Advertisement

ಕ್ಯಾನ್ಸರ್ ವಿಮೆಗೆ ಹಿಂಜರಿಕೆ ಬೇಡ; ಇಂದಿನ ಸಂದರ್ಭದಲ್ಲಿ ಅದು ಅಗತ್ಯ

11:44 AM Jul 23, 2018 | Team Udayavani |

ಕ್ಯಾನ್ಸರ್ ಎಂದಾಕ್ಷಣ ಎಲ್ಲರೂ ಬೆಚ್ಚಿ ಬೀಳುವುದು ಸಹಜ. ಏಕೆಂದರೆ ಕ್ಯಾನ್ಸರ್ ಒಂದು ಭಯಾನಕ ಕಾಯಿಲೆ; ಯಾತನೆ, ಸಾವು ನಿಶ್ಚಿತ.

Advertisement

ಕ್ಯಾನ್ಸರ್ ಚಿಕಿತ್ಸೆಗೆ ತಗಲುವ ಖರ್ಚು ಅತ್ಯಪಾರ. ಮಧ್ಯಮ ವರ್ಗದವರು, ಬಡವರಿಗೆ ಕ್ಯಾನ್ಸರ್ ಬಂತೆಂದರೆ ಕೂಡಿಟ್ಟ ಹಣವೆಲ್ಲ ಕ್ಯಾನ್ಸರ್ ಚಿಕಿತ್ಸೆಗಾಗಿ ಕರಗಿ ಹೋಗುತ್ತದೆ. ಹಾಗಿರುವಾಗ ನಾವು ಏನು ಮಾಡಬೇಕು ? 

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಶೇ.35ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ನಾವು ದಿನನಿತ್ಯ ತಿನ್ನುವ ವಿಷಯುಕ್ತ ರಾಸಾಯನಿಕ ಆಹಾರ ಪದಾರ್ಥಗಳೇ ಕಾರಣ ! ಬೇಕಾಬಿಟ್ಟಿ  ರಾಸಾಯನಿಕ ಕೃಷಿಯಿಂದಾಗಿ ಹೆಚ್ಚಿನ ಆಹಾರ ಉತ್ಪನ್ನಗಳು ಕ್ಯಾನ್ಸರ್ ಕಾರಕ ಆಗಿವೆ ಎಂದು ವರದಿಗಳು ಹೇಳುತ್ತವೆ. ಅಂದ ಹಾಗೆ ಜಗತ್ತಿನಲ್ಲೀಗ  ಸಂಭವಿಸುತ್ತಿರುವ ಪ್ರತೀ ಆರು ಸಾವುಗಳಲ್ಲಿ ಒಂದು ಸಾವಿಗೆ ಕ್ಯಾನ್ಸರ್ ಕಾರಣವಾಗಿದೆ. 

ಕ್ಯಾನ್ಸರ್ ಇಂದು ನಮ್ಮ ಸುತ್ತಮುತ್ತಲಲ್ಲೇ, ನೆರೆಕರೆಯಲ್ಲೇ, ಮನೆಯಲ್ಲೇ ಇದೆ ಎಂಬಂತಹ ಭಯಾನಕ ಸ್ಥಿತಿ ಉತ್ಪನ್ನವಾಗಿದೆ. ಸಾಮಾನ್ಯರ ತಿಳಿವಳಿಕೆ ಪ್ರಕಾರ ತಂಬಾಕು ಸೇವನೆ, ಬೀಡಿ – ಸಿಗರೇಟ್ ಚಟ, ಜರ್ದಾ ಇತ್ಯಾದಿಗಳು ಕ್ಯಾನ್ಸರ್ಗೆ ಕಾರಣವಾಗುತ್ತವೆ. ಆದರೆ ಈ ಯಾವುದೇ ದುರಭ್ಯಾಸ ಇಲ್ಲದವರಿಗೂ ಕ್ಯಾನ್ಸರ್ ಬಂದಿರುವ ಹಲವಾರು ಉದಾಹರಣೆಗಳಿವೆ. ಕ್ಯಾನ್ಸರ್ ಯಾವಾಗ, ಏಕೆ, ಹೇಗೆ ಬರುತ್ತದೆ ಎಂಬ ಬಗ್ಗೆ ವೈದ್ಯಕೀಯ ವಿಜ್ಞಾನದಲ್ಲಿ ನಿಖರವಾದ ಉತ್ತರವಿಲ್ಲ.

