ಕೆ.ಆರ್.ಪುರ: ಇಲ್ಲಿನ ಸಾರ್ವಜನಿಕ ಅಸ್ಪತ್ರೆಯಲ್ಲಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಆರೋಪಿ, “ಡಿ’ ಗ್ರೂಪ್ ನೌಕರ ರಘು ಎಂಬಾತನನ್ನು ಕೆ.ಆರ್.ಪುರ ಪೋಲಿಸರು ಬಂಧಿಸಿದ್ದಾರೆ. ಮೂಲತಃ ಹಿರಿಯೂರಿನವನಾಗಿರುವ ರಘು, ಕಳೆದು ಮೂರು ವರ್ಷದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಈತನಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಕುಟುಂಬ ಸಮೇತ ಹೆಬ್ಟಾಳದಲ್ಲಿ ನೆಲೆಸಿದ್ದಾನೆ. ಈ ಮಧ್ಯೆ ಮಹಿಳೆಯ ಅಶ್ಲೀಲ ಫೋಟೋಗಳನ್ನು ತೆಗೆದು ವಿಕೃತಿ ಮೆರೆಯುತ್ತಿದ್ದ ರಘು ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಅರೆನಗ್ನ ಚಿತ್ರಗಳನ್ನು ತೆಗೆದು ತನ್ನ ಗೆಳೆಯರಿಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಇದೇ ಗುರುವಾರ ಕೆ.ಆರ್.ಪುರ ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಎದೆನೋವಿಗೆ ಇಸಿಜಿ ಮಾಡಿಸಲು ತೆರಳಿದ ವೇಳೆ ರಘು ಪರದೆಯ ಹಿಂಭಾಗದಿಂದ ಆಕೆಯ ಅರೆನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ.
ಆಕೆ ಎಚ್ಚರಗೊಂಡು ತಕ್ಷಣ ಅತನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಪರಿಶೀಲಿಸಿದ್ದಾರೆ. ಅದರಲ್ಲಿ ಆಕೆ ಫೋಟೋಗಳು ಮಾತ್ರವಲ್ಲದೇ, ಬೇರೆ ಮಹಿಳೆಯರ ಅರೆನಗ್ನ ಚಿತ್ರಗಳೂ ಪತ್ತೆಯಾಗಿದ್ದವು. ಈ ವೇಳೆ ಗಲಾಟೆ ಮಾಡಿದ ಮಹಿಳೆ, ಆಸ್ಪತ್ರೆ ಮೆಲಾಧಿಕಾರಿಗಳಿಗೆ ದೂರು ನೀಡಿದ್ದರು.
ಈ ವೇಳೆ ರಘು ಆಸ್ಪತ್ರೆಯಿಂದ ಪರಾರಿಯಾಗಿದ್ದ. ಅಲ್ಲದೇ ಕೇವಲ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲು ಆಸ್ಪತ್ರೆಯ ಮೇಲಧಿಕಾರಿಗಳು ಮುಂದಾಗಿದ್ದರು. ಪ್ರಕರಣವನ್ನು ಅಲ್ಲಿಗೆ ಕೈಬಿಡುವ ಪ್ರಯತ್ನವೂ ಸಹ ನಡೆದಿತ್ತು. ಆದರೆ, ಮಾಧ್ಯಮಗಳ ವರದಿಯನ್ನಾಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ಕೆ.ಆರ್.ಪುರ ಪೊಲೀಸರು ಆರೋಪಿ ರಘುನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಈ ರೀತಿಯ ಹವ್ಯಾಸ ಆತನಿಗೆ ಮೊದಲಿನಿಂದಲೂ ಇದ್ದು, ಆತನ ಮೊಬೈಲ್‌ನಲ್ಲಿ ಸಾಕಷ್ಟು ಅಶ್ಲೀಲ ಚಿತ್ರಗಳು. ಆಸ್ಪತ್ರೆಗೆ ಬಂದಿದ್ದ ರೋಗಿಗಳ ಅರೆನಗ್ನ ಚಿತ್ರಗಳು ಇರುವುದನ್ನು ಗಮನಿಸಿದ್ದೇವೆ. ಆದರೆ, ಸಂತ್ರಸ್ತೆ ದೂರು ನೀಡಲು ನಿರಾಕರಿಸಿದ್ದರಿಂದ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕಾಯಿತು. ಇನ್ನು ಮೊಬೈಲ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.