Advertisement

ಮತ ಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ!

04:03 PM Jun 14, 2022 | Team Udayavani |

ಬಾಗಲಕೋಟೆ: ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನ ಸೋಮವಾರ ಮುಗಿದಿದ್ದು, ಮತದಾರ ಪ್ರಭುವಿನ ತೀರ್ಪು ಮತಗಟ್ಟೆಗಳಲ್ಲಿ ಭದ್ರವಾಗಿದೆ.

Advertisement

ಶಿಕ್ಷಕರ ಮತಕ್ಷೇತ್ರದ ಚುನಾವಣೆ ಭಾರಿ ಪೈಪೊಟಿ ಹಾಗೂ ಕುತೂಹಲ ಕೆರಳಿಸಿದೆ. ಬಿಜೆಪಿ, ಕಾಂಗ್ರೆಸ್‌ ಜತೆಗೆ ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ, ಘಟಾನುಘಟಿ ಅಭ್ಯರ್ಥಿಗಳಿಗೆ ಒಂದು ಕ್ಷಣ ನಡುಕ ಕೂಡ ಹುಟ್ಟಿಸಿತ್ತು. ಕೆಲ ಪಕ್ಷೇತರ ಅಭ್ಯರ್ಥಿಗಳನ್ನು ಚುನಾವಣೆ ಕಣದಿಂದ ಹಿಂದಕ್ಕೆ ಸರಿಸಲು ಪ್ರಯತ್ನಗಳು ನಡೆದವಾದರೂ ಆ ಪ್ರಯತ್ನ ಈಡೇರಲಿಲ್ಲ. ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೂ ಮತದಾನ ಎಲ್ಲೆಡೆ ಶಾಂತಯುತವಾಗಿದ್ದು, ಯಾವ ಮತಗಟ್ಟೆಯಲ್ಲಿ ಯಾರಿಗೆ ಎಷ್ಟು ಮತ ಬಂದಿರಬಹುದೆಂಬ ಲೆಕ್ಕಾಚಾರ ನಡೆದಿವೆ.

ಇನ್ನು ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಚ್ಚಳವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮೂರು ಜಿಲ್ಲೆಗಳಲ್ಲಿ ಬಿಜೆಪಿ ನಾಯಕರ ಸಂಘಟಿತ ಪ್ರಯತ್ನ, ಸಚಿವ ಮುರುಗೇಶ ನಿರಾಣಿಯವರ ವರ್ಚಸ್ಸು, ಅವರು ರೈತ ಕುಟುಂಬದೊಂದಿಗೆ ಹಾಗೂ ಹಾಗೂ ಗ್ರಾಮೀಣ ಯುವಕರೊಂದಿಗೆ ಇಟ್ಟುಕೊಂಡ ಒಡನಾಟ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಅವರನ್ನು ಗೆಲುವಿನ ಓಟದಲ್ಲಿ ಎದುರಾಳಿ ಹಿಂಬಾಲಿಸದಷ್ಟು ದೂರ ಸಾಗಿ ವಿಜಯದ ಗೆರೆ ಹತ್ತಿರ ಬಂದು ನಿಂತಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಬಿಜೆಪಿಯ ಸಂಘಟನಾತ್ಮಕ ಶಕ್ತಿ, ನಿರಾಣಿ ಸಮೂಹದ ವ್ಯವಸ್ಥಿತ ಹಾಗೂ ಚಾಣಾಕ್ಷತನದ ಕಾರ್ಯತಂತ್ರ ಹಾಗೂ ಮಾನವ ಸಂಪನ್ಮೂಲ ಬಳಕೆ ಪ್ರತಿಫಲವಾಗಿ ಹಣಮಂತ ನಿರಾಣಿ ಮತ್ತೂಂದು ಗೆಲುವಿನ ಸನಿಹದಲ್ಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಕೇವಲ ಶಿಕ್ಷಣ ಸಂಸ್ಥೆಗಳಿಗೆ ಸೀಮಿತವಾಗಿದ್ದ ಪದವೀಧರ ಕ್ಷೇತ್ರದ ಚುನಾವಣೆಗೆ ಹಳ್ಳಿಯ ಪದವೀಧರ ಮತದಾರರನ್ನೂ, ಮತದಾರರ ಪಟ್ಟಿಗೆ ಸೇರಲು ಪ್ರೇರೇಪಣೆ ನೀಡಿ, ಗ್ರಾಮೀಣ ಭಾಗದ ರೈತರನ್ನು ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದರು. ಹೀಗಾಗಿ ಈ ಚುನಾವಣೆ ಸಾರ್ವತ್ರಿಕ ಚುನಾವಣೆಯೂ ನಾಚುವಷ್ಟು ರಂಗೇರಿತ್ತು.

