Advertisement

ವಿಲಾಸಿ ಜೀವನಕ್ಕಾಗಿ ಮನೆ ದೋಚುತ್ತಿದ್ದವರ ಸೆರೆ

12:54 PM Oct 17, 2018 | |

ಬೆಂಗಳೂರು: ವಿಲಾಸಿ ಜೀವನಕ್ಕಾಗಿ ಮನೆಗಳ್ಳತನ ಮಾಡುತ್ತಿದ್ದ ಐವರು ಆರೋಪಿಗಳು ದಕ್ಷಿಣ ವಿಭಾಗದ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಾಲ್ಮೀಕಿನಗರದ ಇಮ್ರಾನ್‌ ಖಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌, ನಾಯಂಡಹಳ್ಳಿಯ ಖದೀರ್‌ ಅಹಮ್ಮದ್‌, ಯಶವಂತಪುರದ ಪ್ರಕಾಶ್‌ ಅಲಿಯಾಸ್‌ ಜಂಗ್ಲಿ, ನಾಗಸಂದ್ರದ ಮಹೇಶ್‌ ಮತ್ತು ಅಂದ್ರಳ್ಳಿ ಮುಖ್ಯ ರಸ್ತೆ ನಿವಾಸಿ ದಯಾನಂದ್‌ ಬಂಧಿತರು.

Advertisement

ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 31 ಮನೆಗಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, 84 ಲಕ್ಷ ರೂ. ಮೌಲ್ಯದ 2.62 ಕೆ.ಜಿ. ಬಂಗಾರ, 4.20 ಕೆ.ಜಿ. ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು  ದ್ವಿಚಕ್ರ ವಾಹನಗಳ ಮೂಲಕ ಕೆಲ ಪ್ರದೇಶಗಳಲ್ಲಿ ಹಗಲು ಮತ್ತು ರಾತ್ರಿ ಸುತ್ತಾಡುತ್ತಾ ಮನೆ ಗೇಟ್‌ಗಳಿಗೆ ಬೀಗ ಹಾಕಿರುವುದು, ಪೇಪರ್‌ ಬಿದ್ದಿರುವುದನ್ನು ಗಮನಿಸುತ್ತಿದ್ದರು.

ಬಳಿಕ ರಾತ್ರಿ ವೇಳೆ ಬಂದು ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಮುಂಬಾಗಿಲು ಅಥವಾ ಹಿಂಬಾಗಿಲು ಮುರಿದು ಚಿನ್ನಾಭರಣ ದೋಚುತ್ತಿದ್ದರು. ಕೆಲವೊಮ್ಮೆ ಒಂಟಿ ಮಹಿಳೆಯರ ಮನೆಗಳ ಬಾಗಿಲು ಬಡಿದು ಕಾರದ ಪುಡಿ ಎರಚಿ ದರೋಡೆ ಕೂಡ ಮಾಡುತ್ತಿದ್ದರು.

ವಿವಿಪುರ ಉಪ ವಿಭಾಗದಲ್ಲಿ ಹೆಚ್ಚು ಮನೆಗಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಡಿಸಿಪಿ ಶರಣಪ್ಪ, ಹನುಮಂತನಗರ, ಗಿರಿನಗರ ಮತ್ತು ಸಿ.ಕೆ.ಅಚ್ಚುಕಟ್ಟು ಠಾಣಾಧಿಕಾರಗಳ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಜ್ಮೇರ್‌ದಲ್ಲಿ ಚಿನ್ನಾಭರಣ ಮಾರಾಟ: ಹನುಮಂತನಗರ ಠಾಣೆ ಪೊಲೀಸರು ಬಂಧಿಸಿರುವ ಇಮ್ರಾನ್‌ ಖಾನ್‌ ಅಲಿಯಾಸ್‌ ಚೋರ್‌ ಇಮ್ರಾನ್‌ ಹಾಗೂ ಈತನ ಭಾಮೈದನ ಖದೀರ್‌ ಅಹಮ್ಮದ್‌ ವಿಲಾಸಿ ಜೀವನಕ್ಕಾಗಿ ಕೃತ್ಯವೆಸಗುತ್ತಿದ್ದರು. ಇತ್ತೀಚೆಗೆ ಪತ್ನಿ ಜತೆ ರಾಜಸ್ಥಾನದ ಅಜ್ಮೇರ್‌ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ.

Advertisement

ಈ ಬಗ್ಗೆ ಪತ್ನಿಯನ್ನು ಪ್ರಶ್ನಿಸಿದಾಗ ಸ್ನೇಹಿತರೊಬ್ಬರ ಹರ‌ಕೆಯಂತೆ ಅಜ್ಮೇರ್‌ದಲ್ಲಿ ಕಡಿಮೆ ಬೆಲೆಗೆ ಚಿನ್ನಾಭರಣ ಮಾರಾಟ ಮಾಡಿ ಬಂದ ಹಣವನ್ನು ಆತನಿಗೆ ಹಿಂದಿರುಗಿಸಬೇಕಿದೆ ಎಂದು ಸುಳ್ಳು ಹೇಳಿದ್ದ. ಇದಕ್ಕೆ ಬಾಮೈದನ ಸಹಕಾರವಿತ್ತು. ಇದು ನನಗೆ ತಿಳಿದಿರಲಿಲ್ಲ ಎಂದು ಪತ್ನಿ ತಿಳಿಸಿದ್ದಾರೆ. 

