Advertisement

ನಾಗನಾಳ ಕಲ್ಲು ಗಣಿಗಾರಿಕೆ ಅನುಮೋದನೆ ರದ್ದು ಮಾಡಿ

12:34 PM Jun 26, 2019 | Suhan S |

ಕೋಲಾರ: ತಾಲೂಕಿನ ನಾಗನಾಳ ಸರ್ವೇ ನಂ.42ರಲ್ಲಿ ನೀಡಿರುವ ಕಲ್ಲುಗಣಿಗಾರಿಕೆಯ ಅನುಮೋದನೆಯನ್ನು ರದ್ದುಪಡಿಸಿ ಮರುಪರಿಶೀಲಿಸಬೇಕೆಂದು ಒತ್ತಾಯಿಸಿ ನಾಗನಾಳ ಮತ್ತು ಮೇಡಿಹಾಳ ಸುತ್ತಮುತ್ತಲಿನ ಗ್ರಾಮಸ್ಥರು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.

Advertisement

ಮೇಡಿಹಾಳ ಮತ್ತು ಬೆಟ್ಟಹೊಸಪುರ ಗ್ರಾಮಗಳಲ್ಲಿ ಈಗಾಗಲೇ ಜಲ್ಲಿಕ್ರಶರ್‌ಗಳು ಹಾಗೂ ಕಲ್ಲುಗಣಿ ಕ್ವಾರಿಗಳು ಸೂಕ್ತವಲ್ಲದ ಕಾರ್ಯಾಚರಣೆ ಪರಿಯು ವಾಯುಮಾಲಿನ್ಯದ ಗುಣಮಟ್ಟವನ್ನು ಅಪಾಯಕಾರಿಯಾಗಿಸಿದೆ. ಪ್ರಕೃತಿಯ ವಾತಾವರಣ ಅಸಮತೋಲನ ಆಗುವಷ್ಟರ ಮಟ್ಟಿಗೆ ಕಲುಷಿತಗೊಳಿಸಿದೆ. ಸಾರ್ವಜನಿಕರ ಸುವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ದೀನದಲಿತರು, ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗೆ ಸರಕಾರ ಕಾನೂನು ಬದ್ಧವಾಗಿ ಜಮೀನು ಮಂಜೂರು ಮಾಡಿರುತ್ತಾರೆ. ಆದರೆ ಸೂಕ್ತವಲ್ಲದ ಸ್ಥಳದಲ್ಲಿ ಜಲ್ಲಿಕ್ರಶರ್‌ ಮತ್ತು ಕಲ್ಲುಗಣಿಗಾರಿಕೆಯಿಂದಾಗಿ ನಮಗೆ ನೀಡಿರುವ ಜಮೀನಿನಲ್ಲಿ ಸಾಗುವಳಿ ಮಾಡಲು ಸಾಧ್ಯವಿಲ್ಲದಂತಾಗಿದೆ.

ಕಲ್ಲುಗಣಿಗಾರಿಕೆಯಲ್ಲಿ ಅಪಾಯಕಾರಿ ನ್ಪೋಟಕಗಳನ್ನು ಸಿಡಿಸುವ ಮೂಲಕ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಉತ್ಪತ್ತಿಯಾಗುವ ನೈಟ್ರೋಜನ್‌ ಡೈ ಆಕ್ಸೈಡ್‌, ಸಲ್ಫರ್‌ ಡೈ ಆಕ್ಸೈಡ್‌ ಮತ್ತು ಇನ್ನಿತರೆ ಸೀಸದ ಅಂಶಗಳು ಗಾಳಿಯಲ್ಲಿ ಬೆರೆಯುತ್ತ ವಾಯಮಾಲಿನ್ಯವನ್ನು ಉಂಟುಮಾಡುತ್ತಿದೆ. ಈ ಗಾಳಿಯನ್ನು ಉಸಿರಾಡುತ್ತಿರುವ ಗ್ರಾಮಸ್ಥರು ಹೃದಯ ಮತ್ತು ಶ್ವಾಸಕೋಶದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಳಿಯಲ್ಲಿ ಬರುವ ಕಲ್ಲಿನ ಪುಡಿ ರೈತರು ಬೆಳೆದ ಬೆಳೆಗಳ ಮತ್ತು ಜಾನುವಾರುಗಳು ತಿನ್ನುವ ಹುಲ್ಲಿನ ಮೇಲೆ ಬೀಳುತ್ತಿರುವುದರಿಂದ ಜಾನುವಾರುಗಳು ಸಾವನ್ನಪ್ಪುತ್ತಿವೆ. ರೈತರು ಬೆಳೆದ ಬೆಳೆಗಳು ಕೈಗೆ ಸಿಗದೆ ಬೀದಿಪಾಲಾಗುವ ಸಂದರ್ಭ ಒದಗಿದೆ. ಇನ್ನು ಪಕ್ಕದಲ್ಲಿರುವ ಅರಣ್ಯ ಭೂಮಿಯಲ್ಲಿ ಕ್ರಷ‌ರ್‌ ಸ್ಥಾಪನೆಗೆ ಅನುಮತಿ ನೀಡಲು ಅರ್ಜಿ ಸಲ್ಲಿಸಿದ್ದು, ಅನುಮೋದನೆಯನ್ನು ನೀಡಿದೆ.

Advertisement

ಇದರಿಂದ ಆ ಸ್ಥಳದಲ್ಲಿ ಬೆಳೆದಿರುವ ಅಕೇಶಿಯಾ, ಹೊನ್ನೆ, ನೇರಳೆ, ಮರಗಳಿರುತ್ತವೆ. ಇದನ್ನೇ ನಂಬಿಕೊಂಡಿರುವ ಪ್ರಾಣಿ ಪಕ್ಷಿಗಳು ನಾಶವಾಗುತ್ತವೆ. ಇದಕ್ಕೆ ಸಂಬಂ—ಸಿದಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಲಾಗಿದೆ. ಇದೆಲ್ಲವೂ ಅ—ಕಾರಿಗಳಿಗೆ ತಿಳಿದಿದ್ದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಗಾಳಿಗೆ ತೂರಿ ಕಲ್ಲುಗಣಿಕಾರಿಕೆಗೆ ನಾಗನಾಳ ಸರ್ವೇ ನಂ. 42 ರಲ್ಲಿ ಅನುಮೋದಿಸಿದ್ದು, ಕೂಡಲೇ ಅನುಮೋದನೆಯನ್ನು ರದ್ದುಪಡಿಸಿ ಮರುಪರಿಶೀಲಿಸಬೇಕೆಂದು ನಾಗನಾಳ ಮತ್ತು ಮೇಡಿಹಾಳ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ (ಕೆ.ಡಿ.ಎಸ್‌.ಎಸ್‌) ಭೀಮವಾದ ಜಿಲ್ಲಾ ಸಂಚಾಲಕ ಮೇಡಿಹಾಳ ಚಂದ್ರಶೇಖರ್‌, ನಾಗನಾಳ ಶಂಕರ್‌, ಉರಿಗಿಲಿ ಆನಂದ್‌, ಕಲ್ಲೂರು ಆಂಜಿ, ಕೊಳಗಂಜನಹಲಿ ಚಂದ್ರಿ, ರಾಜಕಲ್ಲಹಳ್ಳಿ ಶಾಂತಕುಮಾರ್‌, ಸುನೀಲ್, ನಾಗರಾಜ್‌, ಕಲ್ಲೂರು ಚಂದ್ರು, ರಾಂಪುರ ವೆಂಕಟೇಶ್‌, ಜನ್ನಘಟ್ಟ ಹೆಚ್. ನಾರಾಯಣಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next