Advertisement
ಮಹಾನಗರ: ನಗರದಲ್ಲಿ ಕಳೆದ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಸೃಷ್ಟಿಯಾದ ಆವಾಂತರದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಈಗ ರಾಜಕಾಲುವೆ ಒತ್ತುವರಿ ಹಾಗೂ ರಾಜಕಾಲುವೆಯಲ್ಲಿ ನೀರು ಹರಿಯಲು ಎದುರಾಗಿರುವ ಕೆಲವು ಅಡೆತಡೆ ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆಯ ಮೂಲಕ ತೆರವು ಕಾರ್ಯಾಚರಣೆಯನ್ನು ಸೋಮವಾರ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಸೂಚನೆ ಮೇರೆಗೆ ಪಾಲಿಕೆ ಆಯುಕ್ತರಾದ ಮೊಹಮ್ಮದ್ ನಝೀರ್ ಅವರ ನೇತೃತ್ವದಲ್ಲಿ ನಗರದ ಕೊಟ್ಟಾರ ಚೌಕಿ ವ್ಯಾಪ್ತಿಯಲ್ಲಿ ತೆರವು ಕಾರ್ಯಾ ಆರಂಭಿಸಲಾಗಿದೆ. ಜತೆಗೆ ರಾಜ ಕಾಲುವೆಯಲ್ಲಿ ಸರಾಗವಾಗಿ ನೀರು ಹರಿಯಲು ಅನುಕೂಲವಾಗುವಂತೆ ಜೇಸಿಬಿ ಮೂಲಕ ಹೂಳು ತೆಗೆಯಲಾಯಿತು. ಕಾಲುವೆ ಒತ್ತುವರಿ ಮಾಡಿರುವ ಕುರಿತ ಸಂಪೂರ್ಣ ವರದಿ ನೀಡುವಂತೆ, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಈಗಾಗಲೇ ಮೂಡಾ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಅದರ ವರದಿ ಜಿಲ್ಲಾಧಿಕಾರಿಗೆ ಸಲ್ಲಿಸುವ ಮುನ್ನವೇ ಪಾಲಿಕೆಯಿಂದ ಕಾರ್ಯಾಚರಣೆ ಆರಂಭಿಸಿರುವುದು ಗಮನಾರ್ಹ ಸಂಗತಿ.
ಮುಂದೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ವರದಿಯ ಆಧಾರದಲ್ಲಿ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಪಾಲಿಕೆ ಆಯುಕ್ತರಾದ ಮಹಮ್ಮದ್ ನಝೀರ್ ಅವರು ಸೋಮವಾರ ಬೆಳಗ್ಗೆ ಕೊಟ್ಟಾರ ಚೌಕಿ ವ್ಯಾಪ್ತಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಯಾವೆಲ್ಲ ಭಾಗದಲ್ಲಿ ಒತ್ತುವರಿ ಆಗಿದೆ ಹಾಗೂ ಎಲ್ಲಿ ತೆರವು ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆ ಬಳಿಕ ಎರಡು ಜೇಸಿಬಿ ಸಹಾಯದಿಂದ ಸುಮಾರು 10ರಷ್ಟು ಕಾರ್ಮಿಕರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಯಾವುದೇ ಸಮಸ್ಯೆ ಆಗದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬ್ಯಾರಿಕೇಡ್ ಹಾಕಿ ಕಾರ್ಯಾಚರಣೆ
ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿ ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಸಂದರ್ಭ ವ್ಯಾಪಕ ಭದ್ರತೆ ಕೈಗೊಳ್ಳಲಾಗಿತ್ತು. ಬೃಹತ್ ಗಾತ್ರದ ಜೇಸಿಬಿ ಮೂಲಕ ಮೊದಲಿಗೆ ರಾಜಕಾಲುವೆಯ ಮೇಲಾºಗದಲ್ಲಿ ಹಾಕಲಾಗಿದ್ದ ಸ್ಲ್ಯಾಬ್ ಗಳನ್ನು ತೆರವುಗೊಳಿಸಿ ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ಜೋಡಿಸಿಡಲಾಯಿತು. ಈ ಸಂದರ್ಭ ಜೇಸಿಬಿ ಸಂಚಾರ ಹಾಗೂ ಕಾರ್ಯಾಚರಣೆಗೆ ತೊಂದರೆ ಆಗದಂತೆ ರಸ್ತೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಗಳನ್ನು ಜೋಡಿಸಿ ವಾಹನ ಸಂಚಾರಕ್ಕೆ ತಡೆನೀಡಲಾಯಿತು. ಆದರೂ, ಕಾರ್ಯಾಚರಣೆ ನಡೆಯುವ ಸಂದರ್ಭ ಕೆಲವು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
Related Articles
ತೆರವು ಕಾರ್ಯಾಚರಣೆ ನಡೆಯುತ್ತಿದ್ದ ಪ್ರದೇಶಕ್ಕೆ ‘ಉದಯವಾಣಿ ಸುದಿನ’ ತಂಡ ಭೇಟಿ ನೀಡಿದಾಗ ಅಲ್ಲಿದ್ದ ಪಾಲಿಕೆ ಅಧಿಕಾರಿಯೋರ್ವರಲ್ಲಿ ವಿಚಾರಿಸಿದಾಗ ಅವರು ಮಾತನಾಡಲು ನಿರಾಕರಿಸಿದರು. ‘ಅವರಲ್ಲಿ ಕೇಳಿ’ ಎಂದು ಇನ್ನೊಬ್ಬ ಅಧಿಕಾರಿಯವರತ್ತ ಬೆರಳು ತೋರಿಸಿದರು. ಅವರಲ್ಲಿ ಮಾಹಿತಿ ಕೇಳಲು ಹೋದಾಗ ‘ನಾವೇನು ಮಾತನಾಡಲ್ಲ. ಪಾಲಿಕೆ ಆಯುಕ್ತರನ್ನೇ ಕೇಳಿ’ ಎಂದು ಅವರು ಮಾತು ನಿಲ್ಲಿಸಿದರು. ಉಳಿದ ಅಧಿಕಾರಿಗಳು ಕೂಡ ಯಾವ ಪ್ರಶ್ನೆಗೂ ಉತ್ತರ ನೀಡದೆ ಮೌನವಾಗಿದ್ದರು.
Advertisement
‘ಸುದಿನ’ ವರದಿ ಆಧರಿತ ಕ್ರಮ
ರಾಜಕಾಲುವೆ ಒತ್ತುವರಿ ಆಗಿರುವ ಹಾಗೂ ಕಾಲುವೆಯಲ್ಲಿ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದಿರುವ ವಿಚಾರ ಪಾಲಿಕೆಯ ಗಮನಕ್ಕೆ ಬಂದಿದೆ. ಜತೆಗೆ, ‘ಉದಯವಾಣಿ ಸುದಿನ’ ಕೂಡ ಈ ಬಗ್ಗೆ ವಿಸ್ತೃತ ವರದಿಯನ್ನು ರಿಯಾಲಿಟಿ ಚೆಕ್ ಮೂಲಕ ಪ್ರತಿದಿನವೂ ಪ್ರಸ್ತುತಪಡಿಸುತ್ತಿದೆ. ಇದರನ್ವಯ ಸೋಮವಾರದಿಂದಲೇ ಪಾಲಿಕೆ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಇದು ನಿರಂತರ ಕಾರ್ಯಾಚರಣೆಯಾಗಿ ಮುಂದುವರಿಯಲಿದೆ.
– ಭಾಸ್ಕರ್,ಮೇಯರ್ ತೆರವು – ಅಡೆತಡೆ ನಿವಾರಣೆ
ಕೊಟ್ಟಾರಚೌಕಿ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡುವ ಮೂಲಕ ಕಾಲುವೆಯಲ್ಲಿ ನೀರು ಹರಿಯಲು ಇದ್ದ ಅಡೆತಡೆಗಳನ್ನು ಸರಿಪಡಿಸುವ ಕೆಲಸವನ್ನು ಆರಂಭಿಸಲಾಗಿದೆ. ದ.ಕ. ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ಈಗಾಗಲೇ ಕಾರ್ಯಾಚರಣೆ ನಡೆಸಲಾಗಿದ್ದು, ಮುಂದೆ ನಗರದ ಇತರ ಕಡೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗುತ್ತದೆ.
– ಮಹಮ್ಮದ್ ನಝೀರ್, ಪಾಲಿಕೆ ಆಯುಕ್ತರು