ಹೈದರಾಬಾದ್ : ಇಲ್ಲಿ ನಡೆಯುತ್ತಿರುವ ಪ್ರವಾಸಿ ಬಾಂಗ್ಲಾದೇಶದೆದುರಿನ ಏಕೈಕ ಟಸ್ಟ್ ಪಂದ್ಯದ 2 ನೇ ದಿನದಾಟದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಸಿಡಿಸಿ ಇನ್ನೊಂದು ವಿಶ್ವದಾಖಲೆಗೆ ಭಾಜನರಾಗಿದ್ದಾರೆ. ಕೊಹ್ಲಿ ಅವರು ಸತತ ನಾಲ್ಕು ಸರಣಿಗಳಲ್ಲಿ ನಾಲ್ಕು ದ್ವಿಶತಕಗಳನ್ನು ಸಿಡಿಸಿದ ದಾಖಲೆಗೆ ಭಾಜನರಾಗಿದ್ದಾರೆ.
ಮೊದಲ ದಿನದಾಟದಲ್ಲಿ ಶತಕ ಸಿಡಿಸಿ 111 ರನ್‌ಗಳಿಂದ ಅಮೋಘ ಆಟ ಮುಂದುವರಿಸಿದ ಕೊಹ್ಲಿ 204 ರನ್‌ಗಳಿಸಿ ಔಟಾದರು. ತೈಜುಲ್ ಇಸ್ಲಾಮ್ ಎಲ್‌ಬಿ ಮೂಲಕ ಕೊಹ್ಲಿಯನ್ನು ಪೆವಿಲಿಯನ್‌ಗೆ ಮರಳಿಸಿದರು. ಕೊಹ್ಲಿಗೆ ಸಾಥ್ ನೀಡಿದ ರೆಹಾನೆ 82 ರನ್‌ಗಳಿಸಿ ಔಟಾದರು. ಅಶ್ವಿನ್ 36 ರನ್‌ಗಳಿಸಿ ಔಟಾದರು
ಈ ಹಿಂದೆ ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ವೆಸ್ಟ್ ಇಂಡೀಸ್ ಎದುರಿನ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ್ದರು. ಗರಿಷ್ಠ ದ್ವಿಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ಮತ್ತು ವಿರೇಂದ್ರ ಸೆಹವಾಗ್ ಅವರು ತಲಾ 6 ದ್ವಿಶತಕ ಸಿಡಿದ್ದಾರೆ. ಸುನಿಲ್ ಗವಾಸ್ಕರ್ ಅವರು ನಾಲ್ಕು ದ್ವಿಶತಕ ಸಿಡಿಸಿದ್ದು ಆ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. ಆಸೀಸ್‌ನ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರ 4 ದ್ವಿಶತಕಗಳ ದಾಖಲೆಯನ್ನು ಕೊಹ್ಲಿ ಸರಿಗಟ್ಟಿದ್ದಾರೆ. 12 ದ್ವಿಶತಕ ಸಿಡಿಸಿರುವ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್‌ಮನ್ ಅಗ್ರ ಸ್ಥಾನದಲ್ಲಿದ್ದಾರೆ.
ಸಾಹಾ ಭರ್ಜರಿ ಶತಕ
ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸಾಹಾ 106, ಜಡೇಜಾ 60 ರನ್‌ಗಳಿಸಿ ಅಜೇಯರಾಗಿ ಉಳಿದರು. ತಂಡ 687 (6 ವಿಕೆಟ್ ನಷ್ಟಕ್ಕೆ) ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ.