ಅದು ಉತ್ತರಪ್ರದೇಶದ ರತೈ ಪುರ್ವಾ ಗ್ರಾಮ. ರಾಜಧಾನಿ ಲಕ್ನೋದಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಮಾಮೂಲು ಹಳ್ಳಿ. ಎಲ್ಲ ಹಳ್ಳಿಗಳಂತೆ ಇಲ್ಲಿಯೂ ವಿದ್ಯುತ್ ಸಮಸ್ಯೆ ವಿಪರೀತ. ಹೀಗಾಗಿ ಭಾರತ-ಇಂಗ್ಲೆಂಡ್ ನಡುವಿನ ವನಿತಾ ಯು-19 ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಆತಂಕ ಇಲ್ಲಿನ ಮನೆಯೊಂದರ ಸದಸ್ಯರನ್ನು ತೀವ್ರವಾಗಿ ಕಾಡಿತ್ತು. ಈ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದ ಗ್ರಾಮಸ್ಥರೂ ಇದೇ ಕಾರಣಕ್ಕಾಗಿ ಆತಂಕಕ್ಕೊಳಗಾಗಿದ್ದರು.
ಅ ಮನೆ ಬೇರೆ ಯಾರದ್ದೂ ಅಲ್ಲ, ಅಂಡರ್-19 ವಿಶ್ವಕಪ್ ತಂಡದಲ್ಲಿ ಮಿಂಚಿದ ಸ್ಪಿನ್ನರ್ ಅರ್ಚನಾ ದೇವಿ ಅವರದು! ಕೊನೆಗೆ ಇವರ ಆತಂಕ, ಭೀತಿಯನ್ನೆಲ್ಲ ನಿವಾರಿಸಿದ್ದು ಓರ್ವ ಪೊಲೀಸ್ ಅಧಿಕಾರಿ. ಅವರು ಇನ್ವರ್ಟರ್ ಹಾಗೂ ಬ್ಯಾಟರಿಯೊಂದನ್ನು ಕಳುಹಿಸಿಕೊಟ್ಟು ಮನೆಯವರನ್ನು ಖುಷಿಗೊಳಿಸಿದರು. ಮನೆಯ ಹೊರಗೆ ಇಡಲಾದ ಟಿವಿಯಲ್ಲಿ ಗ್ರಾಮಸ್ಥರೆಲ್ಲ ನೆರೆದು ಫೈನಲ್ ಪಂದ್ಯವನ್ನು ವೀಕ್ಷಿಸಿದರು!
“ನಿನ್ನೆಯಿಂದಲೇ ನಮ್ಮಲ್ಲಿ ಆತಂಕ ಮನೆ ಮಾಡಿತ್ತು. ಫೈನಲ್ ಪಂದ್ಯಕ್ಕೆ ಕರೆಂಟ್ ಇರುತ್ತದೋ ಇಲ್ಲವೋ ಎಂಬ ಭೀತಿಯಲ್ಲೇ ನಾವಿದ್ದೆವು. ಭಾರತದ, ಅದರಲ್ಲೂ ತಂಗಿ ಅರ್ಚನಾಳ ಆಟವನ್ನು ನೋಡಲು ಸಾಧ್ಯವಾದೀತೇ ಇಲ್ಲವೇ ಎಂಬ ಆತಂಕ ನಮ್ಮದಾಗಿತ್ತು. ನಮ್ಮ ಈ ತಳಮಳ ಪೊಲೀಸ್ ಅಧಿಕಾರಿಯೊಬ್ಬರ ಗಮನಕ್ಕೆ ಬಂತು. ಕೂಡಲೇ ಅವರು ಇನ್ವರ್ಟರ್ ಹಾಗೂ ಬ್ಯಾಟರಿಯನ್ನು ನಮ್ಮ ಮನೆಗೆ ಕಳುಹಿಸಿಕೊಟ್ಟರು. ನಾವೆಲ್ಲ ಬಹಳ ಖುಷಿಯಿಂದ ಫೈನಲ್ ವೀಕ್ಷಿಸಿದೆವು’ ಎಂದು ಅರ್ಚನಾದೇವಿ ಅವರ ಸಹೋದರ ರೋಹಿತ್ ಮಾಧ್ಯಮದವರಲ್ಲಿ ಹೇಳಿದರು. ಇಲ್ಲವಾದರೆ ಅವರು ಹಣ ಒಟ್ಟುಗೂಡಿಸಿ ಇನ್ವರ್ಟರ್ ಖರೀದಿಸುವ ಯೋಜನೆಯಲ್ಲಿದ್ದರು.
“ಅಣ್ಣ, ನಾವು ಇವತ್ತು ಗೆಲ್ಲಲೆಂದು ದೇವರಲ್ಲಿ ಪ್ರಾರ್ಥಿಸು’ ಎಂದು ಅರ್ಚನಾ ಹಿಂದಿನ ದಿನವೇ ತನಗೆ ಸಂದೇಶ ರವಾನಿಸಿದ್ದನ್ನೂ ರೋಹಿತ್ ಹೇಳಿಕೊಂಡರು.
ಭಾರತದ ಗೆಲುವಿನ ಬಳಿಕ ಅರ್ಚನಾ ಗ್ರಾಮದಲ್ಲಿ ದೊಡ್ಡ ಮಟ್ಟದ ಸಂಭ್ರಮಾಚರಣೆ ನಡೆಯಿತು. ತಾಯಿ ಸಾವಿತ್ರಿ ದೇವಿ, ಸಹೋದರ ರೋಹಿತ್ ಮನೆಗೆ ಬಂದವರಿಗೆಲ್ಲ ಲಡ್ಡು ನೀಡಿ ಖುಷಿ ಹಂಚಿಕೊಂಡರು.
