ಶಿವಮೊಗ್ಗ: ಕೋವಿಡ್ ಸಂಬಂಧಿಸಿದ ಎಲ್ಲಾ ಔಷ ಧಗಳ ಮೇಲಿನ ಜಿಎಸ್‌ಟಿ ರದ್ದುಗೊಳಿಸುವಂತೆ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ನಗರದಲ್ಲಿ ಅಲೆಮಾರಿ ಸಮುದಾಯದ ನಿವಾಸಿಗಳಿಗೆ ಆಹಾರ ಕಿಟ್ ವಿತರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಕೋವಿಡ್ ವೈರಸ್ ವಿಶ್ವವನ್ನೇ ಕಾಡುತ್ತಿದೆ. ಜನರ ಬಳಿ ಹಣವಿಲ್ಲ. ಇಂತಹ ಸಂದರ್ಭದಲ್ಲೇ ಸರ್ಕಾರ ಔಷ ಧಗಳ ಮೇಲೂ ಜಿಎಸ್‌ಟಿ ತೆರಿಗೆ ವಸೂಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕೋವಿಡ್ ಗೆ ದೇಶದಲ್ಲೇ ವ್ಯಾಕ್ಸಿನ್ ಉತ್ಪಾದಿಸಲಾಗುತ್ತಿದ್ದರೂ ದೇಶವಾಸಿಗಳಿಗೇ ಸರಿಯಾಗಿ ವ್ಯಾಕ್ಸಿನ್ ಸಿಗುತ್ತಿಲ್ಲ. ಇಲ್ಲಿ ಉತ್ಪಾದನೆಯಾದ ವ್ಯಾಕ್ಸಿನ್ ಅನ್ನು ಬೇರೆ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಕೋವಿಡ್ 2ನೇ ಅಲೆ ದೇಶ ತತ್ತರಿಸುವಂತೆ ಮಾಡಿದೆ. 3ನೇ ಅಲೆ ಪ್ರಾರಂಭವಾಗಲಿದೆ. ಇಷ್ಟಾದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಕೂಡಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು. ಮೂರನೇ ಅಲೆ ನಿಯಂತ್ರಿಸಲು ಸಜ್ಜಾಗಬೇಕಿದೆ ಎಂದರು.
ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಕಾಂಗ್ರೆಸ್ ಪರಂಪರೆ. ಹಾಗಾಗಿ ದೇಶಾದ್ಯಂತ ಹಸಿವಿನಿಂದ ಬಳಲುತ್ತಿರುವ ಜನರಿಗೆ ಆಹಾರ ಕಿಟ್ ವಿತರಣೆ, ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯದರ್ಶಿ ಡಿ.ಎಂ. ಸಂದೀಪ್, ನಗರಪಾಲಿಕೆ ಸದಸ್ಯರಾದ ಎಚ್.ಸಿ. ಯೋಗೀಶ್, ಯಮುನಾ ರಂಗೇಗೌಡ,ಯುವ ಮುಖಂಡರಾದ ಸಿ.ಜಿ. ಮಧುಸೂದನ್, ಕೆ. ಚೇತನ್, ಗಣೇಶ್, ಮೊಹಮ್ಮದ್ ನಿಹಾಲ್, ಆದರ್ಶ ಹುಂಚನಕಟ್ಟೆ, ಪ್ರದೀಪ್, ವಿನಾಯಕ್, ವಿನಯ್, ವಿಜಯ್ ಸೇರಿದಂತೆ ಹಲವರಿದ್ದರು.