ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಸಹಿತ ಹಲವು ಉದ್ಯಮಗಳಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ (ವರ್ಕ್ ಫ್ರಮ್ ಹೋಮ್) ಮುಂದುವರಿದಿದ್ದು, ಕಾಲ ಕ್ರಮೇಣ ಉದ್ಯೋಗಿಗಳು ಕಚೇರಿಗಳಲ್ಲಿ ಕೆಲಸ ಆರಂಭಿಸಬಹುದು. ಆದರೆ ಐಟಿ ಉದ್ಯೋಗಿಗಳು ಕಚೇರಿಗಳಿಂದಲೇ ಕೆಲಸ ಮಾಡುವಂತೆ ಸರಕಾರ ಸೂಚಿಸಲು ಸಾಧ್ಯವಿಲ್ಲ. ಅದು ಕಂಪೆನಿಗಳಿಗೆ ಸಂಬಂಧಿಸಿದ ವಿಚಾರ ಎಂದು ಉಪ ಮುಖ್ಯಮಂತ್ರಿ ಡಾ| ಸಿ. ಎನ್. ಅಶ್ವತ್ಥ ನಾರಾಯಣ ಹೇಳಿದರು. ಅವರು ಗುರುವಾರ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದರು.
ಡಿಸೆಂಬರ್‌ಗೆ ಕೊನೆಗೊಳಿಸಿ: ರಘುಪತಿ ಭಟ್
ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿ, ಸದ್ಯ ಎಲ್ಲ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದರೂ ಮಾಹಿತಿ ತಂತ್ರಜ್ಞಾನ ಸಂಬಂಧ ಚಟುವಟಿಕೆಗಳು, ಸೇವೆಗಳು ಇನ್ನೂ ಸ್ಥಗಿತಗೊಂಡಿವೆ. ಪರಿಣಾಮವಾಗಿ ಮ್ಯಾಕ್ಸಿಕ್ಯಾಬ್, ಟ್ರಾವೆಲ್ಸ್ ವಾಹನಗಳ ಸೇವೆಯೂ ಸ್ಥಗಿತಗೊಂಡು ಸರಕಾರಕ್ಕೆ ತೆರಿಗೆ ಆದಾಯವೂ ಕುಸಿದಿದೆ. ವರ್ಕ್ ಫ್ರಮ್ ಹೋಂ ವ್ಯವಸ್ಥೆಯಿಂದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗುತ್ತಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಚೇತರಿಕೆಯಾಗಬೇಕಾದರೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯನ್ನು ಡಿಸೆಂಬರ್‌ಗೆ ಕೊನೆಗೊಳಿಸಬೇಕು ಎಂದು ಕೋರಿದರು.
ಬಿಜೆಪಿಯ ಅರವಿಂದ ಲಿಂಬಾವಳಿ, ಟೆಕ್‌ಪಾರ್ಕ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗುವ ಮೊದಲು ಆ ಪ್ರದೇಶಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರಕಾರ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.