ಈಚೆಗೆ ಚಿತ್ರ ನಟಿ ಸೋನಾಲಿ ಬೇಂದ್ರೆ ತನಗೆ ಕ್ಯಾನ್ಸರ್ ರೋಗ ಬಂದಿದೆ ಎಂದು ಬಹಳ ದುಃಖದಿಂದ ಹೇಳಿಕೊಂಡಿದ್ದಳು. ಕೆಮೊಥೆರಪಿಯಿಂದಾಗಿ ತಲೆ ಕೂದಲು ಕಳೆದುಕೊಂಡಾಗಲಂತೂ ಗಳಗಳನೇ ಅತ್ತಳು. ಹಿರಿಯ ನಟ ವಿನೋದ್ ಖನ್ನಾ, ಕನ್ನಡದ ಕಾಶೀನಾಥ್  ಕ್ಯಾನ್ಸರ್‌ ಗೆ ಬಲಿಯಾದ ಈಚಿನ ಉದಾಹರಣೆಗಳು. ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ ಇರ್ಫಾನ್ ಖಾನ್ ಪ್ರಕೃತ ಒಂದು ಬಗೆಯ ಕ್ಯಾನ್ಸರ್ಗೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಮಾಜಿ ರಕ್ಷಣಾ ಸಚಿವ, ಗೋವೆಯ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಕೂಡ ಅಮೆರಿಕದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾರೆ. 

Advertisement

ಹಾಗಿದ್ದರೂ ವೈದ್ಯಕೀಯ ರಂಗದಲ್ಲಿನ ನವನವೀನ  ಸಂಶೋಧನೆ, ಆವಿಷ್ಕಾರಗಳ ಫಲವಾಗಿ ಕ್ಯಾನ್ಸರ್ ರೋಗವನ್ನು ಇಂದು ಆರಂಭದ ದೆಸೆಯಲ್ಲೇ ಪತ್ತೆ ಹಚ್ಚುವುದು ಸಾಧ್ಯವಾಗಿದೆ ಮತ್ತು ಅದರ ನಿವಾರಣೆಗೆ ಯಶಸ್ವೀ ಚಿಕಿತ್ಸೆಯನ್ನು ಪಡೆಯುವುದು ಸಾಧ್ಯವಾಗಿದೆ. ಈ ಅತ್ಯಾಧುನಿಕ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ಭರಿಸಲು ಎಲ್ಲ ವರ್ಗದ ಜನರಿಗೆ ಸಾಧ್ಯವಾಗುವುದಕ್ಕಾಗಿ ಹಲವು ಪ್ರಮುಖ ಕಂಪೆನಿಗಳು ಪರಿಚಯಿಸಿರುವ  ಕ್ಯಾನ್ಸರ್ ವಿಮೆ ಇಂದು ಹೆಚ್ಚು ಪ್ರಚಲಿತವಾಗಿದೆ. ಅತ್ಯಧಿಕ 60 ಲಕ್ಷ ರೂ. ವರೆಗೆ ಕ್ಯಾನ್ಸರ್ ವಿಮೆ ಪಡೆಯವುದಕ್ಕೆ ಇಂದು ಅವಕಾಶವಿದೆ. 

ಕ್ಯಾನ್ಸರ್ ವಿಮೆಗಳು ಆರಂಭದ ಹಂತದ ಪತ್ತೆಯಿಂದ ತೊಡಗಿ ಮುಂದುವರಿದ ಹಂತದ ವರೆಗಿನ ಚಿಕಿತ್ಸೆಗೆ ಹಣಕಾಸು ನೆರವು ಒದಗಿಸುತ್ತವೆ. ಅಂತೆಯೇ ಕ್ಯಾನ್ಸರ್ ವಿಮೆ ಹೊಂದಿರುವ ವ್ಯಕ್ತಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿ ಚಿಕಿತ್ಸೆ ಆರಂಭವಾಯಿತೆಂದರೆ, ವಿಮಾ ಪ್ಲಾನ್ಗೆ ಅನುಗುಣವಾಗಿ, ಮುಂದಿನ ಮೂರರಿಂದ ಐದು ವರ್ಷಗಳ ವರೆಗಿನ ಪ್ರೀಮಿಯಂ ಗಳು, ಮಾಫಿಯಾಗುತ್ತವೆ. ಇದರಿಂದಾಗಿ ಕ್ಯಾನ್ಸರ್ ವಿಮೆ ಹೊಂದಿರುವವರ ಮೇಲಿನ ಆರ್ಥಿಕ ಒತ್ತಡ ಗಮನಾರ್ಹವಾಗಿ ಕಡಿಮೆ ಯಾಗುತ್ತದೆ. 

