Advertisement
ಕುಂತಿಯ ಮೊದಲ ಹೆಸರು ಪೃಥೆ. ಆಕೆ ಶೂರರಾಜನ ಮಗಳು. ವಸುದೇವನ ತಂಗಿ, ಶ್ರೀಕೃಷ್ಣನ ಅತ್ತೆ! ಇವಳನ್ನು ಕುಂತಿ ಭೋಜನೆಂಬ ರಾಜ ದತ್ತು ತೆಗೆದುಕೊಂಡ. ಮುದ್ದಿನಿಂದ ಬೆಳೆಸಿದ. ಇದೇ ಕಾರಣದಿಂದ ಪೃಥೆ “ಕುಂತಿ’ಯಾದಳು. ಮುಂದೆ, ಸ್ವಯಂವರದಲ್ಲಿ ಪಾಂಡು ರಾಜನನ್ನು ವರಿಸಿದಳು. ಎರಡು ವರ್ಷದ ಬಳಿಕ, ಕುಂತಿಗಿಂತ ಮುದ್ದಾಗಿದ್ದ ಮಾದ್ರಿ ಎಂಬಾಕೆಯನ್ನೂ ಮದುವೆಯಾಗುತ್ತಾನೆ ಪಾಂಡುರಾಜ. ಆಗ, ಕುಂತಿಯೊಳಗೆ ಸವತಿ ಮಾತ್ಸರ್ಯ ಹೆಡೆಯಾಡಲಿಲ್ಲವೆ? ಈ ಮಾತಿಗೆ, ಆ ಕ್ಷಣದಲ್ಲಿ ಸಾಕ್ಷಿ ಸಿಗುವುದಿಲ್ಲ.
Related Articles
Advertisement
ಮಾದ್ರಿ ಸುಂದರಿಯಷ್ಟೇ ಅಲ್ಲ, ಜಾಣೆ ಕೂಡ. ಯುಧಿಷ್ಠಿರ, ಭೀಮ, ಅರ್ಜುನರಷ್ಟೇ ತೇಜಸ್ಸಿನಿಂದ ಕೂಡಿದ ಮಕ್ಕಳೇ ತನಗೂ ಬೇಕೆಂದು ಆಕೆ ಯೋಚಿಸುತ್ತಾಳೆ. ಒಂದೇ ವರಕ್ಕೆ ಅವಳಿ ಮಕ್ಕಳನ್ನು ಪಡೆಯುತ್ತಾಳೆ.
ಮಹಾಭಾರತದ ಕಥೆಯ ರೋಚಕತೆ ಇರುವುದೇ ಇಲ್ಲಿ. ಮಾದ್ರಿಗೆ ಒಂದೇ ಮಂತ್ರದ ಫಲವಾಗಿ ಇಬ್ಬರು ಮಕ್ಕಳಾಗಿಬಿಟ್ಟರು ಎಂದು ಅಸೂಯೆಪಡುವ ಕುಂತಿ, ಮುಂದೆ ಪಾಂಡು-ಮಾದ್ರಿಯ ಅಕಾಲ ನಿಧನದ ಬಳಿಕ ಆ ಮಕ್ಕಳನ್ನೂ ತನ್ನ ಮಡಿಲಿಗೆ ಹಾಕಿಕೊಳ್ಳುತ್ತಾಳೆ. ಮಾದ್ರಿ ಗಿಂತ ಹೆಚ್ಚಿನ ಮಮತೆ ತೋರಿ ಅವರನ್ನು ಸಲಹುತ್ತಾಳೆ.
