಾಲ್ಕು ಪ್ರಕರಣಗಳಲ್ಲಿ ಮೂರು ಪ್ರಕರಣಗಳಿಗೆ ಸಾಮ್ಯತೆ ಇದೆ. ಅಲ್ಲದೆ ಆರು ಕಿ.ಮೀ.ಗಳ ಅಂತರದೊಳಗೆ ಈ ಮೂರು ಘಟನೆಗಳು ನಡೆದಿವೆ. ಹೀಗಾಗಿ  ಒಂದೇ ಚಿರತೆ ಈ ಎಲ್ಲ ದಾಳಿ ಮಾಡಿ ಮನುಷ್ಯರನ್ನು ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ಅರಣ್ಯ ಇಲಾಖೆಗೆ ಇದೆ. ಸದ್ಯ ಸೆರೆ ಹಿಡಿಯಲು ಸಾಧ್ಯವಾಗದಿದ್ದರೆ, ಚಿರತೆಯನ್ನು ಗುಂಡಿಕ್ಕಿ ಹತ್ಯೆ ಮಾಡುವ ಸಾಧ್ಯತೆಯೂ ಇದೆ.

Advertisement

ಏನೇ ಆಗಲಿ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಮುಗ್ಧರು ಬಲಿಯಾಗುವುದು ಬೇಡ. ಅರಣ್ಯ ಇಲಾಖೆಯು ಬೇಗನೆ ಚಿರತೆಯನ್ನು ಸೆರೆಹಿಡಿಯಬೇಕು. ಇಲ್ಲವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು. ದಿನೇ ದಿನೆ ಹೀಗೆ, ಮಕ್ಕಳು ಮತ್ತು ಮಹಿಳೆಯರು ಚಿರತೆ ದಾಳಿಯಿಂದ ಸಾವನ್ನಪ್ಪಿದರೆ ಈ

ಪ್ರದೇಶದಲ್ಲಿ ಇನ್ನಷ್ಟು ಆತಂಕ ಉಂಟಾಗಬಹುದು. ಜನ ಮನೆಬಿಟ್ಟು ಹೊರಗೇ ಬರದಿರುವಂಥ ಪರಿಸ್ಥಿತಿ ಉದ್ಭವವಾಗಬಹುದು. ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಂಡು ಕಾಟ ಕೊಡುತ್ತಿರುವ ಚಿರತೆಯನ್ನು ಸೆರೆಹಿಡಿಯಲಿ. ಸರಕಾರವೂ ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳೇನು ಎಂಬುದನ್ನು ತಿಳಿದುಕೊಂಡು ಅದನ್ನು ನಿವಾರಿಸುವತ್ತ ಗಮನ ನೀಡಬೇಕು. ಇಲ್ಲದಿದ್ದರೆ, ಜನ ನಂಬಿಕೆಯನ್ನೇ ಕಳೆದುಕೊಂಡಾರು.

Advertisement

Udayavani is now on Telegram. Click here to join our channel and stay updated with the latest news.

Next