Advertisement

Canada ವಿರುದ್ಧ ಕೆಂಡ – ವಿಶ್ವಸಂಸ್ಥೆಯಲ್ಲಿ ಜೈಶಂಕರ್‌ ವಾಗ್ಧಾಳಿ

09:14 PM Sep 26, 2023 | Team Udayavani |

ವಿಶ್ವಸಂಸ್ಥೆ/ನವದೆಹಲಿ: “ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಹಿಂಸಾಚಾರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ನಮ್ಮ ರಾಜಕೀಯ ಅನುಕೂಲತೆಗಳನ್ನು ಅವಲಂಬಿಸಿರಬಾರದು.’

Advertisement

ತನ್ನ ನೆಲದಲ್ಲಿ ಭಾರತ ವಿರೋಧಿ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಹಾಗೂ ಖಲಿಸ್ತಾನಿ ಉಗ್ರರ ಪರ ಮೃದು ಧೋರಣೆ ಹೊಂದಿರುವ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ನೇತೃತ್ವದ ಕೆನಡಾ ಸರ್ಕಾರಕ್ಕೆ ಚಾಟಿ ಬೀಸುತ್ತಲೇ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಾಡಿರುವ ಪಾಠವಿದು.

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಾ, ಜೈಶಂಕರ್‌ ಅವರು ಕೆನಡಾವನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಸದಸ್ಯ ರಾಷ್ಟ್ರಗಳನ್ನು ಉದ್ದೇಶಿಸಿ “ಪ್ರಾದೇಶಿಕ ಸಮಗ್ರತೆಗೆ ನೀಡುವ ಗೌರವ ಹಾಗೂ ಮತ್ತೂಬ್ಬರ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರುವ ನಿಯಮವು ಎಲ್ಲರಿಗೂ ಅನ್ವಯವಾಗಬೇಕೇ ವಿನಾ ಅದು “ಆಯ್ಕೆ’ಯ ವಿಚಾರವಾಗಬಾರದು. ಮಾತಿಗೂ ಕೃತಿಗೂ ಸಾಮ್ಯತೆ ಇಲ್ಲದಾದಾಗ ಅದರ ವಿರುದ್ಧ ಸಿಡಿದೇಳುವ ಧೈರ್ಯ ನಮಗೆ ಇರಬೇಕು’ ಎಂದೂ ಹೇಳಿದರು. ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ತೀವ್ರಗೊಂಡಿರುವ ಸಮಯದಲ್ಲೇ ಜೈಶಂಕರ್‌ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಅಲ್ಲದೇ, ಇದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕೆನಡಾಗೆ ದೊಡ್ಡ ಮಟ್ಟದ ಮುಜುಗರವನ್ನೂ ಉಂಟುಮಾಡಿದೆ.

ಕಾಲಾಳುಗಳಾಗಿ ಬಳಕೆ:
ಈ ನಡುವೆ, ಪಂಜಾಬ್‌ ಯುವಕರ ವಲಸೆ ಪ್ರಕ್ರಿಯೆಗೆ ಕೆನಡಾದಲ್ಲಿರುವ ಖಲಿಸ್ತಾನಿ ಉಗ್ರರೇ ಅವಕಾಶ ಕಲ್ಪಿಸುತ್ತಿದ್ದಾರೆ ಎಂಬ ಹೊಸ ವಿಚಾರವನ್ನು ಭಾರತದ ಗುಪ್ತಚರ ಸಂಸ್ಥೆಗಳು ಮಂಗಳವಾರ ಬಹಿರಂಗಪಡಿಸಿವೆ. ಪಂಜಾಬ್‌ನ ಯುವಕರಿಗೆ ವೀಸಾ ವ್ಯವಸ್ಥೆ ಮಾಡಿಸಿ, ಕೆನಡಾಗೆ ಕರೆಸಿಕೊಳ್ಳುವ ಉಗ್ರರು, ಆ ಯುವಕರನ್ನು ಕಾಲಾಳು ಪಡೆಯನ್ನಾಗಿ ಬಳಸುತ್ತಾ ಭಾರತ ವಿರೋಧಿ ಕೃತ್ಯಗಳನ್ನು ಮಾಡಿಸುತ್ತಾರೆ ಎಂದು ಹೇಳಲಾಗಿದೆ. ತಮ್ಮ ನಿಯಂತ್ರಣದಲ್ಲಿರುವ ಗುರುದ್ವಾರಗಳಲ್ಲಿ ಕೆಲಸ ಮಾಡಲು ಪ್ಲಂಬರ್‌ಗಳು, ಟ್ರಕ್‌ ಚಾಲಕರು, ಧಾರ್ಮಿಕ ಸೇವೆಗಳನ್ನು ಮಾಡುವವರು ಬೇಕೆಂದು ಹೇಳಿ ಈ ಯುವಕರನ್ನು ಕರೆಸಿಕೊಳ್ಳಲಾಗುತ್ತದೆ. ನಂತರ ಖಲಿಸ್ತಾನಿ ಚಟುವಟಿಕೆಗಳಿಗೆ ಇವರನ್ನು ಬಳಸಲಾಗುತ್ತದೆ ಎಂದೂ ಮೂಲಗಳು ಹೇಳಿವೆ.

