ಶ್ರೀರಂಗಪಟ್ಟಣ: ಹಲವು ತಿಂಗಳುಗಳಿಂದ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುವುದಲ್ಲದೇ ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಭಯ ಭೀತರನ್ನಾಗಿಸಿದ್ದ ಮೊಸೆಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ವಿಶ್ವ ವಿಖ್ಯಾತ ರಂಗನತಿಟ್ಟು ಪಕ್ಷಿಧಾಮದ ಆಸುಪಾಸಿನಲ್ಲಿ ಹಲವು ತಿಂಗಳುಗಳಿಂದ ಸಾರ್ವಜನಿಕವಾಗಿ ರಸ್ತೆ ಹಾಗೂ ಜಮೀನುಗಳಲ್ಲಿ ಕಾಣಿಸಿಕೊಂಡು ಸಾಕು ಪ್ರಾಣಿ ಕುರಿ, ಮೇಕೆ ಸೇರಿದಂತೆ ಇತರೆ ಪ್ರಾಣಿಗಳನ್ನು ತಿಂದು ಹಾಕಿ ರೈತರ ಸಂಕಷ್ಟದ ಜೊತೆಗೆ ಆತಂಕಕ್ಕೆ ಕಾರಣವಾಗಿತ್ತು.
ಹಲವು ಬಾರಿ ಮನವಿ: ಈ ಸಂಬಂಧ ರೈತರು ಹಲವು ಬಾರಿ ಮೊಸಳೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಸಂಜೆ ವೇಳೆ ರಂಗನತಿಟ್ಟು ಪಕ್ಷಿಧಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನಿತ್ಯ ಕಾಣಿಸಿಕೊಳ್ಳುತ್ತಿರುವುದನ್ನು ಪ್ರವಾಸಿಗರು ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ವೈರಲ್ ಸಹ ಆಗಿತ್ತು. 7.6 ಅಡಿ ಉದ್ದದ ಮೊಸಳೆ: ಅಧಿಕಾರಿಗಳು ಮೊಸಳೆ ಸೆರೆಡಿಯುವ ಸಲುವಾಗಿ ಬೋನ್ ಇಟ್ಟು, ಕಾರ್ಯಪ್ರವೃತ್ತರಾಗಿದ್ದರು.
ಸೋಮವಾರ ಸಂಜೆ ಸ್ಥಳೀಯ ರೈತರ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಬಲೆ ಸೇರಿದಂತೆ ಇತರೆ ಸಲಕರಣೆಗಳೊಂದಿಗೆ ಸುಮಾರು 35 ರಿಂದ 40 ವರ್ಷದ, 7.6 ಅಡಿ ಉದ್ದದ ಬೃಹದಾಕಾರದ ಮೊಸಳೆ ಸೆರೆಹಿಡಿಯುವ ಮೂಲಕ ರೈತರು ಹಾಗೂ ಸಾರ್ವಜನಿಕರ ಆತಂಕವನ್ನು ಅರಣ್ಯ ಇಲಾಖೆ ಸಿಬ್ಬಂದಿ ದೂರ ಮಾಡಿದ್ದಾರೆ.
ಕಬಿನಿ ಹಿನ್ನೀರಿಗೆ ಮೊಸಳೆ
ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ಮಾತನಾಡಿ, ಬಂಡೀಪುರ ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ವಸೀಮ್‌ಮಿರ್ಜಾ ಅವರಿಂದ ಮೊಸಳೆ ಆರೋಗ್ಯವಾಗಿರುವುದನ್ನ ಖಚಿತಪಡಿಸಿಕೊಳ್ಳಲಾಗಿದೆ. ಈ ಮೊಸಳೆ ಈಗಾಗಲೇ ಸಾರ್ವಜನಿವಾಗಿ ಓಡಾಡಿ ಸಾಕು ಪ್ರಾಣಿಗಳನ್ನು ಕೊಂದು ಹಾಕಿ ಆತಂಕ ಸೃಷ್ಟಿಸಿದ್ದು, ಮತ್ತೆ ಇದೇ ಹಾಸುಪಾಸಿನ ಸ್ಥಳಗಳಲ್ಲಿ ಬಿಡದೇ, ಮೇಲಧಿಕಾರಿಗಳ ಅನುಮತಿ ಮೇರೆಗೆ ನಿರ್ಜನ ಪ್ರದೇಶವಾದ ಎಚ್.ಡಿ.ಕೋಟೆ ಬಳಿಯ ಕಬಿನಿ ಜಲಾಶಯದ ಹಿನ್ನೀರಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.