Advertisement

Canada;ಖಲಿಸ್ಥಾನಿಗಳ ವಿರುದ್ಧ ಭಾರತೀಯರ ಒಗ್ಗಟ್ಟು : ಹಿಂದೂ-ಸಿಕ್ಖರ 36 ಸಂಘಟನೆಗಳಿಂದ ಸಭೆ

02:06 AM Nov 05, 2024 | Team Udayavani |

 

Advertisement

ಒಟ್ಟಾವಾ: ಕೆನಡಾದಲ್ಲಿ ಖಲಿಸ್ಥಾನಿಗಳ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯರು ಒಟ್ಟಾಗಿದ್ದಾರೆ. ಹಿಂದೂ ಹಾಗೂ ಸಿಕ್ಖ್ ಸಮುದಾಯಗಳ ಒಟ್ಟು 36 ಸಂಘಟನೆಗಳು ಸೋಮವಾರ ಸಭೆ ಸೇರಿ ಖಲಿಸ್ಥಾನಿಗಳು ಹಾಗೂ ಪ್ರಧಾನಿ ಜಸ್ಟಿನ್‌ ಟ್ರಾಡೋ ವಿರುದ್ಧ ನಿರ್ಣಯ ಅಂಗೀಕರಿಸಿವೆ. ಬ್ರಾಂಪ್ಟನ್‌ ದೇಗುಲದ ಮೇಲೆ ಖಲಿಸ್ಥಾನಿಗಳು ದಾಳಿ ನಡೆಸಿದ ಬೆನ್ನಲ್ಲೇ ಹಿಂದೂಗಳು ಮತ್ತು ಸಿಕ್ಖರು ಕೈಜೋಡಿಸಿರುವುದು ಮಹತ್ವ ಪಡೆದಿದೆ.

ವ್ಯಾಂಕೋವರ್‌ ಗುರುದ್ವಾರದ ಖಾಲ್ಸಾ ದಿವಾನ್‌ ಸೊಸೈಟಿಯು ಗುರುವಾರ 36 ಹಿಂದೂ ಹಾಗೂ ಸಿಕ್ಖ್ ಸಂಘಟನೆಗಳ ಜತೆಗೆ ಸಭೆ ಆಯೋಜಿಸಿತ್ತು. 1000ಕ್ಕೂ ಅಧಿಕ ಮಂದಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಗುರುದ್ವಾರಗಳಲ್ಲಿ ಖಲಿಸ್ಥಾನಿಗಳ ಪ್ರಾಬಲ್ಯವನ್ನು ಕಡಿತಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಅಧ್ಯಕ್ಷನಾಗಿದ್ದ ಸರ್ರೆ ಗುರುನಾನಕ್‌ ಸಿಕ್ಖ್ ಗುರುದ್ವಾರ ಸೇರಿದಂತೆ ದೇಶದ ಹಲವು ಗುರುದ್ವಾರಗಳಲ್ಲಿ ಖಲಿಸ್ಥಾನಿಗಳು ಹಿಡಿತ ಹೊಂದಿದ್ದಾರೆ. ಅವರೇ ಪ್ರಮುಖ ಸ್ಥಾನಗಳಲ್ಲೂ ಇದ್ದಾರೆ. ಆ ಸ್ಥಾನಗಳಿಂದ ಅವರನ್ನು ಕಿತ್ತೂಗೆಯ ಬೇಕಿದೆ. ಈ ಹಿನ್ನೆಲೆಯಲ್ಲಿ ಗುರುದ್ವಾರಗಳಲ್ಲಿನ ಚುನಾವಣೆಯಲ್ಲಿ ಸಿಕ್ಖರು ಸ್ಪರ್ಧಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಸಭೆಯಲ್ಲಿ ಹಾಜರಾಗಿದ್ದ 19 ಮಂದಿ ಖಲಿಸ್ಥಾನಿಗಳಿಗೆ ಸೋಲುಣಿಸಲು ತಾವೇ ಸ್ಪರ್ಧಿಸು ವುದಾಗಿಯೂ ಘೋಷಿಸಿದ್ದಾರೆ.

