Advertisement

ಶ್ರೀಗಂಧ ಮರಗಳ್ಳನ ಸೆರೆ

06:00 PM May 10, 2022 | Shwetha M |

ಆಲಮಟ್ಟಿ: ಇಲ್ಲಿನ ರಾಕ್‌ ಉದ್ಯಾನದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಗಂಧದ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಸೋಮವಾರ ನಸುಕಿನ ಜಾವದಲ್ಲಿ ಮರಗಳ್ಳತನದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿ ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆ ನೀಲಂಗಾ ತಾಲೂಕಿನ ಸಿಂಧಖೇಡ ನಿವಾಸಿ ಚಾಂದ ಮಸ್ತಾನ ಶೇಖ್‌ (32) ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ರಾಕ್‌ ಉದ್ಯಾನದಲ್ಲಿರುವ ಡೈನೋಸಾರ್‌ ಸೆಕ್ಟರ್‌ನಲ್ಲಿ ಒಂದು ಮರ ಹಾಗೂ ಸಮೀಪದಲ್ಲಿರುವ ಸ್ಟೋರ್‌ ಮುಂಭಾಗದಲ್ಲಿ ಒಂದು ಮರ ಸೇರಿ ಒಟ್ಟು ಎರಡು ಮರಗಳನ್ನು ಆಧುನಿಕ ಸಲಕರಣೆ ಬಳಸಿ ಕಡಿದು ತುಂಡುಗಳನ್ನಾಗಿ ಮಾಡಿ ಸಾಗಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಅರಣ್ಯ ಇಲಾಖೆಯ ಸಿಬ್ಬಂದಿ ಸಲ್ಲಿಸಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮೊಘಲ್‌ ಉದ್ಯಾನ, ರಾಕ್‌ ಉದ್ಯಾನ ಹಾಗೂ ಕೆಲ ನರ್ಸರಿಗಳಲ್ಲಿ ಮೇಲಿಂದ ಮೇಲೆ ಶ್ರೀಗಂಧ ಮರಗಳನ್ನು ಕಳ್ಳರು ಕಡಿದು ಕಳ್ಳತನ ಮಾಡಿ ಸಾಗಣೆ ಮಾಡಿದ್ದರೂ ಯಾವ ಆರೋಪಿಯೂ ಪತ್ತೆಯಾಗಿರಲಿಲ್ಲ. ಇದರಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗ, ಪ್ರಾದೇಶಿಕ ಅರಣ್ಯ ವಿಭಾಗ ಮುದ್ದೇಬಿಹಾಳ ಹಾಗೂ ಸ್ಥಳೀಯ ನಾಗರಿಕ ಪೊಲೀಸ್‌ ಇಲಾಖೆ, ರಾಜ್ಯ ಕೈಗಾರಿಕಾ ಭದ್ರತಾ ಪಡೆ ಮತ್ತು ಮಾಜಿ ಸೈನಿಕರು ದಿನಗೂಲಿ ಕಾರ್ಮಿಕರು ಹಗಲಿರುಳು ಗಸ್ತು ತಿರುಗುತ್ತಿದ್ದರೂ ಕೂಡ ಕಳ್ಳರು ಮಾತ್ರ ಬಹುಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕತ್ತರಿಸಿ ತಮ್ಮ ಕೈಚಳಕವನ್ನು ತೋರುತ್ತಿದ್ದರು. ಇದಕ್ಕೂ ಮೊದಲು ಸಂಗೀತ ನೃತ್ಯ ಕಾರಂಜಿ ಬಳಿಯಿರುವ ನರ್ಸರಿಯಲ್ಲಿ ಕಳ್ಳರು ಶ್ರೀಗಂಧದ ಮರಗಳನ್ನು ಕತ್ತರಿಸುವ ವೇಳೆ ರಾತ್ರಿ ಗಸ್ತಿನಲ್ಲಿರುವ ದಿನಗೂಲಿ ಕಾರ್ಮಿಕನ ಮೇಲೆ ಕಳ್ಳರು ದಾಳಿ ನಡೆಸಿ ಪರಾರಿಯಾಗಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಕಾರ್ಮಿಕ ತಿಳಿಸಿದರು.

ಕಾರ್ಮಿಕನ ಮೇಲೆ ದಾಳಿಯಿಂದ ಆಕ್ರೋಶಗೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೇವಲ ಗಸ್ತು ತಿರುಗುವ ಸಿಬ್ಬಂದಿಗಳನ್ನು ಪ್ರೇರೇಪಿಸಲು ತಾವೂ ಕೂಡ ರಾತ್ರಿಯ ವೇಳೆ ಪಹರೆ ನಡೆಸುತ್ತಿದ್ದರು. ಇದರ ಫಲವಾಗಿಯೇ ಸೋಮವಾರ ಕಳ್ಳ ಸಿಕ್ಕಿಬಿದ್ದಿದ್ದಾನೆ ಎಂದು ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕ ತಿಳಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next