ಹೊಸದಿಲ್ಲಿ : ಕೆನಡದ ಒಂಟಾರಿಯೋದ ಮಿಸಿಸಿಸೋಗ್ ಎಂಬಲ್ಲಿನ ವಾಕ್ ಇನ್ ಕ್ಲಿನಿಕ್‌ಗೆ ನಾಲ್ಕರ ಹರೆಯದ ತನ್ನ ಅಸ್ವಸ್ಥ ಪುತ್ರನನ್ನು ಚಿಕಿತ್ಸೆಗಾಗಿ ಕರೆತಂದ ಕೆನಡದ ಶ್ವೇತ ಮಹಿಳೆಯೊಬ್ಬಳು, ಕರ್ತವ್ಯದಲ್ಲಿದ್ದ ಪಾಕಿಸ್ಥಾನದ ವೈದ್ಯರಿಂದ ತನ್ನ ಮಗನಿಗೆ ಚಿಕಿತ್ಸೆ ದೊರಕಿಸಲು ನಿರಾಕರಿಸಿದಳಲ್ಲದೆ ತನ್ನ ಪುತ್ರನಿಗೆ ಶ್ವೇತ ವೈದ್ಯರೇ ಚಿಕಿತ್ಸೆ ನೀಡಬೇಕೆಂದು ಹಠ ತೊಟ್ಟಳು.
ವಿಶ್ವಾದ್ಯಂತ ಜನಾಂಗೀಯ ಪಾರಮ್ಯ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಬಗೆಗಳಲ್ಲಿ ಹೇಗೆ ಜೀವಂತವಿದೆ ಎನ್ನುವುದಕ್ಕೆ ಈ ಆಘಾತಕಾರಿ ಘಟನೆಯು ಸಾಕ್ಷಿಯಾಯಿತು.
ಶ್ವೇತ ವರ್ಣೀಯ ವೈದ್ಯನೇ ಬೇಕೆಂದರೆ ಸಂಜೆ ನಾಲ್ಕು ಗಂಟೆಯ ವರೆಗೂ ಕಾಯಬೇಕಾದೀತು ಎಂದು ಕ್ಲಿನಿಕ್ ಸಿಬಂದಿ ಕೆನಡದ ಮಹಿಳೆಗೆ ಹೇಳಿದಾಗ ಆಕ್ರೋಶಗೊಂಡ ಆಕೆ, ಇಷ್ಟೊಂದು ದೊಡ್ಡ ಕ್ಲಿನಿಕ್‌ನಲ್ಲಿ ಒಬ್ಬನಾದರೂ ಶ್ವೇತವರ್ಣೀಯ ವೈದ್ಯನಿಲ್ಲವೇ ? ಎಂದು ಪ್ರಶ್ನಿಸಿದಳು. ನಾನು ಶ್ವೇತ ಮಹಿಳೆಯಾಗಿರವುದರಿಂದ ನೀವು ಕಂದು ಬಣ್ಣದವರು, ಕಂದು ಹಲ್ಲಿನವರು ನನ್ನನ್ನು ಅಸೂಯೆಯಿಂದ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಆರೋಪಿಸಿದಳು.
ಕೆನಡ ಮಹಿಳೆಯ ಈ ರಂಪವನ್ನು ಅಲ್ಲಿದ್ದ ಭಾರತೀಯ ಹಿತೇಶ್ ಭಾರಧ್ವಾಜ್ ಎಂಬವರು ವಿಡಿಯೋ ಮಾಡಿದರು. ಅದೀಗ ಇಂಟರ್‌ನೆಟ್‌ನಲ್ಲಿ ಜೋರಾಗಿ ಓಡುತ್ತಿದೆ. ಜತೆಗೆ ಜನಾಂಗೀಯ ಪಾರಮ್ಯ ಯಾವ ರೀತಿ ಇನ್ನೂ ಬೇರು ಬಿಟ್ಟಿದೆ ಎಂಬುದನ್ನು ತೋರಿಸುತ್ತದೆ.