ಮೈಸೂರು: ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಯಾದ ಜಂಬೂಸವಾರಿಯ ಪೂರ್ವಭಾವಿಯಾಗಿ ಗಜ ಪಡೆಗೆ ಭಾರ ಹೊರುವ ತಾಲೀಮು ಆರಂಭಿಸಲಾಯಿತು. ಅಕ್ಟೋಬರ್ 8ರಂದು ನಡೆಯಲಿರುವ ಜಂಬೂಸವಾರಿ ಯಂತೆಯೇ ತಾಲೀಮನ್ನೂ ನಡೆಸಲಾಯಿತು. ಮರಳು ಮೂಟೆ ತುಂಬಿದ ಮರದ ಅಂಬಾರಿಯನ್ನು ಅರ್ಜುನನ ಮೇಲೆ ಹೊರಿಸುವುದಕ್ಕಿಂತ ಮುಂಚಿತವಾಗಿ ಅರ್ಚಕ ಪ್ರಹ್ಲಾದರಾವ್ ಅರ್ಜುನನಿಗೆ ಪಂಚಫಲ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಅರ್ಜುನ ಗಜಗಾಂಭೀರ್ಯದಿಂದ ಮುಂದೆ ನಡೆದರೆ ಆತನ ಹಿಂದೆ ಬಲರಾಮ, ಅಭಿಮನ್ಯು, ಕಾವೇರಿ, ವಿಜಯ, ವಿಕ್ರಮ, ಗೋಪಿ, ಈಶ್ವರ, ದುರ್ಗಾ ಪರಮೇಶ್ವರಿ, ಜಯಪ್ರಕಾಶ್, ಲಕ್ಷ್ಮೀ ಸೇರಿದಂತೆ ಒಟ್ಟು 11 ಆನೆಗಳು ಜಂಬೂಸವಾರಿ ಸಾಗುವ ದಾರಿಯಲ್ಲಿ ಸಾಗಿದವು. ಅರಮನೆಯಿಂದ ಅಭ್ಯಾಸ ಆರಂಭಿಸಿದ ಅರ್ಜುನ ಬನ್ನಿಮಂಟಪದವರೆಗೆ ಸಾಗಿ, ಅರಮನೆ ಆವರಣಕ್ಕೆ ಯಶಸ್ವಿಯಾಗಿ ವಾಪಸ್ಸಾದ.
ದಿನಕ್ಕೊಂದು ಆನೆಗೆ ತಾಲೀಮು: ಗುರುವಾರ ಬೆಳಗ್ಗೆ ನಡೆದ ಮರದ ಅಂಬಾರಿ ಹೊರುವ ತಾಲೀಮಿನಲ್ಲಿ ಅರ್ಜುನ ಭಾಗವಹಿಸಿದ್ದು, ಕ್ರೇನ್ ಬಳಸಿ ಆತನ ಬೆನ್ನಿಗೆ ಮರದ ಅಂಬಾರಿಯನ್ನು ಸೂಕ್ತರೀತಿಯಲ್ಲಿ ಕಟ್ಟಲಾಯಿತು. ಸುಮರು 380 ಕೆ.ಜಿ. ತೂಕದ ಮರದ ಅಂಬಾರಿ ಹಾಗೂ ಅದರೊಳಕ್ಕೆ ಸುಮಾರು 250 ಕೆ.ಜಿಯ ಮರಳಿನ ಮೂಟೆ ತುಂಬಿ ಒಟ್ಟು 600ರಿಂದ 650 ಕೆ.ಜಿ.ಯಷ್ಟು ಭಾರ ಹೊರುವ ತಾಲೀಮನ್ನು ರಾಜಮಾರ್ಗದಲ್ಲಿ ನಡೆಸಲಾಯಿತು. ಭಾರ ಹೊತ್ತಿದ್ದ ಅರ್ಜುನ ಬೆಳಗ್ಗೆ 8ಕ್ಕೆ ಅರಮನೆಯಿಂದ ಹೊರಟು 1.20 ಗಂಟೆ ಅವಧಿಯಲ್ಲಿ ಬನ್ನಿ ಮಂಟಪ ತಲುಪಿದ. ನಡುವೆ ಯಾವುದೇ ತೊಂದರೆ ಆಗ ಲಿಲ್ಲ ಎಂದು ವೈದ್ಯ ಡಾ. ನಾಗರಾಜ್ ಮಾಹಿತಿ ನೀಡಿದರು.