ಕ್ಯಾನ್ಸರ್ ವಿಮೆ ಕ್ಲೇಮುಗಳ ಸೆಟ್ಲ ಮೆಂಟ್ ಪ್ರಕ್ರಿಯೆ ಸರಳವಾಗಿರುತ್ತದೆ. ಏಕೆಂದರೆ ಅವು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದಂತೆ ಕ್ಯಾನ್ಸರ್ ಪೀಡಿತ ವ್ಯಕ್ತಿಯು ಭರಿಸುವ ಮೊತ್ತವನ್ನು ಮೊದಲೇ ನಿರ್ಧರಿಸಿರುತ್ತವೆ; ಅಂತೆಯೇ ಅವು ನಿಶ್ಚಿತ ಫಲಾನುಭವದ ಪಾಲಿಸಿಗಳಾಗಿರುತ್ತವೆ. 

ಸಾಮಾನ್ಯ ಆರೋಗ್ಯ ವಿಮಾ ಪಾಲಿಸಿಗಳಡಿ, ಅನಾರೋಗ್ಯ ಪೀಡಿತ ವಿಮಾದಾರನು ಆಸ್ಪತ್ರೆಗೆ ದಾಖಲಾದಾಗ ಭರಿಸಲಾಗುವ ಚಿಕಿತ್ಸಾ ವೆಚ್ಚಗಳನ್ನು ಕ್ಯಾಶ್ ಲೆಸ್ ಆಗಿ ಇಲ್ಲವೇ ರೀಇಂಬರ್ಸ್ಮೆಂಟ್ ರೂಪದಲ್ಲಿ  ಪಾವತಿಸುತ್ತವೆ. ಆದರೆ ಕ್ಯಾನ್ಸರ್ ವಿಮೆಗಳು, ಚಿಕಿತ್ಸಾ ಅವಧಿಯಲ್ಲಿ ವ್ಯಕ್ತಿಯ ಪಾಲಿಗೆ ನಷ್ಟವಾಗುವ ಆತನ ಆದಾಯವನ್ನು ಕೂಡ ಭರಿಸಿಕೊಡುತ್ತವೆ; ಮುಖ್ಯವಾಗಿ ಕ್ಯಾನ್ಸರ್ ಪೀಡಿತ ಪಾಲಿಸಿದಾರನಿಗೆ, ಉದ್ಯೋಗವನ್ನೇ ತೊರೆಯಬೇಕಾದ ಸ್ಥಿತಿ ಬಂದಲ್ಲಿ  ಈ ವಿಮೆಗಳು ಆರ್ಥಿಕ ಭದ್ರತೆಯನ್ನು ಒದಗಿಸುತ್ತವೆ. ವ್ಯತ್ಯಸ್ತ ಪ್ರೀಮಿಯಂ, ಮತ್ತು ಕ್ಲೇಮ್ ಮುಕ್ತ ವರ್ಷದ ಪ್ರಯುಕ್ತ ಶೇ.10ರ ಹೆಚ್ಚುವರಿ ವಿಮೆಯನ್ನು ಕೂಡ ಈ ಪಾಲಿಸಿಗಳು ಒದಗಿಸುತ್ತವೆ. 

ಕ್ಯಾನ್ಸರ್ ವಿಮಾ ಪಾಲಿಸಿಯಡಿ ನಮೂದಿಸಲಾಗಿರುವ ಭರವಸೆಗಳು, ಅವುಗಳ ಶರತ್ತು ಮತ್ತು ನಿಬಂಧನೆಗಳನ್ನು ವಿಮೆ ಖರೀದಿಗೆ ಮುನ್ನವೇ ಕೂಲಂಕಷವಾಗಿ ತಿಳಿದುಕೊಳ್ಳುವುದು ತುಂಬ ಅಗತ್ಯ. ಕ್ಯಾನ್ಸರ್ ಚಿಕಿತ್ಸೆಯ ಯಾವೆಲ್ಲ ಅಂಶಗಳು ವಿಮೆಯಲ್ಲಿ ಒಳಗೊಳ್ಳುತ್ತವೆ; ಯಾವುವು ಒಳಗೊಳ್ಳುವುದಿಲ್ಲ ಇತ್ಯಾದಿ ವಿಚಾರಗಳು ಬಹುಮುಖ್ಯ. ಅದನ್ನು ಚೆನ್ನಾಗಿ ಅರಿತುಕೊಂಡೇ ಕ್ಯಾನ್ಸರ್ ವಿಮಾ ಪಾಲಿಸಿಗಳನ್ನು ಖರೀದಿಸುವುದು ಒಳಿತು. 