ಟ್ರಾಡೋ ವಿರುದ್ಧ ನಿರ್ಣಯ ಅಂಗೀಕಾರ: ಕೆನಡಾದಲ್ಲಿ ಖಲಿಸ್ಥಾನಿಗಳ ಆರ್ಭಟ ಹೆಚ್ಚುತ್ತಿರುವುದಕ್ಕೆ, ಭಾರತೀಯರ ವಿರುದ್ಧದ ಅವರ ದಾಳಿಗಳಿಗೆ ಪ್ರಧಾನಿ ಜಸ್ಟಿನ್‌ ಟ್ರಾಡೋ ಬೆಂಬಲವಿದೆ. ಹಾಗಾಗಿ ಅವರು ಯಾರಿಗೂ ಮಣಿಯುತ್ತಿಲ್ಲ ಎಂದು ಸಭೆ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಟ್ರಾಡೋ ವಿರುದ್ಧ ನಿರ್ಣಯ ಅಂಗೀಕರಿಸಿ, ಇನ್ನುಮುಂದೆ ಖಲಿಸ್ಥಾನಿಗಳಿಗೆ ಅವರದ್ದೇ ಭಾಷೆಯಲ್ಲಿ ತಿರುಗೇಟು ನೀಡುತ್ತೇವೆ ಎಂದು ಹೇಳಿದೆ. ಟ್ರಾಡೋಗೆ ಬೆಂಬಲ ನೀಡದಿರಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಗುಲಕ್ಕೆ ಬರುವುದಕ್ಕೂ ಭಯಪಡುವ ಸ್ಥಿತಿ: ಅರ್ಚಕ
ದೇಗುಲದ ಮೇಲಿನ ದಾಳಿ ಸಂಬಂಧಿಸಿದಂತೆ ದೇಗುಲದ ಅರ್ಚಕ ನಯನ್‌ ಬ್ರಹ್ಮಭಟ್‌ ಮಾತನಾಡಿದ್ದಾರೆ. ಹಿಂದೂ ದೇಗುಲಗಳ ಮೇಲೆ ಖಲಿಸ್ಥಾನಿಗಳು ಪದೇ ಪದೇ ದಾಳಿ ನಡೆಸುತ್ತಿದ್ದು, ಭಕ್ತಾದಿಗಳು ದೇವಸ್ಥಾನಕ್ಕೆ ಬರುವುದಕ್ಕೇ ಭಯಭೀತರಾಗಿದ್ದಾರೆ. ಹಿಂದೂಗಳಿಗೆ ರಕ್ಷಣೆ ಕೊಡುವಲ್ಲಿ ಪೊಲೀಸರು ಸೋತಿದ್ದಾರೆ. ದಾಳಿ ನಡೆಸಿದ ಯಾವ ಒಬ್ಬ ಖಲಿಸ್ಥಾನಿಯನ್ನೂ ಈವರೆಗೆ ಬಂಧಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.

Advertisement

ಬ್ರಾಂಪ್ಟನ್‌ ಹಿಂದೂ ದೇಗುಲದ ಮೇಲಿನ ದಾಳಿಯು ಖಲಿಸ್ಥಾನಿಗಳು ಯಾವ ಮಟ್ಟಕ್ಕೆ ಲಜ್ಜೆಗೆಟ್ಟಿದ್ದಾರೆ ಎಂಬುದನ್ನು ತೋರಿಸುತ್ತಿದೆ. ಅವರ ಮಿತಿ ಮೀರಿದ ವರ್ತನೆಗೆ ವಾಕ್‌ ಸ್ವಾತಂತ್ರ್ಯ ಎಂಬ ಪಾಸ್‌ ಸಿಕ್ಕಿಬಿಟ್ಟಿದೆ. ಖಲಿಸ್ಥಾನಿಗಳು ತಮ್ಮ ಅಂಕೆಯಲ್ಲಿ ರಾಜಕಾರಣಿಗಳನ್ನು ಹೊಂದುವುದು ಮಾತ್ರವಲ್ಲ, ದೇಶದ ಕಾನೂನು ವ್ಯವಸ್ಥೆ ಒಳಗೂ ನುಸುಳಿದ್ದಾರೆ.
ಚಂದ್ರ ಆರ್ಯ, ಕೆನಡಾ ಸಂಸದ (ಕನ್ನಡಿಗ)

Advertisement

Udayavani is now on Telegram. Click here to join our channel and stay updated with the latest news.

Next