Advertisement

ಕಳೆದ 6 ವರ್ಷಗಳ ಹಿಂದೆ 22 ಸಾವಿರಕ್ಕೂ ಅಧಿಕ ಗೆಲುವಿನೊಂದಿಗೆ ಮೊದಲ ಬಾರಿಗೆ ವಿಧಾನಪರಿಷತ್‌ ಪ್ರವೇಶಿಸಿದ್ದ ಹನುಮಂತ ನಿರಾಣಿ, ಈ ಬಾರಿಯೂ ಅಂತದ್ದೇ ದೊಡ್ಡ ಗೆಲುವಿನೊಂದಿಗೆ ವಿಧಾನಸೌಧದ ಮೆಟ್ಟಿಲೇರುವ ನಿರೀಕ್ಷೆಯಲ್ಲಿದ್ದಾರೆ.

ಇಲ್ಲಿಯೂ ಸಂಗಮೇಶ ಮಾಸ್ಟರ್‌ ಮೈಂಡ್‌: 6 ವರ್ಷಗಳಲ್ಲಿ ಎಲ್ಲಿಯೂ ವಿವಾದಕ್ಕೆ ಈಡಾಗದೇ ವಿಧಾನ ಪರಿಷತ್‌ ಸದಸ್ಯರಾಗಿ ಕೆಲಸ ಮಾಡಿದ ಹನುಮಂತ ನಿರಾಣಿ, ಇಡೀ ಚುನಾವಣೆಯ ಮಾಸ್ಟರ್‌ ಮೈಂಡ್‌ ಆಗಿ ಹೊರಹೊಮ್ಮಿದ್ದು ಸಂಗಮೇಶ ನಿರಾಣಿ. ಪಕ್ಷದ ಪ್ರಮುಖರು, ನಾಯಕರು ಹಾಗೂ ಕಾರ್ಯಕರ್ತರ ಜತೆಗೆ, ನಿರಾಣಿ ಸಮೂಹವನ್ನು ಒಂದು ತಂಡವಾಗಿ ಚುನಾವಣೆಗೆ ಇಳಿಸಿದ್ದು, ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದ್ದರು. ಹನುಮಂತ ನಿರಾಣಿ ಅವರು ಸುಮಾರು 40 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬುದು ಚುನಾವಣೆ ಪ್ರಚಾರ ತಂಡದಲ್ಲಿದ್ದ ಬಿಜೆಪಿ ಪ್ರಮುಖರ ಲೆಕ್ಕಾಚಾರ.

ತಿಂಗಳು ಬೀಡುಬಿಟ್ಟ ರವಿ!: ಕಳೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲು ಸಾಧ್ಯವೇ ಇಲ್ಲ ಎಂಬ ದೃಢವಾದ ವಿಶ್ವಾಸವಿತ್ತು. ಆದರೆ, ಫಲಿತಾಂಶ ಹೊರ ಬಂದಾಗ, ಖರ್ಗೆ ಅವರು ಭಾರಿ ಮತಗಳ ಅಂತರದಿಂದ ಸೋತಿದ್ದರು. ಅಲ್ಲಿ ಪಕ್ಷದ ಅಭ್ಯರ್ಥಿ, ಸಂಸದರಾಗಿ ಆಯ್ಕೆಯಾಗಲು ಹಿಂದಿನ ದೊಡ್ಡ ಶಕ್ತಿ ಬಳಸಿಕೊಳ್ಳುವ ಹಿಂದಿನ ರಹಸ್ಯ ನಾಯಕರಾಗಿ ಕಾರ್ಯ ನಿರ್ವಹಿಸಿದ್ದು, ಬಿಜೆಪಿ ಯುವ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ರವಿಕುಮಾರ. ಇಲ್ಲಿಯೂ ಪದವೀಧರ ಕ್ಷೇತ್ರದಿಂದ ಹಣಮಂತ ನಿರಾಣಿ ಅವರ ಗೆಲುವಿಗೆ ಬ್ರೇಕ್‌ ಬೀಳಿಸುವ ಶಕ್ತಿ, ಕಾಂಗ್ರೆಸ್‌ನ ಅಭ್ಯರ್ಥಿ ಸುನೀಲ ಸಂಕ ಅವರಿಗೆ ಇರದಿದ್ದರೂ ಕಾಂಗ್ರೆಸ್‌ನ ಸಂಘಟಿತ ಪ್ರಯತ್ನದಿಂದ ನಿರಾಣಿ ಮಣಿಸಬೇಕೆಂಬ ತಂತ್ರದೊಂದಿಗೆ ಚುನಾವಣೆ ಎದುರಿಸಿದರೂ ಚುನಾವಣೆಯ ಹಿಂದಿನ ದಿನದ ಕಾಂಗ್ರೆಸ್‌ ನಾಯಕರಲ್ಲಿ, ಉತ್ಸಾಹ ಉಳಿದಿರಲಿಲ್ಲ. ಇದಕ್ಕೆ ಕಾರಣ ಹಲವಿದ್ದರೂ ಇಡೀ ಪದವೀಧರ ಕ್ಷೇತ್ರದಲ್ಲಿನ ವಾತಾವರಣವೂ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧ್ಯವಾ ಎಂಬ ಪ್ರಶ್ನೆ, ಕಾಂಗ್ರೆಸ್ಸಿಗರಲ್ಲೇ ಮನೆ ಮಾಡಿದೆ.