ಭಾರತದ ವಿರುದ್ಧ ಪ್ರತಿಭಟನೆ:
ಮಂಗಳವಾರ ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮುಂದೆ ಖಲಿಸ್ತಾನಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ ಪ್ರಧಾನಿ ಟ್ರಾಡ್ನೂ ಆರೋಪದ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ.

Advertisement

ಸೇನಾ ಸಂಬಂಧಕ್ಕೆ ಧಕ್ಕೆಯಿಲ್ಲ
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಉಭಯ ದೇಶಗಳ ಸೇನಾ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಕೆನಡಾ ಸೇನೆಯ ಉಪ ಮುಖ್ಯಸ್ಥ ಮೇಜರ್‌ ಜನರಲ್‌ ಪೀಟರ್‌ ಸ್ಕಾಟ್‌ ಅಭಿಪ್ರಾಯಪಟ್ಟಿದ್ದಾರೆ. ಇಂಡೋ-ಪೆಸಿಫಿಕ್‌ ಸೇನಾ ಮುಖ್ಯಸ್ಥರ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ನವದೆಹಲಿಗೆ ಬಂದಿರುವ ಅವರು, “ಪ್ರಸ್ತುತ ಬಿಕ್ಕಟ್ಟು ರಾಜಕೀಯ ಮಟ್ಟದಲ್ಲಿ ಪರಿಹಾರ ಕಾಣಲಿದೆ. ಅದರಿಂದ ಸೇನಾ ಬಾಂಧವ್ಯಕ್ಕೆ ಧಕ್ಕೆಯಾಗದು’ ಎಂದಿದ್ದಾರೆ.

ಜೈಶಂಕರ್‌ ಮಾತಿನ ಝಲಕ್‌
“ನಮಸ್ತೆ ಫ್ರಮ್‌ ಭಾರತ್‌'(ಭಾರತದ ಕಡೆಯಿಂದ ನಿಮಗೆಲ್ಲರಿಗೂ ನಮಸ್ಕಾರ) ಎನ್ನುತ್ತಲೇ ಭಾಷಣ ಶುರು ಮಾಡಿದ ಸಚಿವ ಜೈಶಂಕರ್‌, ಭಾರತದ ಜಿ20 ಅಧ್ಯಕ್ಷತೆ, ವಿಶ್ವಸಂಸ್ಥೆ ಸುಧಾರಣೆ, ಅಮೃತಕಾಲ ಸೇರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರ ಮಾತಿನ ಝಲಕ್‌ ಇಲ್ಲಿದೆ:

– ವೈವಿಧ್ಯಮಯ ಪಾಲುದಾರರೊಂದಿಗೆ ಸಹಕಾರವನ್ನು ವೃದ್ಧಿಸಲು ಭಾರತ ಬಯಸುತ್ತದೆ.
– ಅಸಹಕಾರದ ಯುಗದಿಂದ ನಾವು ಈಗ “ವಿಶ್ವ ಮಿತ್ರ’ರಾಗಿ ವಿಕಸನಗೊಂಡಿದ್ದೇವೆ
– ಭಾರತವು ಅಮೃತಕಾಲವನ್ನು ಪ್ರವೇಶಿಸಿದೆ. ಚಂದ್ರಯಾನ-3ರ ಯಶಸ್ಸಿನ ಮೂಲಕ ಜಗತ್ತಿಗೆ ನಾವು ಇದರ ತುಣುಕನ್ನು ತೋರಿಸಿದ್ದೇವೆ.
– ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಆಗಬೇಕು. ಬೆರಳೆಣಿಕೆಯ ದೇಶಗಳು ಅಜೆಂಡಾ ರೂಪಿಸುವ, ಉಳಿದವರು ಅದನ್ನು ಅನುಸರಿಸುವ ಕಾಲ ಮುಗಿಯಿತು.

ಈಗ ಕೆನಡಾ ಭಯೋತ್ಪಾದಕರ ಸ್ವರ್ಗವಾಗಿದೆ. ಯಾವುದೇ ಪುರಾವೆಗಳಿಲ್ಲದೇ ಭಾರತದ ವಿರುದ್ಧ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡ್ನೂ ಆರೋಪ ಹೊರಿಸಿದ್ದಾರೆ. ಈ ಹಿಂದೆ ಅವರು ಶ್ರೀಲಂಕಾ ವಿರುದ್ಧವೂ ಇಂಥದ್ದೇ ಸುಳ್ಳು ಆರೋಪ ಮಾಡಿದ್ದರು.
– ಅಲಿ ಸಬ್ರಿ, ಶ್ರೀಲಂಕಾ ವಿದೇಶಾಂಗ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next