ಇಮ್ರಾನ್‌ ಖಾನ್‌ ಮನೆಗಳ ಬಾಗಿಲು ಮುರಿದು ಕೃತ್ಯವೆಸಗುತ್ತಿದ್ದರೆ, ಖದೀರ್‌ ಹೊರಗಡೆ ನಿಂತು ಗಮನಿಸುತ್ತಿದ್ದ. ಆರೋಪಿಗಳು ಅಜ್ಮೇರ್‌ಗೆ ಚಿನ್ನಾಭರಣ ಕೊಂಡೊಯ್ದ ಬಗ್ಗೆ ಮಾಹಿತಿ ಸಂಗ್ರಹಿಸಲು ಹೋದಾಗ, ಅಲ್ಲಿನ ಸ್ಥಳೀಯ ವ್ಯಾಪಾರಿಗಳು ರಾಜ್ಯ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಬಳಿಕ ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಲಾಯಿತು. ಇವರ ಬಂಧನದಿಂದ 8 ಪ್ರಕರಣಗಳು ಪತ್ತೆಯಾಗಿವೆ. 24 ಲಕ್ಷ ರೂ. ಮೌಲ್ಯದ 801 ಗ್ರಾಂ ಬಂಗಾರ, 2 ಕೆ.ಜಿ. 200 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ವಿಲಾಸಿ ಜೀವನಕ್ಕಾಗಿ ಕೃತ್ಯ: ಸಿ.ಕೆ.ಅಚ್ಚುಕಟ್ಟು ಪೊಲೀಸರು ಮಹೇಶ್‌ ಮತ್ತು ದಯಾನಂದ್‌ರನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನಿಂದ 7 ಮನೆಗಳ್ಳತನ, 2 ದ್ವಿಚಕ್ರ ವಾಹನ ಕಳವು ಸೇರಿ 10ಕ್ಕೂ ಹೆಚ್ಚು  ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಗಳಿಂದ 41,70 ಲಕ್ಷ ರೂ. ಮೌಲ್ಯದ 1,200 ಗ್ರಾಂ ಚಿನ್ನಾಭರಣ, 20 ಗ್ರಾಂ ವಜ್ರದ ಬಳೆ, 2 ಕೆ.ಜಿ. ಬೆಳ್ಳಿಯ ವಸ್ತುಗಳು, 2 ಪಲ್ಸರ್‌ ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹಗಲು ಮತ್ತು ರಾತ್ರಿ ವೇಳೆ ಪಲ್ಸರ್‌ ಬೈಕ್‌ಗಳಲ್ಲಿ ಪ್ರಮುಖ ಪ್ರದೇಶಗಳಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದರು.

ರಾತ್ರಿ ಹೊತ್ತು ಆ ಮನೆಗಳ ಬಾಗಿಲನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೃತ್ಯವೆಸಗುತ್ತಿದ್ದರು. ಬಳಿಕ ಕಳವು ವಸ್ತುಗಳನ್ನು ಮಾರಾಟ ಮಾಡಿ ಮೋಜು-ಮಸ್ತಿ, ಪ್ರವಾಸ ಎಂದು ವಿಲಾಸಿ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಡಾ ಎಸ್‌.ಡಿ.ಶರಣಪ್ಪ, ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಎಸಿಪಿ ವಲಿ ಬಾಷಾ ಹಾಗೂ ಠಾಣಾಧಿಕಾರಿಗಳು ಇದ್ದರು.

ಕ್ಯಾಸಿನೋ ಜೂಜಿನ ಮೋಹ: ಗಿರಿನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿರುವ ಪ್ರಕಾಶ್‌ ಅಲಿಯಾಸ್‌ ಜಂಗ್ಲಿ ಕಾರು ಚಾಲಕನಾಗಿದ್ದಾನೆ. ಕೃತ್ಯದ ಹಣದಲ್ಲಿ  ವಿಲಾಸಿ ಜೀವನದ ಜತೆಗೆ ಕ್ಯಾಸಿನೋ ಎಂಬ ಜೂಜಿಗೆ ಹಣ ಹೂಡಿಕೆ ಮಾಡುತ್ತಿದ್ದ.

ಆರೋಪಿ ರಾತ್ರಿ 10 ಗಂಟೆ ಸುಮಾರಿಗೆ ನಿಗದಿ ಮಾಡಿದ ಪ್ರದೇಶಗಳಲ್ಲಿ ಪಲ್ಸರ್‌ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದ. ಗೇಟ್‌ ಹಾಗೂ ಮನೆ ಬಾಗಿಲು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ತಡರಾತ್ರಿ  1 ಗಂಟೆ ಸುಮಾರಿಗೆ ನಿರ್ದಿಷ್ಟ ಮನೆ ಬಳಿ ಬಂದು, ಕಿಟಕಿ ಮೂಲಕ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿ ಒಮ್ಮೆ ಕಳವು ಮಾಡಿದ ವಸ್ತುಗಳನ್ನು ಪತ್ನಿ ಜತೆ ಮಾರಾಟ ಮಾಡಲು ಯತ್ನಿಸಿದ್ದ. ಈ ವೇಳೆ ವಿಚಾರ ತಿಳಿದ ಪತ್ನಿ ಮತ್ತೂಮ್ಮೆ ಈ ರೀತಿ ಮಾಡದ್ದಂತೆ ಪ್ರಮಾಣ ಮಾಡಿಸಿಕೊಂಡಿದ್ದರು. ಆದರೂ ಆರೋಪಿ ಆಕೆಗೆ ತಿಳಿಯದ್ದಂತೆ ಕೃತ್ಯವೆಸಗುತ್ತಿದ್ದ. ಬಂದ ಹಣದಲ್ಲಿ ಕ್ಯಾಸಿನೋ ಜೂಜಿಗೆ ಸಾವಿರಾರು ರೂ. ಹೂಡಿಕೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next