ಹೀಗೆ, ಒಂದಲ್ಲ ಒಂದು ತುಮುಲದಲ್ಲಿ ಸಿಕ್ಕಿಕೊಂಡ ಕುಂತಿ, ಅಮಾಯಕಿಯ ಪೋಸ್ ಕೊಡುತ್ತಲೇ ಕೆಡುಕು ಕಂಡರೂ ಕಾಣದಂತೆ ಉಳಿದುಬಿಡುತ್ತಾಳೆ. ದ್ರೌಪದಿ ಯನ್ನು ಐದು ಜನರೂ ಹಂಚಿಕೊಳ್ಳಿ ಎಂದು ಹೇಳಿದಳಲ್ಲ, ಅದು ಮಹಾಭಾರತದ ಕಥೆಯ ಲೆಕ್ಕಾಚಾರಕ್ಕೆ “ಸರಿ’ಎಂಬಂತೆ ಕಾಣಬಹುದು. ಆದರೆ, ಒಂದು ಹೆಣ್ಣು, ಐದು ಮಂದಿಗೆ ಹೆಂಡತಿಯಾದಾಗ ಅನುಭವಿಸಬೇಕಾದ ತಳಮಳವಿದೆಯಲ್ಲ; ಅದನ್ನು ಓರ್ವ ಹೆಣ್ಣಾಗಿ ಕುಂತಿಯೇಕೆ ಅರ್ಥ ಮಾಡಿಕೊಳ್ಳಲಿಲ್ಲ? ಅಕಸ್ಮಾತ್ ಆಗಿಹೋದ ಪ್ರಮಾದವನ್ನು ಸರಿಮಾಡಲು ಏಕೆ ಮುಂದಾಗಲಿಲ್ಲ? ತನ್ನಿಂದಾದ ಈ ತಪ್ಪಿಗಾಗಿ ಆಕೆ ಕೊರಗಿದ, ಪಶ್ಚಾತ್ತಾಪಪಟ್ಟ ಅಥವಾ ಏಕಾಂತದಲ್ಲಿ ದ್ರೌಪದಿಯನ್ನು ಕಂಡು ಕ್ಷಮೆಯಾಚಿಸಿದ ವಿವರಣೆಗಳು ಮಹಾಭಾರತದಲ್ಲಿ ಸಿಗುವುದಿಲ್ಲ.
ಇವನ್ನೆಲ್ಲ ಗಮನಿಸಿದರೆ, ಕುಂತಿಯದು ಕಠಿನ ಮನಸ್ಸು. ಮಹಾಭಾರತದ ಕಥೆಯಲ್ಲಿ ಆಕೆ ಆಗಾಗ “ಕರ್ಣನ’ ನೆಪದಲ್ಲಿ ಮೂಛೆì ತಪ್ಪುವುದು, ಏಕಾಂತದಲ್ಲಿ ಬಿಕ್ಕಳಿಸುವುದೆಲ್ಲ ನಾಟಕ ಅನ್ನಿಸಿಬಿಡುವುದುಂಟು. ಇಂಥ ಅನುಮಾನಗಳಿಗೆಲ್ಲ- ಕರ್ಣನೊಂದಿಗೆ ಆಕೆ ಮುಖಾಮುಖೀಯಾದ ಸಂದರ್ಭದಲ್ಲಿ ಉತ್ತರ ಸಿಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ನಾನು ಅಥವಾ ಅರ್ಜುನ -ಇಬ್ಬರಲ್ಲಿ ಒಬ್ಬರು ಸಾಯಬಹುದು ಎಂದು ಕರ್ಣ ಹೇಳಿದಾಗ – “ಹಾ’ ಎಂದು ಚೀರಿ ಕುಸಿಯುತ್ತಾಳೆ. ಆಗ ಕರ್ಣ- “ಅಮ್ಮಾ, ನಾನು ಸಾಯಬಹುದು ಎಂದರೇ ಚೀರುವ ನಿನ್ನ ಹೃದಯ, ನನ್ನನ್ನು ಗಂಗೆಯಲ್ಲಿ ತೇಲಿಬಿಟ್ಟಾಗ ಕಲ್ಲಾಗಿತ್ತೇಕೆ?’ ಅನ್ನುತ್ತಾನೆ. ಆಗ ಕುಂತಿ ಹೇಳುತ್ತಾಳೆ: “ಕರ್ಣಾ, ನಿನ್ನನ್ನು ಪಡೆದೆನಲ್ಲ? ಆಗ ಲೋಕಾಪವಾದದ ಭಯ ಕಾಡಿತು. ಸತ್ತುಹೋಗೋಣ ಅಂದುಕೊಂಡೆ. ಆಗಲಿಲ್ಲ. ನಾನು ಸಾವಿಗೆ ಹೆದರಲಿಲ್ಲ. ತಪ್ಪಿಗೆ ಹೆದರಿದ್ದೆ. ದೊಡ್ಡ ಮನೆತನದ ಹೆಂಗಸರು ತಪ್ಪು ಮಾಡದಂತೆ ಬದುಕಬೇಕು. ನಿನ್ನ ದುರ್ಬಲ ತಾಯಿಯಿಂದ ಅದು ಸಾಧ್ಯವಾಗಲಿಲ್ಲ…’
ಇಂಥ ಮಾತುಗಳನ್ನು ಕೇಳಿ ಪಾಪ, ಅಮಾಯಕಿ ಕುಂತಿ ಎಂದುಕೊಳ್ಳುವ ವೇಳೆಗೇ ಕುಂತಿಯ ಮತ್ತೊಂದು ಮಾತು ಕೇಳಿಸುತ್ತದೆ: “ಕರ್ಣಾ, ತೊಟ್ಟ ಬಾಣವನ್ನು ತೊಡಬೇಡ. ಪಾಂಡವರನ್ನು ಕೊಲ್ಲಬೇಡ!’ ಕೈತಪ್ಪಿದ ಮಗ ದಶಕಗಳ ಅನಂತರ ಸಿಕ್ಕಾಗಲೂ ಅವನು ಗೆದ್ದುಬರಲಿ ಎಂದು ಬಯಸುವುದೇ ಇಲ್ಲ ಕುಂತಿ. ಇವನ್ನೆಲ್ಲ ನೆನಪಿಸಿ ಕೊಂಡಾಗ, ಅವಳು ನಿರ್ದಯಿ ಅನ್ನಿಸುವುದುಂಟು. ಆದರೆ, ಮಹಾಭಾರತದ ಕಥೆ ಗಮನಿಸಿದರೆ ಕುಂತಿ ಮಾಡಿದ್ದೆಲ್ಲ ಸರಿ ಅನಿಸುತ್ತದೆ. ಒಂದು ವೇಳೆ ಕರ್ಣನನ್ನು ಗಂಗೆಯಲ್ಲಿ ತೇಲಿಬಿಟ್ಟು ತಪ್ಪು ಮಾಡಿದೆ ಎಂಬ ಸಂಕಟದಿಂದಲೇ ಆಕೆ ಸತ್ತು ಹೋಗಿದ್ದರೆ “ಮಹಾಭಾರತವೇ’ ನಡೆ ಯುತ್ತಿರಲಿಲ್ಲ. ದ್ರೌಪದಿಯನ್ನು “ಹಂಚಿಕೊಳ್ಳಿ’ ಎನ್ನದಿದ್ದರೆ ಪಾಂಡವರಲ್ಲಿ ಒಗ್ಗಟ್ಟೂ ಇರುತ್ತಿರಲಿಲ್ಲ. ದ್ರೌಪದಿ, ಅರ್ಜುನನ ಹೆಂಡತಿಯಷ್ಟೇ ಆಗಿದ್ದರೆ ವಸ್ತ್ರಾಪಹರಣ ಆಗುತ್ತಿರಲಿಲ್ಲ. ದುಶ್ಯಾಸನ- ದುರ್ಯೋಧನರ ವಧೆಗೆ ಪ್ರಮುಖ ಕಾರಣವೂ ಸಿಗುತ್ತಿರಲಿಲ್ಲ…
ಆದರೆ ಕುಂತಿಯ ಈ ಘನಕಾರ್ಯವನ್ನು “ಲೋಕ’ ಅರ್ಥಮಾಡಿಕೊಳ್ಳಲೇ ಇಲ್ಲ. ಪಾಪ ಕುಂತಿ…
– ಎ.ಆರ್.ಮಣಿಕಾಂತ್