ಉಳಿದಂತೆ ಮೊದಲ ತಂಡದ ಆನೆಗಳಾದ ಅಭಿಮನ್ಯು, ಧನಂಜಯ, ಈಶ್ವರ ಆನೆಗಳಿಗೂ ಅಂಬಾರಿ ತಾಲೀಮು ನಡೆಯಲಿದೆ. ಪ್ರತಿ ದಿನ ಒಂದೊಂದು ಆನೆಗೆ ಈ ತಾಲೀಮು ನಡೆಸಲಾಗುವುದು. ಕ್ರಮೇಣವಾಗಿ ಭಾರದ ಪ್ರಮಾಣವನ್ನು ಒಟ್ಟು 750 ಕೆ.ಜಿ.ಗಳವರೆಗೆ (ಅಂಬಾರಿ 750 ಕೆ.ಜಿ. ಇರುವುದರಿಂದ) ಏರಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಆನೆ ಗಳಿಗೂ ತಾಲೀಮು ಕೈಗೊಳ್ಳಲಾಗುತ್ತದೆ. ಇದರಿಂದ ಎಲ್ಲವೂ ಸಿದ್ಧವಾದಂತೆ ಆಗುತ್ತದೆ ಹಾಗೂ ಪ್ರತಿ ಆನೆಗೂ ರೆಸ್ಟ್ ಸಿಕ್ಕಂತಾಗುತ್ತದೆ ಎಂದು ತಿಳಿಸಿದರು.
ಡಿಸಿಎಫ್ ಅಲೆಕ್ಸಾಂಡರ್ ಮಾತನಾಡಿ, ದಸರಾ ಜಂಬೂ ಸವಾರಿಯು ಪ್ರಮುಖ ಆಕರ್ಷಣೆಯಾಗಿದ್ದು, ಈ ಸಂದರ್ಭ ಯಾವುದೇ ರೀತಿಯ ತೊಂದರೆಯಾಗದಂತೆ ಆನೆಗಳಿಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುತ್ತಿದೆ. ಇಂದಿನಿಂದ ಮರದ ಅಂಬಾರಿ ಜೊತೆಗೆ ಮರಳಿನ ಮೂಟೆಯನ್ನು ಹೊರಿಸಿ ತಾಲೀಮು ಆರಂಭಿಸಿದ್ದು, 750 ಕೆ.ಜಿ.ಯ ಚಿನ್ನದ ಅಂಬಾರಿಯನ್ನು ಹೊರಲು ಸಕಲ ರೀತಿಯಲ್ಲಿ ಆನೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸೆಲ್ಫಿಗೆ ಮುಗಿಬಿದ್ದ ಜನರು: ಬೆಳಗ್ಗೆ 8ರಿಂದ ಆರಂಭಗೊಂಡ ಆನೆಗಳ ಭಾರ ಹೊರುವ ತಾಲೀಮನ್ನು ನೂರಾರು ಮಂದಿ
ಕಣ್ತುಂಬಿಕೊಂಡರು. ಜೊತೆಗೆ ತಮ್ಮ ಮೊಬೈಲ್‌ಗಳಲ್ಲಿ ಮರದ ಅಂಬಾರಿಹೊತ್ತು ಸಾಗುತ್ತಿದ್ದ ಅರ್ಜುನ ಹಾಗೂ ಆತನ ಹಿಂದೆ ಸಾಗುತ್ತಿದ್ದ ಗಜಪಡೆಯ ಚಿತ್ರಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಿದರು. ಉಳಿದಂತೆ ಅನೇಕರುಸೆಲ್ಫಿಗಳನ್ನು ತೆಗೆದುಕೊಂಡು ಸಂಭ್ರಮಿಸಿದರು