ಮೈಸೂರು: ನಿಷೇಧಿತ ನೋಟುಗಳ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರ ಮೇಲೆ ಪ್ರತಿ ದಾಳಿ ಮಾಡಿದ ವ್ಯಕ್ತಿ ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ಘಟನೆ ಸಂಭವಿಸಿದೆ.
ಇಬ್ಬರು ಪರಾರಿ, ಕಾರು ವಶಕ್ಕೆ: ಘಟನೆಯಲ್ಲಿ ಸುಖ್‌ವಿಂದರ್ ಸಿಂಗ್ ಪೊಲೀಸರ ಗುಂಡಿಗೆ ಬಲಿಯಾಗಿದ್ದು, ಸ್ಥಳದಲ್ಲಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳ ಬಳಿ ಇದ್ದ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ. ಕಾರಿನ ಮಾಲೀಕ ಮೈಸೂರಿನ ಮಂಡಿ ಮೊಹಲ್ಲಾದ ನಿವಾಸಿ ಎಂದು ತಿಳಿದು ಬಂದಿದೆ.
ಘಟನೆ ವಿವರ: ಬೆಳಗ್ಗೆ 9.30ರ ಸಮಯದಲ್ಲಿ ಅಪಾರ್ಟ್‌ಮೆಂಟ್ ಬಳಿ ನಿಷೇಧಿತ ನೋಟುಗಳ ಬದಲಾವಣೆಗೆ ಗುಂಪೊಂದು ಬಂದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಆಧರಿಸಿ, ವಿಜಯ ನಗರ ಠಾಣೆಯ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರ್ ಮತ್ತು ಮೂವರು ಸಿಬ್ಬಂದಿ, ಕಾರ್ಯಾಚರಣೆಗೆ ಇಳಿದಿದ್ದಾರೆ. ಅಪಾರ್ಟ್‌ಮೆಂಟ್ ಎದುರು ರಿಂಗ್ ರಸ್ತೆಯಲ್ಲಿ ಆರೋಪಿಗಳು ತೆರಳುತ್ತಿದ್ದ ಕಾರನ್ನು, ತಮ್ಮ ಜೀಪ್‌ನ ಮೂಲಕ ಅಡ್ಡ ಹಾಕಿದ ಪೊಲೀಸರು, ಕಾರಿನಲ್ಲಿದ್ದವರನ್ನು ಹಿಡಿಯಲು ಯತ್ನಿಸಿದ್ದಾರೆ. ಪೊಲೀಸರನ್ನು ಕಂಡೊಡನೆ ಇಬ್ಬರು ಪರಾರಿಯಾಗಿದ್ದು, ಒಬ್ಬನನ್ನು ಪೊಲೀಸರು ಹಿಡಿದಿದ್ದಾರೆ. ತಕ್ಷಣ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಆತ, ತನ್ನ ಬಳಿ ಇದ್ದ ರಿವಲ್ವಾರ್ ಎತ್ತಿಕೊಳ್ಳಲು ಮುಂದಾಗಿದ್ದಾನೆ. ಈ ಸಂದರ್ಭ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಬಿ.ಜಿ. ಕುಮಾರ್ ತಮ್ಮಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದು, ಆತ ಕೆಳಗೆ ಬಿದ್ದಿದ್ದಾನೆ. ಗುಂಡೇಟಿನಿಂದ ಗಾಯಗೊಂಡಿದ್ದ ವ್ಯಕ್ತಿಯನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಪರಿಶೀಲನೆ: ಘಟನಾ ಸ್ಥಳಕ್ಕೆ ಮೈಸೂರು ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ , ಡಿಸಿಪಿ ಎಂ. ಮುತ್ತುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಮುಂಬೈ ಮೂಲದ ಸುಖ್‌ವಿಂದರ್ ಸಿಂಗ್ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿ. ಮೈಸೂರು ನಗರದ ಹಿನಕಲ್ ರಿಂಗ್ ರಸ್ತೆ ಜಂಕ್ಷನ್ ಬಳಿಯ ಎಸ್‌ವಿ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಎದುರು ಗುರುವಾರ ಬೆಳಗ್ಗೆ 9.30 ರ ಸಮಯದಲ್ಲಿ ಈ ಘಟನೆ ಜರುಗಿದೆ.
Related Articles
Advertisement
ಹಳೆ ನೋಟುಗಳ ಬದಲಾವಣೆಗೆ ಬಂದಿದ್ದವರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದು, ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಲ್ಲದೇ, ಒಬ್ಟಾತ ಪ್ರತಿ ದಾಳಿ ನಡೆಸಿದ್ದಾನೆ. ಈ ವೇಳೆ ನಮ್ಮ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಗುಂಡು ಹಾರಿಸಿದ್ದು, ಒರ್ವ ಮೃತಪಟ್ಟಿದ್ದು, ಉಳಿದವರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ಸ್‌ಪೆಕ್ಟರ್ ಗುಂಡು ಹಾರಿಸಿರುವುದರಿಂದ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮಾರ್ಗ ಸೂಚಿ ಅನ್ವಯ ತನಿಖೆ ನಡೆಸಲಾಗುತ್ತದೆ.●ಕೆ.ಟಿ. ಬಾಲಕೃಷ್ಣ , ನಗರ ಪೊಲೀಸ್ ಆಯುಕ್ತ