ಟೊರಾಂಟೋ: ಕೋವಿಡ್ 19 ಸೋಂಕು ವಿರುದ್ಧದ ಲಸಿಕೆಯನ್ನು ಕಡ್ಡಾಯ ಮಾಡಿದ್ದನ್ನು ವಿರೋಧಿಸಿ ಕೆನಡಾದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಒಂಟಾರಿಯೊದ ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಸೆರಿದ್ದು, ಕೋವಿಡ್ -19 ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರು.
ಈ ಹಿನ್ನೆಲೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಅವರ ಕುಟುಂಬವನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಗಡಿಯಾಚೆಗಿನ ಟ್ರಕ್ ಚಾಲಕರಿಗೆ ಕೋವಿಡ್ ಲಸಿಕೆ ಕಡ್ಡಾಯದ ವಿರುದ್ಧ ‘ಫ್ರೀಡಮ್ ಕಾನ್ವಾಯ್’ ಎಂಬ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆಯು ಈಗ ಜಸ್ಟಿನ್ ಟ್ರುಡೊ ಸರ್ಕಾರದ ಕೋವಿಡ್ ನಿಯಮಗಳ ವಿರುದ್ಧದ ದೊಡ್ಡ ಹೋರಾಟವಾಗಿ ಮಾರ್ಪಟ್ಟಿದೆ. ಲಸಿಕೆ ಕಡ್ಡಾಯ ಹಾಗೂ ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ತೆಗೆದು ಹಾಕಲು ಆದೇಶ ನೀಡುವಂತೆ ಒತ್ತಾಯ ಮಾಡಿ ಶನಿವಾರ ರಾಜಧಾನಿಯಲ್ಲಿ ಸಾವಿರಾರು ಟ್ರಕ್ ಚಾಲಕರು ಹಾಗೂ ಇತರ ಸಾವಿರಾರು ಮಂದಿ ಜೊತೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಆಗ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ – ಈಗ ಸಮಗ್ರ ಕೃಷಿಕ : ಇವರ ಹೊಲದಲ್ಲಿ ಏನುಂಟು ಏನಿಲ್ಲ?
ಜನಸಂದಣಿಯನ್ನು ಶಾಂತಿಯುತವಾಗಿರುವಂತೆ ಸಂಘಟಕರು ಒತ್ತಾಯಿಸುತ್ತಿದ್ದರೂ ಸಂಭವನೀಯ ಹಿಂಸಾಚಾರದ ಬಗ್ಗೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪ್ರತಿಭಟನೆಯ ಸ್ಥಳದಿಂದ ಸರಿಸುಮಾರು ನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರೈಡೋ ಕಾಟೇಜ್ ನಲ್ಲಿರುವ ನಿವಾಸದಲ್ಲಿ ಪ್ರಧಾನಿ ಮತ್ತು ಅವರ ಕುಟುಂಬವು ಇನ್ನು ಮುಂದೆ ಇರುವುದಿಲ್ಲ ಎನ್ನಲಾಗಿದೆ. ಟ್ರೂಡೊ ಅವರ ಮಕ್ಕಳಲ್ಲಿ ಒಬ್ಬರಿಗೆ ಕೋವಿಡ್ -19 ಪಾಸಿಟಿವ್ ಆಗಿದ್ದು, ಅವರು ಪ್ರತ್ಯೇಕವಾಗಿದ್ದಾರೆ.