ಕ್ಯಾನ್ಸರ್ ವಿಮಾ ಪಾಲಿಸಿಗಳನ್ನು  ನೀಡುವ ಕೆಲವೊಂದು ಕಂಪೆನಿಗಳ ಪ್ಲಾನ್ ವಿವರಗಳನ್ನು ನಾವಿಲ್ಲಿ ಅವಲೋಕಿಸಬಹುದು.

ಎಚ್ ಡಿ ಎಫ್ ಸಿ ಲೈಫ್ :
ಕ್ಯಾನ್ಸರ್ ಕೇರ್ ಪ್ಲಾಟಿನಂ
ವಾರ್ಷಿಕ ಪ್ರೀಮಿಯಂ : 6,373 ರೂ. 
ಪಾಲಿಸಿ ಅವಧಿ : 20 ವರ್ಷ

ಗುಣ ಲಕ್ಷಣಗಳು : 
* ಎಲ್ಲ ಹಂತದ ಕ್ಯಾನ್ಸರ್‌ ಗೆ  ರಕ್ಷಣೆ
* ಪ್ರತಿಯೊಂದು ಹಂತದಲ್ಲೂ ಪರಿಹಾರ
*ಮೈನರ್ ಸ್ಟೇಜ್ ಚಿಕಿತ್ಸೆಯ ವೇಳೆ 3 ವರ್ಷ ಮಟ್ಟಿಗೆ ಪ್ರೀಮಿಯಂ ಪಾವತಿ ಮಾಫಿ
* ವಿಮಾ ಭರವಸೆ ಮೊತ್ತದ ಶೇ.200ರಷ್ಟು ನೋ ಕ್ಲೇಮ್ ಬೋನಸ್
* ಒನ್ ಟೈಮ್ ಪೇ ಔಟ್ + ಹೆಚ್ಚುವರಿ ಮಾಸಿಕ ಪಾವತಿಯ ವಿಮಾ ಭರವಸೆ ಮೊತ್ತದ ಶೇ.1.

ಮ್ಯಾಕ್ಸ್ ಲೈಫ್ ಇನ್‌ಶೂರೆನ್ಸ್‌ :
ಕ್ಯಾನ್ಸರ್ ವಿಮೆ 
ವಾರ್ಷಿಕ ಪ್ರೀಮಿಯಂ 12,73 ರೂ. ಪಾಲಿಸಿ ಅವಧಿ : 40 ವರ್ಷ

ಗುಣ ಲಕ್ಷಣಗಳು : 
* ಎಲ್ಲ ಹಂತದ ಕ್ಯಾನ್ಸರ್‌ ಗೆ  ವಿಮೆ
* ಪ್ರತಿಯೊಂದು ಹಂತದಲ್ಲೂ ಪರಿಹಾರ
*ಮೈನರ್ ಸ್ಟೇಜ್ ಚಿಕಿತ್ಸೆಯ ವೇಳೆ ಭವಿಷ್ಯತ್ತಿನ ಎಲ್ಲ ಪ್ರೀಮಿಯಂಗಳು ಮಾಫಿ
* ಮಲ್ಟಿಪಲ್ ಕ್ಯಾನ್ಸರ್ಗಳಿಗೆ ಕ್ಲೇಮ್ ಅವಕಾಶ
* ವಿಮಾ ಭರವಸೆ ಮೊತ್ತದ ಶೇ.150ರಷ್ಟು  ನೋ ಕ್ಲೇಮ್ ಬೋನಸ್ (ಎನ್ಸಿಬಿ)
* ಒನ್ ಟೈಮ್ ಪೇ ಔಟ್ + ಮೂಲ ಭರವಸೆಯ ವಿಮಾ ಮೊತ್ತದ ಶೇ.10 ವರ್ಷಂಪ್ರತಿ ಪಾವತಿ