ಆದರೆ, ಎರಡು ಬಾರಿ ಶಿಕ್ಷಕರ ಕ್ಷೇತ್ರದಿಂದ ಗೆದ್ದು, ಪರಿಷತ್‌ ಸದಸ್ಯರಲ್ಲಿ ಕ್ರಿಯಾಶೀಲರೆಂದೇ ಹೆಸರು ಪಡೆದ, ಹೊಸ ಶಿಕ್ಷಣ ನೀತಿ ರಚನೆಯಲ್ಲಿ ಕರ್ನಾಟಕದಿಂದ ಮುಂಚೂಣಿಯಲ್ಲಿದ್ದ ಅರುಣ ಶಹಾಪುರ ಅವರು, ಈ ಬಾರಿಯ ಚುನಾವಣೆಯಲ್ಲಿ ಕೆಲಸ ಕಳೆದುಕೊಂಡ ಅತಿಥಿ ಉಪನ್ಯಾಸಕರಿಂದ, ಹಲವು ಶಿಕ್ಷಕರಿಂದ ವಿರೋಧ ಕಟ್ಟಿಕೊಂಡಿದ್ದರು. ಅಲ್ಲದೇ 33 ವಿಧಾನಸಭೆ ಕ್ಷೇತ್ರ, ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕ್ಷೇತ್ರದಲ್ಲಿ ಶಹಾಪುರ ಅವರ ಕ್ಷೇತ್ರ ಸಂಪರ್ಕ ವಿರಳ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಶಹಾಪುರ ಅವರ ಹ್ಯಾಟ್ರಿಕ್‌ ಗೆಲುವು ಸಾಧ್ಯವಿಲ್ಲ ಎಂಬ ಮಾತು ಪ್ರಬಲವಾಗಿ ಕೇಳಿ ಬರುತ್ತಲೇ, ಬೆಂಗಳೂರಿನಿಂದ ಉತ್ತರಕ್ಕೆ ಬಂದ ರವಿಕುಮಾರ, ಸುಮಾರು 1 ತಿಂಗಳ ಕಾಲ ಇಲ್ಲಿಯೇ ಇದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಿ, ಎಲ್ಲ ನಾಯಕರು, ಕಾರ್ಯಕರ್ತರನ್ನು ಸಂಘಟಿತವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಜತೆಗೆ ಶಹಾಪುರ ಅವರ ವಿರುದ್ಧ, ಕಾಂಗ್ರೆಸ್‌ನಿಂದ ಹಳೆಯ ಹುಲಿ ಪ್ರಕಾಶ ಹುಕ್ಕೇರಿ ಸ್ಪರ್ಧೆ ಮಾಡಿದ್ದೂ, ಬಿಜೆಪಿಯ ಈ ಇಂತಹ ಕಾರ್ಯತಂತ್ರಕ್ಕೆ ಕಾರಣ ಎನ್ನಲಾಗಿದೆ.

ಆದರೆ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರ ಹಿರಿತನ, ಮೂರು ಜಿಲ್ಲೆಗಳಲ್ಲಿ ಇರುವ ಅವರ ಬೆಂಬಲಿಗರು, ಪಕ್ಷದ ಹಿರಿಯ-ಕಿರಿಯ ಕಾರ್ಯಕರ್ತರು, ಶಿಕ್ಷಕರ ವಲಯದ ಹಲವು ಸಂಘಟನೆಗಳೂ ಅವರ ಬೆಂಬಲಕ್ಕೆ ನಿಂತು ಅವಿರತ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಶಿಕ್ಷಕರ ಕ್ಷೇತ್ರದಿಂದ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ.

ಒಟ್ಟಾರೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಮತದಾರ ಪ್ರಭುಗಳು, ತಮ್ಮ ಹಕ್ಕು ಚಲಾಯಿಸಿದ್ದಾರೆ. ಚುನಾವಣೆಯ ಫಲಿತಾಂಶ ಹೊರ ಬೀಳಲು ಜೂ. 15ರವರೆಗೆ ಕಾಯಲೇಬೇಕಿದೆ.

-ಶ್ರೀಶೈಲ ಕೆ. ಬಿರಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next