ಹುಬ್ಬಳ್ಳಿ: ಕುಂದಗೋಳ ಉಪ ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿದ್ದ ಅಭ್ಯರ್ಥಿಗಳು ಮತದಾನದ ಮಾರನೇ ದಿನ ಸೋಮವಾರ ಒಂದಿಷ್ಟು ಮತಗಳ ಲೆಕ್ಕಚಾರದ ಜಂಜಾಟದಲ್ಲಿದ್ದರೂ ಕುಟುಂಬದೊಂದಿಗೆ ಕೆಲ ಸಮಯ ಕಳೆದರು.
ಕಾರ್ಯಕರ್ತರ ಭೇಟಿ: ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರು ಸೋಮವಾರ ಬೆಳಗ್ಗೆ ಎಂದಿನಂತೆ ಅಡುಗೆ ಮನೆಯ ಕೆಲಸದಲ್ಲಿ ನಿರತರಾಗಿದ್ದರು. ಇಲ್ಲಿನ ಮಂಜುನಾಥ ನಗರದ ನಿವಾಸಕ್ಕೆ ಆಗಮಿಸಿದ ಕ್ಷೇತ್ರದ ಮುಖಂಡರೊಂದಿಗೆ ಮತದಾನ ಕುರಿತು ಚರ್ಚಿಸಿದರು. ಯಾವ ಬೂತ್‌ಗಳಲ್ಲಿ ಎಷ್ಟೆಷ್ಟು ಮತಗಳು ಬಂದಿರಬಹುದು ಎನ್ನುವ ಕುರಿತು ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಂಡರು. ನಂತರ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆದರು.
ಮೊಮ್ಮಕ್ಕಳ ಜತೆ ಚಿಕ್ಕನಗೌಡರ: ಎಸ್.ಐ. ಚಿಕ್ಕನಗೌಡರ ಉಪ ಚುನಾವಣೆ ಘೋಷಣೆ ನಂತರ ಅಭ್ಯರ್ಥಿಯಾಗುತ್ತಿದ್ದಂತೆ ಚುನಾವಣೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಮತದಾನದ ಮಾರನೇ ದಿನವೂ ಅವರ ಅದರಗುಂಚಿ ನಿವಾಸಕ್ಕೆ ಆಗಮಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಮತದಾನ ಪ್ರಮಾಣ ಕುರಿತು ಒಂದಿಷ್ಟು ಚರ್ಚೆ ನಡೆಸಿದರು. ನಂತರ ಬೇಸಿಗೆ ರಜೆಗೆ ಬಂದಿದ್ದ ಮೊಮ್ಮಕ್ಕಳೊಂದಿಗೆ ಕಾಲ ಕಳೆದು ಹುಬ್ಬಳ್ಳಿಯ ಕಚೇರಿಗೆ ಆಗಮಿಸಿದರು.
Advertisement
ಉಪ ಚುನಾವಣೆ ಘೋಷಣೆಯಾದ ದಿನದಿಂದಲೂ ಕ್ಷೇತ್ರದ ಪರ್ಯಟನೆಗೆ ಮುಂದಾಗಿದ್ದರು. ಸುಮಾರು 27 ದಿನಗಳ ಕಾಲ ಚುನಾವಣೆ, ಪ್ರಚಾರ, ಕಾರ್ಯಕರ್ತರ ಭೇಟಿ, ಮನೆ ಮನೆ ಪ್ರಚಾರ ಹೀಗೆ ನಾನಾ ಕೆಲಸಗಳಿಂದ ಚುನಾವಣೆಯಲ್ಲಿ ತೊಡಗಿದ್ದರು. ಮೇ 19ರಂದು ಮತದಾನ ಮುಗಿಯುತ್ತಿದ್ದಂತೆ ಸೋಮವಾರದಂದು ಅಭ್ಯರ್ಥಿಗಳು ಒಂದಿಷ್ಟು ರಿಲ್ಯಾಕ್ಸ್ ಮೂಡಿಗೆ ತೆರಳಿದರು.