ಪಿ ಎನ್‌ ಬಿ ಮೆಟ್ ಲೈಫ್ : 
ಕ್ಯಾನ್ಸರ್ ಕೇರ್ ಪ್ಲಾಟಿನಂ
ವಾರ್ಷಿಕ ಪ್ರೀಮಿಯಂ : 18,241 ರೂ.
ಪಾಲಿಸಿ ಅವಧಿ : 20 ವರ್ಷ 
ಗುಣ ಲಕ್ಷಣಗಳು :
* ಎಲ್ಲ ಹಂತದ ಕ್ಯಾನ್ಸರ್ ಒಳಗೊಳ್ಳುತ್ತದೆ
*ಪ್ರತೀ ಹಂತದಲ್ಲೂ ಪರಿಹಾರ
* ಸಣ್ಣ  ಅಥವಾ ಮಧ್ಯಮ ಹಂತದ ಕ್ಯಾನ್ಸರ್ ಚಿಕಿತ್ಸೆಯ ವೇಳೆ 5 ವರ್ಷ ಪ್ರೀಮಿಯಂ ಪಾವತಿ ಮಾಫಿ
* ಬಹು ವಿಧದ ಕ್ಯಾನ್ಸರ್ಗಳಿಗೆ ಕ್ಲೇಮ್
* ಅಂತರ್ಗತ ಅವಧಿ ವಿಮೆ ಸೌಲಭ್ಯ

ಐಸಿಐಸಿಐ ಪ್ರುಡೆನ್ಶಿಯಲ್ : 
ಕ್ಯಾನ್ಸರ್ ಪ್ರೊಟೆಕ್ಟ್ 
ವಾರ್ಷಿಕ ಪ್ರೀಮಿಯಂ : 6,762 ರೂ.
ಪಾಲಿಸಿ ಅವಧಿ : 40 ವರ್ಷ
ಗುಣ ಲಕ್ಷಣಗಳು :
* ಎಲ್ಲ ಹಂತದ ಕ್ಯಾನ್ಸರ್ ಒಳಗೊಳ್ಳುತ್ತವೆ
* ಪ್ರತಿಯೊಂದು ಹಂತದಲ್ಲೂ ಪರಿಹಾರ 
* ಸಣ್ಣ ಹಂತದ ಚಿಕಿತ್ಸೆಯ ವೇಳೆಯಲ್ಲೇ ಎಲ್ಲ ಭವಿಷ್ಯತ್ ಪ್ರೀಮಿಯಂ ಮಾಫಿ
* ಬಹುವಿಧದ, ಪರಸ್ಪರ ಸಂಬಂಧವಿಲ್ಲ, ಕ್ಯಾನ್ಸರ್ ಕ್ಲೇಮ್ಗಳಿಗೆ ಅವಕಾಶ. 

ಏಜಿಯಾನ್ ಲೈಫ್ ಇನ್ಶುರೆನ್ಸ್ : 
ಐಕ್ಯಾನ್ಸರ್ 
ವಾರ್ಷಿಕ ಪ್ರೀಮಿಯಂ : 8,879 ರೂ.
ಪಾಲಿಸಿ ಅವಧಿ : 35 ವರ್ಷ

ಗುಣ ಲಕ್ಷಣಗಳು : 

* ಎಲ್ಲ ಹಂತದ ಕ್ಯಾನ್ಸರ್ ಒಳಗೊಳ್ಳುತ್ತವೆ
* ಪ್ರತೀ ಹಂತದಲ್ಲೂ ಪರಿಹಾರ; ಮೇಜರ್ ಸ್ಟೇಜ್ ಕ್ಯಾನ್ಸರ್ ಚಿಕಿತ್ಸೆ ಸಂದರ್ಭದಲ್ಲಿ ಎಲ್ಲ ಭವಿಷ್ಯತ್ ಪ್ರೀಮಿಯಂ ಮಾಫಿ.
* ಗಂಭೀರ ಸ್ಥಿತಿಯಲ್ಲಿ ಹೆಚ್ಚುವರಿ ಪೇ ಔಟ್. 
 

Advertisement

Udayavani is now on Telegram. Click here to join our channel and stay updated with the latest news.

Next