Advertisement

Congress 8-10 ಕೈ ಸಚಿವರು ಲೋಕ ಕಣಕ್ಕೆ?

01:05 AM Jan 10, 2024 | Team Udayavani |

ಬೆಂಗಳೂರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನೇಮಿಸಿದ್ದ ಉಸ್ತುವಾರಿ ಸಚಿವರ ಪೈಕಿ ಕೆಲವರನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಕನಿಷ್ಠ 8ರಿಂದ 10 ಸಚಿವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯಬೇಕಾಗುತ್ತದೆ.

Advertisement

ಹೈಕಮಾಂಡ್‌ ಸಚಿವರಿಗೆ ಇಂತಹ ಸುಳಿವು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಕರ್ನಾಟದವರೇ ಆಗಿದ್ದಾರೆ. ಐದೂ ಗ್ಯಾರಂಟಿಗಳನ್ನು ಆರು ತಿಂಗಳುಗಳಲ್ಲಿ ಪೂರೈಸಿ “ನುಡಿದಂತೆ ನಡೆದ’ ಸರಕಾರ ಎಂದು ಬಿಂಬಿಸಿಕೊಂಡಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಹೆಚ್ಚು ಸ್ಥಾನಗಳನ್ನು ಗೆದ್ದು ಹೈಕಮಾಂಡ್‌ಗೆ ಕೊಡುಗೆ ನೀಡುವ ಜವಾಬ್ದಾರಿ ಇದೆ. ಈ ಗುರಿ ಪೂರೈಸಲು ಅಗತ್ಯ ಇರುವ ಕಡೆಗಳಲ್ಲಿ ಸಚಿವರನ್ನೇ ಕಣಕ್ಕಿಳಿಸುವ ಆಲೋಚನೆ ನಡೆದಿದೆ.

ಈ ಲೆಕ್ಕಾಚಾರದ ಹಿಂದೆ ಹಲವು ತಂತ್ರಗಾರಿಕೆ ಗಳು ಕೆಲಸ ಮಾಡುತ್ತಿವೆ. ಮುಖ್ಯವಾಗಿ ರಾಜ್ಯದ ಹೊಸ ಸರಕಾರದ “ಸಚಿವರು’ ಎಂಬ ಪ್ರಭಾವ ಇರುತ್ತದೆ. ಜತೆಗೆ ಜಾತಿ ಸಮೀಕರಣವೂ ಇದೆ. ಈಗಾಗಲೇ ಉಸ್ತುವಾರಿ ಆಗಿದ್ದರೆ ನಾಡಿಮಿಡಿತ ಗೊತ್ತಿರುತ್ತದೆ. ಮತದಾರರನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಕಾರ್ಯಕರ್ತರಿಗೂ ಸಚಿವರೊಬ್ಬರನ್ನು ಗೆಲ್ಲಿಸುವುದು ಸುಲಭ. ಹಾಗಾಗಿ ಈ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುಜೇìವಾಲ ಕೂಡ ಅಗತ್ಯಬಿದ್ದರೆ ಚುನಾವಣ ಕಣಕ್ಕಿಳಿಯಲು ಮಾನಸಿಕವಾಗಿ ಸಿದ್ಧರಾಗಿರುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ದಿಲ್ಲಿಯಲ್ಲಿ ಜ. 11ರಂದು ನಡೆಯುವ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಚಿವರ ಕುಟುಂಬದಿಂದಲೂ ಸ್ಪರ್ಧೆ?
ಸಚಿವರು ಮಾತ್ರವಲ್ಲ; ಕೆಲವೆಡೆ ಸಚಿವರ ಪತ್ನಿ, ಪುತ್ರಿ, ಪುತ್ರ ಸಹಿತ ಕುಟುಂಬದ ಸದಸ್ಯರನ್ನೂ ಕಣಕ್ಕಿಳಿಸುವ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರ ನಡೆದಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ದಾವಣಗೆರೆ, ಕೋಲಾರ ಮತ್ತಿತರ ಕಡೆಗಳಲ್ಲಿ ಹಲವು ಸಚಿವರ ಕುಟುಂಬಸ್ಥರ ಹೆಸರುಗಳು ಕೂಡ ಕೇಳಿಬರುತ್ತಿವೆ. ಸಚಿವರ ಪ್ರಭಾವದಿಂದ ಗೆಲ್ಲಬಹುದಾದ ಕ್ಷೇತ್ರಗಳ ಹುಡುಕಾಟವೂ ನಡೆದಿದೆ. ಅದಕ್ಕೂ ಮುನ್ನ ಹೀಗೆ ಸಚಿವರ ಪ್ರಯೋಗದ ಆವಶ್ಯಕತೆ ಎಲ್ಲೆಲ್ಲಿದೆ ಹಾಗೂ ಏಕೆ ಎಂಬುದರ ಮಾಹಿತಿ ಸಂಗ್ರಹಿಸುವ ಕಾರ್ಯ ಸದ್ದಿಲ್ಲದೆ ನಡೆದಿದೆ ಎನ್ನಲಾಗಿದೆ.

