Advertisement

ಇಂದಿನಿಂದ ಮನೆಗಳತ್ತ ಅಭ್ಯರ್ಥಿಗಳ ನಡಿಗೆ

01:22 AM Nov 01, 2019 | mahesh |

ಮಹಾನಗರ: ಮಂಗಳೂರು ಪಾಲಿಕೆ ಚುನಾವಣೆ ಸಂಬಂಧ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರಕ್ಕೆ ಮುಕ್ತಾಯ ಗೊಂಡಿದ್ದು, ಎಲ್ಲ ಒಟ್ಟು 60 ವಾರ್ಡ್‌ಗಳಲ್ಲಿ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಶುಕ್ರವಾರದಿಂದ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.

Advertisement

ಯಾವ ವಾರ್ಡ್‌ನಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬ ಕುತೂಹಲ ಈಗಾಗಲೇ ಮುಗಿದಿರುವುದರಿಂದ, ಅಭ್ಯರ್ಥಿಗಳಿಗೆ ಈಗ ತಮ್ಮ ವಾರ್ಡ್‌ ನಲ್ಲಿ ಗೆಲ್ಲುವುದೊಂದೇ ಮುಖ್ಯ ಚಿಂತೆ ಯಾಗಿದೆ. ಹೀಗಾಗಿ, ಮತದಾರರನ್ನು ಓಲೈಸುವತ್ತ ಅಭ್ಯರ್ಥಿಗಳು ವಿಶೇಷ ಗಮನ ಹರಿಸಿದ್ದಾರೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಐಎಂ, ಎಸ್‌ಡಿಪಿಐ, ಸಿಪಿಐ ಸಹಿತ ಎಲ್ಲ ಪಕ್ಷಗಳ ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಸಿದ್ದು, ಶುಕ್ರವಾರದಿಂದ ಅಧಿಕೃತವಾಗಿ ತಮ್ಮ ಚುನಾವಣ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ನ. 4ರಂದು ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರಬೀಳಲಿದ್ದು, ಆ ಬಳಿಕ ಪ್ರಚಾರ ಕಾರ್ಯ ಇನ್ನಷ್ಟು ರಂಗೇರಲಿದೆ.

ಸ್ಥಳಿಯಾಡಳಿತ ಚುನಾವಣೆ ಇದಾಗಿರುವುದರಿಂದ ಬಹಿರಂಗ ಸಮಾವೇಶ ಸಹಿತ ದೊಡ್ಡ ಮಟ್ಟದ ಚುನಾವಣ ಪ್ರಚಾರ ಸಭೆ ನಡೆಸಲು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸಹಿತ ಇತರ ಪಕ್ಷಗಳು ನಿರಾಸಕ್ತಿ ತೋರಿವೆ. ವಾರ್ಡ್‌ ಗಳಲ್ಲಿ ಸಭೆ ಅಥವಾ ಪಾದಯಾತ್ರೆ ಮಾಡುವ ಬಗ್ಗೆ ಪಕ್ಷಗಳು ಆಸಕ್ತಿ ತೋರಿವೆ. 60 ವಾರ್ಡ್‌ಗಳಲ್ಲಿ ಮತದಾರರನ್ನು ಸಂಪರ್ಕಿಸಲು ಮನೆ ಮನೆಗೆ ಭೇಟಿ ನೀಡುವುದೇ ಮುಖ್ಯ ಆದ್ಯತೆ ಎಂಬ ನೆಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಮತ ಬೇಟೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಹಾಲಿಗಳಿಗೆ ಸುಲಭ- ಹೊಸಬರಿಗೆ ಸವಾಲು
ಕಾಂಗ್ರೆಸ್‌-ಬಿಜೆಪಿಯ ನಿಕಟ ಪೂರ್ವ ಸುಮಾರು 31 ಮಂದಿ ಕಾರ್ಪೊರೇಟರ್‌ಗಳಿಗೆ ಈ ಬಾರಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಅವರಿಗೆ ತಮ್ಮ ವಾರ್ಡ್‌ ನಲ್ಲಿ ಮತದಾರರ ಮನೆ ಬಾಗಲಿಗೆ ಹೋಗುವುದು ಅಷ್ಟೇನು ಕಷ್ಟವಲ್ಲ. ಆದರೆ ಬಹುತೇಕ ಹೊಸಬರೇ ಸ್ಪರ್ಧಾ ಕಣದಲ್ಲಿರುವುದರಿಂದ ಅವರಿಗೆ ವಾರ್ಡ್‌ ನಲ್ಲಿ ಮನೆಗಳ ಪರಿಚಯ ಹಾಗೂ ಅವರ ಮತವನ್ನು ತನ್ನೆಡೆಗೆ ಸೆಳೆಯುವ ಕಲೆ ಕರಗತ ಮಾಡಿಕೊಳ್ಳುವ ಸವಾಲು ಇದೆ. ಇಷ್ಟನ್ನು 11 ದಿನದೊಳಗೆ ಮಾಡಿ ಮುಗಿಸುವುದೇ ಬಹುದೊಡ್ಡ ಕೆಲಸ.