Related Articles
“ನನಗೆ ಕ್ರಿಕೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಅರ್ಚನಾ ಆಡುತ್ತಿದ್ದುದನ್ನು ಟಿವಿಯಲ್ಲಿ ಕಂಡೆ. ಖುಷಿಯಾಯಿತು’ ಎಂಬುದು ಅಮ್ಮನ ಮುಗ್ಧ ಮಾತುಗಳು.
ಫೈನಲ್‌ನಲ್ಲಿ ಆರ್ಚನಾ ದೇವಿ ಅವರ ಆಟ ಬೊಂಬಾಟ್ ಆಗಿತ್ತು. ತಿತಾಸ್ ಸಾಧು ಅವರೊಂದಿಗೆ ಬೌಲಿಂಗ್ ಆರಂಭಿಸಿದ ಅರ್ಚನಾ 17 ರನ್ ವೆಚ್ಚದಲ್ಲಿ 2 ವಿಕೆಟ್ ಉರುಳಿಸಿದರು. ಜತೆಗೆ ಫೀಲ್ಡಿಂಗ್‌ನಲ್ಲೂ ಮಿಂಚಿದರು. ರಿಯಾನಾ ಗೇ ಅವರ ಕ್ಯಾಚನ್ನು ಒಂದೇ ಕೈಯಲ್ಲಿ ಪಡೆದ ಇವರ ಸಾಹಸ ವೈರಲ್ ಆಗಿದೆ.
ಕುಲದೀಪ್ ಗಾಡ್‌ಫಾದರ್
2008ರಲ್ಲಿ ತಂದೆ ಶಿವರಾಮ್ ಕ್ಯಾನ್ಸರ್‌ನಿಂದ ತೀರಿಹೋದಾಗ, ಸಹೋದರನೊಬ್ಬ ಅರ್ಚನಾ ಬಾರಿಸಿದ ಚೆಂಡನ್ನು ಹುಡುಕುವ ವೇಳೆ ಹಾವು ಕಚ್ಚಿ ದಾರುಣ ಅಂತ್ಯ ಕಂಡಾಗ, ತಾಯಿ ನಿರಾಸಕ್ತಿ ತೋರಿದಾಗ ಅರ್ಚನಾ ಅವರ ಕ್ರಿಕೆಟ್ ಪ್ರೀತಿ ಮಣ್ಣುಗೂಡುವ ಎಲ್ಲ ಸಾಧ್ಯತೆ ಇತ್ತು. ಆದರೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಈ ಸಂದರ್ಭದಲ್ಲಿ ಗಾಡ್‌ಫಾದರ್ ಆಗಿ ನಿಂತರು. 2017ರ ವೇಳೆ ಇಬ್ಬರೂ ಕಾನ್ಪುರದ “ಪಾಂಡೆ ಅಕಾಡೆಮಿ’ಯಲ್ಲಿ ಒಟ್ಟಿಗೇ ಅಭ್ಯಾಸ ನಡೆಸುತ್ತಿದ್ದರು.
“ಅರ್ಚನಾ ನಮ್ಮ ಅಕಾಡೆಮಿಗೆ ಬಂದಾಗ ಅವರ ಬೌಲಿಂಗ್ ಪ್ರತಿಭೆಯನ್ನು ಗಮನಿಸಿದೆ. ಸೂಕ್ತ ತರಬೇತಿ ನೀಡಿದೆ. ಆದರೆ ಆಕೆಗೆ ಕಾನ್ಪುರದಲ್ಲಿ ಉಳಿಯಲು ಯಾವುದೇ ವ್ಯವಸ್ಥೆ ಇರಲಿಲ್ಲ. ಮನೆ 30 ಕಿ.ಮೀ. ದೂರದಲ್ಲಿತ್ತು. ಹೀಗಾಗಿ ದಿನವೂ ತರಬೇತಿಗೆ ಬರಲಾಗುತ್ತಿರಲಿಲ್ಲ. ಇದನ್ನು ಗಮನಿಸಿದ ಆಕೆಯ ಅಧ್ಯಾಪಕಿ ಪೂನಂ ಗುಪ್ತಾ ಅವರು ಜೆ.ಕೆ. ಕಾಲಿನಿಯಲ್ಲಿ ಬಾಡಿಗೆ ಮನೆಯೊಂದನ್ನು ವ್ಯವಸ್ಥೆಗೊಳಿಸಿದರು’ ಎಂಬುದಾಗಿ ಕೋಚ್ ಕಪಿಲ್ ಪಾಂಡೆ ಹೇಳಿದರು.
ಆರಂಭದಲ್ಲಿ ಅರ್ಚನಾ ದೇವಿ ಮಧ್ಯಮ ವೇಗದ ಎಸೆತಗಳನ್ನು ಎಸೆಯುತ್ತಿದ್ದರು. ಬಳಿಕ ಅವರಿಗೆ ಆಫ್ ಸ್ಪಿನ್ ಮಾಡುವಂತೆ ಸೂಚಿಸಿದ್ದು ಕೋಚ್ ಕಪಿಲ್ ಪಾಂಡೆ. ಮುಂದಿನದು ಇತಿಹಾಸ.