ಬಂಗಾರಪೇಟೆ: ಪಟ್ಟಣದ ಕೋಲಾರ ರಸ್ತೆಯ ರೈಲ್ವೆ ಗೇಟಿನಿಂದ ಕೆಜಿಎಫ್ ರಸ್ತೆಯ ಆರ್.ಆರ್.ಕಲ್ಯಾಣ ಮಂಟಪದವರೆಗೂ ರಸ್ತೆ ಮಧ್ಯೆದಲ್ಲಿರುವ ವಿದ್ಯುತ್ ಕಂಬಗಳ ಮೇಲೆ ನಾಮಫಲಕ ಹಾಕಿಕೊಳ್ಳುವುದಕ್ಕೆ ಟೆಂಡ ರ್ ಕರೆಯದೆ, ಶಾಸಕ ನಾರಾಯಣಸ್ವಾಮಿ ಬೆಂಬಲಿತ 2 ಸಂಸ್ಥೆಗಳಿಗೆ ಕಾನೂನು ವಿರುದ್ಧವಾಗಿ ನೀಡಿರುವುದನ್ನು ಟೆಂಡರನ್ನು ಡೀಸಿ ರದ್ದು ಮಾಡಿ ಆದೇಶ ಮಾಡಿದ್ದಾರೆ.
ಸೆ.8ರಂದು ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಂಡಿರುವ ಈ ತೀರ್ಮಾನವು ಕರ್ನಾಟಕ ಪೌರಸೇವಾ ಅಧಿನಿಯಮಗಳ ನಿಯಮ 1964 72(2) ಇದರ ವಿರುದ್ಧವಾಗಿರುವುದರಿಂದ ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ಆದೇಶದಂತೆ ಡೀಸಿ ಅಧಿಕಾರ ಉಪಯೋಗಿಸಿ, ರದ್ದು ಮಾಡಿರುವುದರಿಂದ ಪುರಸಭೆ ಮುಖಭಂಗವಾಗಿದೆ.
ಪಟ್ಟಣದ ಡಬಲ್ ರಸ್ತೆಯ ವಿದ್ಯುತ್ ಕಂಬಗಳ ಮೇಲೆ ಬ್ಯಾನರ್, ಕಟೌಟ್ ಹಾಕಿಕೊಳ್ಳಲು 5 ವರ್ಷಗಳ ಹಿಂದೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಂಬಲಿತ ಎಸ್‌ಎನ್ ಗ್ರೂಪ್‌ನ ಸನ್ಮಾರ್ಗ ಶೆಲ್ಟರ್ ಪ್ರೈವೇಟ್ ಲಿಮಿಟೆಡ್, ಎಸ್‌ಎನ್ ಇಂಡಿಯನ್ ಗಾರ್ಮೆಂಟ್ಸ್ ಎಂಬ 2 ಸಂಸ್ಥೆಗಳ ಮೂಲಕ ಪ್ರತಿ ತಿಂಗಳ 1 ಲಕ್ಷದಂತೆ 5 ವರ್ಷಗಳಿಗೆ ಮಂಜೂರಾತಿ ನೀಡಿದ್ದ ಬಗ್ಗೆ ಸೆ.8ರಂದು ನಡೆದ ಸಭೆಯಲ್ಲಿ ಈ ವಿಚಾರ ಪ್ರಶ್ನಿಸಿದ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಪುರಸಭೆ ಅಧ್ಯಕ್ಷೆ ಫರ್ಜಾನಾ ಸುಹೇಲ್ ನಡುವೆ ವಾಗ್ವಾದ ನಡೆದಿತ್ತು. ಈ ಕರಾರು ಆ.25ರಂದು ಕೊನೆಗೊಳ್ಳುತ್ತಿರುವುದರಿಂದ ಮತ್ತೆ 5 ವರ್ಷ ಅವಧಿಗೆ ಮುಂಗಡವಾಗಿ ನವೀಕರಣಗೊಳಿ ಸಲು ಮಾ.30ರಂದು ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನವನ್ನು ಚಂದ್ರಾರೆಡ್ಡಿ ಖಂಡಿಸಿದರು. ಸಭೆಯಲ್ಲಿ ಅಧ್ಯಕ್ಷರ ಅಪ್ಪಣೆ ಮೇರೆಗೆ ಕೇವಲ 3 ವಿಷಯ ಚರ್ಚೆ ಮಾಡಬಹುದಾಗಿದ್ದರೂ, ಇದನ್ನು 17ನೇ ವಿಷಯವಾಗಿ ಚರ್ಚಿಸಿ, ಕಾನೂನು ವಿರುದ್ಧವಾಗಿ ತೀರ್ಮಾನ ಸರಿಯಿಲ್ಲ ಎಂದು ಅಧ್ಯಕ್ಷರ ವಿರುದ್ಧ ವಾಗ್ಧಾಳಿ ನಡೆಸಿದರು.
ಈ ಟೆಂಡರ್ 10 ಲಕ್ಷಕ್ಕೆ ಟೆಂಡರ್ ಹೋಗುತ್ತಿತ್ತು. ಆದರೆ, ಶಾಸಕರು ಪುರಸಭೆ ಸದಸ್ಯರನ್ನು ಒಪ್ಪಿಸಿ, ಅಗ್ಗದ ಬೆಲೆಗೆ ಪಡೆಯುವ ಮೂಲಕ ನಿಯಮ ಉಲ್ಲಂ ಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಡೀಸಿ, ನಗರಾಭೀವೃದ್ಧಿ ಇಲಾಖೆಗೆ ದೂರು ನೀಡಿ, ನಿಯಮ ಉಲ್ಲಂ ಸಿ ಪುರಸಭೆ ಶಾಸಕರಿಗೆ ರಸ್ತೆ ವಿಭಜಗಳಲ್ಲಿ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡಿದೆ. ಇದನ್ನು ರದ್ದುಗೊಳಿಸಲು ದೂರು ನೀಡಿದ್ದರು. ಸಭೆಯಲ್ಲೂ ಈ ಬಗ್ಗೆ ಧ್ವನಿ ಎತ್ತಿ ವಿರೋಧವ್ಯಕ್ತಪಡಿಸಿದರು.
ಆದರೂ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಗ್ಗದ ಬೆಲೆಗೆ ಅನುಮತಿಗಳಿಸಿದ್ದರು. ಡೀಸಿ ಪುರಸಭೆಯು ಅನಧಿಕೃತವಾಗಿ ನೀಡಿರುವ ಟೆಂಡರ್ ರದ್ದುಪಡಿಸಿ, ಅವರು ಪಾವತಿ ಮಾಡಿರುವ 1 ಲಕ್ಷ ರೂ. ಹಿಂತಿರುಗಿಸಬೇಕೆಂದು ಸೂಚಿಸಿರುವುದರಿಂದ ಪುರಸಭೆ ಮುಖ್ಯಾಧಿಕಾರಿಗಳು ಸನ್ಮಾರ್ಗ ಶೆಲ್ಟರ್ಗೆ ಹಾಗೂ ಎಸ್‌ಎನ್ ಇಂಡಿಯನ್ ಗಾರ್ಮೆಂಟ್ಸ್ ನೋಟಿಸ್ ನೀಡಿ, ತಮ್ಮ ಟೆಂಡರ್ ರದ್ದಾಗಿದ್ದು ಈ ಕೂಡಲೇ ರಸ್ತೆ ವಿಭಜಕಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕ ತೆರವು ಮಾಡುವಂತೆ ಸೂಚಿಸಿದ್ದಾರೆ.