Advertisement

ಮೊಬೈಲ್‌ನಲ್ಲೇ ಮತ ಯಾಚನೆ
ಸಾಮಾನ್ಯವಾಗಿ ಒಂದು ವಾರ್ಡ್‌ನಲ್ಲಿ 5,000ಕ್ಕೂ ಅಧಿಕ ಮತದಾರರಿದ್ದಾರೆ. ಸುಮಾರು 2,000ಕ್ಕೂ ಅಧಿಕ ಮನೆಗಳಿವೆ. ಇಷ್ಟೂ ಮನೆಗಳಿಗೆ ಅಭ್ಯರ್ಥಿಗಳ ಭೇಟಿಯಾದರೆ ಮಾತ್ರ ಅವು ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ. ಇದರ ಜತೆಗೆ ವಾರ್ಡ್‌ನಲ್ಲಿರುವ ಪಕ್ಷಗಳ ಬೇರೆ ಬೇರೆ ಸಮಿತಿಗಳು ಕೂಡ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ ಬಹುತೇಕ ಜನರ ಮೊಬೈಲ್‌ ನಂಬರ್‌ಗಳನ್ನು ಪಡೆದುಕೊಂಡು ಅಭ್ಯರ್ಥಿಯೇ ಕರೆ ಮಾಡಿ ಮತ ಕೇಳಲು ಶುರು ಮಾಡಿದ್ದಾರೆ.

ಹಾಲಿ-ಮಾಜಿ ಶಾಸಕರಿಗೆ ಪ್ರತಿಷ್ಠೆ
ಸ್ಥಳೀಯ ಶಾಸಕರಾದ ಬಿಜೆಪಿಯ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ. ಹಾಗೂ ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಮೊದಿನ್‌ ಬಾವ ಅವರಿಗೆ ಪಾಲಿಕೆ ಚುನಾವಣೆಯು ಮಹತ್ವದ್ದಾಗಿದೆ. ಗೆದ್ದೇ ಗೆಲ್ಲಬೇಕು ಎಂಬ ನೆಲೆಯಲ್ಲಿ ಎರಡೂ ಪಕ್ಷಗಳು ತೀವ್ರ ಪೈಪೋಟಿಗೆ ಇಳಿದಿರುವುದರಿಂದ ಮುಂಬರುವ ದಿನಗಳ ಪ್ರಚಾರ ಬಿರುಸು ಪಡೆಯಲಿದೆ. ಕಾಂಗ್ರೆಸ್‌ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಯನ್ನು ಹಾಲಿ-ಮಾಜಿ ಶಾಸಕರ ಸೂಚನೆ ಮೇರೆಗೆ ನಿರ್ಧರಿಸಿದ ಕಾರಣ ಅವರನ್ನು ಗೆಲ್ಲಿಸುವುದು ಕೂಡ ಹಾಲಿ-ಮಾಜಿ ಶಾಸಕರಿಗೆ ಮಹತ್ವದ ಕೆಲಸ. ಜತೆಗೆ ಜಿಲ್ಲಾ ನಾಯಕರು-ರಾಜ್ಯ ನಾಯಕರು ಕೂಡ ಚುನಾವಣ ಪ್ರಚಾರದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಕಣವಾಗಿ ಹಲವು ಕುತೂಹಲಗಳಿಗೆ ಸಾಕ್ಷಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next