Advertisement

ಮಹಿಳೆಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ; ಉಮಾ ಮಹಾದೇವನ್‌

06:33 PM Nov 30, 2022 | Team Udayavani |

ಬಾಗಲಕೋಟೆ: ಸ್ವಚ್ಛ ಸಂಕೀರ್ಣ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಅವರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಅವಶ್ಯವಾಗಿದೆ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ ತಿಳಿಸಿದರು.

Advertisement

ಜಿಪಂ ನೂತನ ಸಭಾಭವನದಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್‌ ಇಲಾಖೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನಯೋಪಾಯ ಇಲಾಖೆ ಜಿಪಂ ಸಹಯೋಗದಲ್ಲಿ ಸ್ವತ್ಛ ಸಂಕೀರ್ಣ ನಿರ್ವಹಣೆಯಲ್ಲಿ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮನೆಯನ್ನು ಸ್ವತ್ಛವಾಗಿಟ್ಟುಕೊಳ್ಳುವ ಹಾಗೆ ಗ್ರಾಮವನ್ನು ಸ್ವಚ್ಛವಾಗಿಡುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ಅಗತ್ಯವಾಗಿದೆ. ಗ್ರಾಮದಲ್ಲಿ ಡಿಜಿಟಲ್‌ ಗ್ರಂಥಾಲಯ, ಘನತ್ಯಾಜ್ಯ ವಿಲೇವಾರಿ ಮುಖ್ಯವಾಗಿದೆ. ಗ್ರಾಮಗಳ ಘನತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿಯಲ್ಲಿ ಸ್ವ-ಸಹಾಯಗಳ ಪಾತ್ರ ಮುಖ್ಯವಾಗಿದೆ. ಇದರಿಂದ ಮಹಿಳೆಯರು ಉದ್ಯೋಗ ಪಡೆಯುವುದರ ಜೊತೆಗೆ ಗ್ರಾಮ ಸ್ವತ್ಛವಾಗಿಡಲು ಸಾಧ್ಯವಾಗುತ್ತದೆ. ತಮ್ಮದೇಯಾದ ನಿವೇಶನ ಹೊಂದಿದಲ್ಲಿ ಶೆಡ್‌ ನಿರ್ಮಿಸಿಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.

ಮಹಿಳೆ ಸ್ವಚ್ಛವಾಹಿನಿಯ ಚಾಲನೆ ಮಾಡುವುದಷ್ಟೇ ಅಲ್ಲ ಟ್ರ್ಯಾಕ್ಟರ್‌, ಜೆಸಿಬಿಗಳನ್ನು ಸಹ ಚಾಲನೆ ಮಾಡುತ್ತಿದ್ದಾಳೆ. ಗಂಡಿಗೆ ಸಮಾನವಾದ ಕೆಲಸವನ್ನು ಮಹಿಳೆಯರು ಮಾಡಬಹುದಾಗಿದೆ. ಇದಕ್ಕಾಗಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣದ ಜೊತೆಗೆ ಗ್ರಾಮಗಳ ಅಭವೃದ್ಧಿ ಮಾಡಲಾಗುತ್ತಿದೆ. ತರಬೇತಿ ಸಂಪೂರ್ಣ ಲಾಭವನ್ನು ಪಡೆಯಬೇಕು ಎಂದು ಹೇಳಿದರು.

ಜಿಪಂ ಸಿಇಒ ಟಿ. ಭೂಬಾಲನ್‌ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತವಾದ ಕಟ್ಟಡ ಹೊಂದಿರುವ ಸ್ಥಳಗಳಲ್ಲಿ ಡಿಜಿಟಲ್‌ ಗ್ರಂಥಾಲಯ ಪ್ರಾರಂಭಿಸಲಾಗುತ್ತದೆ. ಘನತ್ಯಾಜ್ಯ ವಿಲೇವಾರಿಗೆ ಕಾರ್ಯಕ್ಕೆ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗೆ ದೂರದೃಷ್ಟಿ ಯೋಜನೆ ರೂಪಿಸಲಾಗುವುದೆಂದು ತಿಳಿಸಿದರು.

Advertisement

ಎಎನ್‌ಎನ್‌ಎಸ್‌ಐಆರ್‌ಡಿ ಮತ್ತು ಪಿಆರ್‌ ನಿರ್ದೇಶಕಿ ಲಕ್ಷ್ಮೀಪ್ರಿಯಾ ದೂರದೃಷ್ಟಿ ಯೋಜನೆ ಕುರಿತು, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಸಿ.ಆರ್‌. ಮುಂಡರಗಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಜಿಲ್ಲೆಯ ಪ್ರಸ್ತುತ ಅನುಷ್ಠಾನ ಹಾಗೂ ಪ್ರಗತಿ ವರದಿ ಕುರಿತು ಮಾತನಾಡಿದರು. ಹಸಿರು ದಳ ಸಂಸ್ಥೆಯ ಮಂಜುನಾಥ ಅವರು ಕಸ ವಿಂಗಡಣೆ ಕುರಿತು, ಬೆಂಗಳೂರಿನ ಸಾಹಸ್‌ ಸಂಸ್ಥೆ ಪ್ರತಿನಿಧಿ ಚಂದ್ರಶೇಖರ ಸುಸ್ಥಿರ ಕಸ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಕುಂದರಗಿ ಗ್ರಾಮ ಪಂಚಾಯತಿಯ ಸ್ವತ್ಛ ವಾಹಿನಿ ಚಾಲಕಿ ಶರೀಫಾಬಾನು ಬೂದಿಹಾಳ, ಸೂಳಿಭಾವಿ ಗ್ರಾಮದ ತ್ಯಾಜ್ಯ ನಿರ್ವಹಣೆ ಮಹಿಳಾ ಸದಸ್ಯೆ ಶ್ರೀದೇವಿ ಮಾದರ, ಕುಳಲಿ ಗ್ರಾಪಂ ಅಧ್ಯಕ್ಷೆ ಶಾರದಾ ತೇಲಿ ಮೊದಲಾದವರು ತಮ್ಮ ಅನುಭವ ಹಂಚಿಕೊಂಡರು. ಕಾರ್ಯಾಗಾರದಲ್ಲಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಕನಿಷ್ಕ, ಜಿಪಂ ಉಪ ಕಾರ್ಯದರ್ಶಿ ಎನ್‌.ವೈ. ಬಸರಿಗಿಡದ ಮುಂತಾದವರು ಉಪಸ್ಥಿತರಿದ್ದರು. ಪಿಡಿಒಗಳು, ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ನೂತನ ಎರಡು ಸ್ವತ್ಛ ವಾಹಿನಿಗಳಿಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next