ಸರಿಯೋ, ತಪ್ಪೋ?
ಈ ಪ್ರಯೋಗದಲ್ಲಿ ಯಶಸ್ವಿಯಾದರೆ ಸರಿ. ಒಂದು ವೇಳೆ ಲೆಕ್ಕಾಚಾರ ತಲೆಕೆಳಗಾಗಿ ಸಚಿವರೇ ಸೋತುಬಿಟ್ಟರೆ ವಿಪಕ್ಷಗಳಿಗೆ ಅದು ಆಹಾರವಾಗಬಹುದು. ಸರಕಾರಕ್ಕೆ ಕೆಟ್ಟಹೆಸರು ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ವಾದವನ್ನೂ ಮುಂದಿಡಲಾಗಿದ್ದು, ಇದೇ ಕಾರಣಕ್ಕೆ ಹೆಚ್ಚು ಸಚಿವರನ್ನು ಕಣಕ್ಕಿಳಿಸುವುದು ಬೇಡ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಕಾರ್ಯಕರ್ತರು ಹಾಗೂ ಲೋಕಸಭಾ ಚುನಾವಣೆಯ ಆಕಾಂಕ್ಷಿಗಳಿಗೂ ಇದು ನಿರಾಸೆ ಮೂಡಿಸಲಿದೆ. ಶಾಸಕರು, ಸಚಿವರು, ಸಂಸದರೂ ಅವರೇ ಆದರೆ ನಮ್ಮ ಕತೆ ಏನು ಎಂಬ ಅಪಸ್ವರಕ್ಕೂ ಇದು ಕಾರಣವಾಬಹುದು. ಅಲ್ಲದೆ ಕೆಲವು ಸಚಿವರಿಗೆ ಹೀಗೆ ಆರು ತಿಂಗಳ ಅಂತರದಲ್ಲಿ ಮತ್ತೆ ಚುನಾವಣೆ ಎದುರಿಸಲು ಮನಸ್ಸಿಲ್ಲ. ಆದರೆ ಪಕ್ಷದಿಂದ ಸೂಚನೆ ಬಂದರೆ ಚುನಾವಣೆಗೆ ಧುಮುಕುವುದು ಅನಿವಾರ್ಯವಾಗಲಿದೆ. ಹಾಗಾಗಿ ಇದು ಕೆಲವರಿಗೆ ಬಿಸಿತುಪ್ಪವಾಗಿಯೂ ಪರಿಣಮಿಸಲಿದೆ.

Advertisement

ಖಾಸಗಿ ಏಜೆನ್ಸಿಯಿಂದಲೂ ಸಮೀಕ್ಷೆ?
ಇದೆಲ್ಲದರ ನಡುವೆ ಸುನಿಲ್‌ ಕನಗೋಲು ತಂಡದ ಜತೆಗೆ ಇನ್ನೊಂದು ಖಾಸಗಿ ಏಜೆನ್ಸಿಯಿಂದಲೂ ಕಾಂಗ್ರೆಸ್‌ ಮತ್ತೂಂದು ಸಮೀಕ್ಷೆ ನಡೆಸುತ್ತಿದೆ. ಸಚಿವರು ನೀಡಿದ ಅಭ್ಯರ್ಥಿಗಳಲ್ಲಿ ಯಾರು ಸೂಕ್ತ ಎಂಬುದರ ಬಗ್ಗೆ ಈ ಏಜೆನ್ಸಿ ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಿಸಲಿದೆ. ಅಂತಿಮವಾಗಿ ಈ ಎಲ್ಲ ವರದಿಗಳನ್ನು ತುಲನೆ ಮಾಡಿ, ಹೈಕಮಾಂಡ್‌ ಅಭ್ಯರ್ಥಿಗಳ ಹೆಸರು ಘೋಷಿಸಲಿದೆ ಎನ್ನಲಾಗಿದೆ.

ಯಾರೀ ಉಸ್ತುವಾರಿಗಳು?
ಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲು ಕಾಂಗ್ರೆಸ್‌ ಹೈಕಮಾಂಡ್‌ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಿತ್ತು. ಸಮೀಕ್ಷೆ ನಡೆಸಿ ಆಕಾಂಕ್ಷಿಗಳ ಹೆಸರುಗಳನ್ನು ಸೂಚಿಸುವ ಜವಾಬ್ದಾರಿ ಆ ಉಸ್ತುವಾರಿಗಳದ್ದಾಗಿತ್ತು. ಅದರಂತೆ ಸಮೀಕ್ಷೆ ನಡೆಸಿ ವರದಿ ನೀಡಿದ್ದಾರೆ. ಮೂಲಗಳ ಪ್ರಕಾರ ಒಂದೊಂದು ಕ್ಷೇತ್ರಕ್ಕೆ ಮೂರ್‍ನಾಲ್ಕು ಹೆಸರುಗಳನ್ನು ಶಿಫಾರಸು ಮಾಡಿದ್ದಾರೆ. ಆದರೆ ಈ ಉಸ್ತುವಾರಿಗಳಲ್ಲೇ ಕೆಲವರನ್ನು ಕಣಕ್ಕಿಳಿಸುವ ಚಿಂತನೆ ನಡೆದಿದೆ.

ಸಚಿವರ ಸ್ಪರ್ಧೆ ಅನಿವಾರ್ಯವಾದರೆ ಸಿದ್ಧರಾಗಲು ಸೂಚನೆ ಬಂದಿದೆ. ಕಳೆದ ಬಾರಿ ಸ್ಪರ್ಧಿಸಿದ್ದ ಕೃಷ್ಣ ಭೈರೇಗೌಡರ ಉದಾಹರಣೆ ನೀಡಿದ್ದಾರೆ. ಜ. 11ರಂದು ಕ್ಷೇತ್ರದ ಉಸ್ತುವಾರಿ ವಹಿಸಿರುವ ಸಚಿವರನ್ನು ದಿಲ್ಲಿಗೆ ಕರೆದಿ ದ್ದಾರೆ. ಈ ವೇಳೆ ಆಯಾ ಕ್ಷೇತ್ರಕ್ಕೆ ಸಂಬಂಧಿ ಸಿದ ಅಭ್ಯರ್ಥಿಗಳ ಆಯ್ಕೆ ವಿಚಾರ ಚರ್ಚೆ ಆಗಲಿದ್ದು, ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ.
-ಡಾ| ಪರಮೇಶ್ವರ, ಗೃಹ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next