ಮದುರೆ: “ಮದುರೆ ಅಧೀನ ಮಠದ ಬಗ್ಗೆ ನೀವು ತಪ್ಪು ಮಾಹಿತಿ ಕೊಟ್ಟಿದ್ದೀರಿ. ನಿಮ್ಮ ವಿರುದ್ಧ ಏಕೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬಾರದು. ಈ ಕ್ರಮ ಸರಿಯಾದ್ದಲ್ಲ’ ಹೀಗೆಂದು ಮದ್ರಾಸ್ ಹೈಕೋರ್ಟ್ ಬಿಡದಿಯ ಧ್ಯಾನಪೀಠದ ಅಧಿಪತಿ ನಿತ್ಯಾನಂದಗೆ ತರಾಟೆಗೆ ತೆಗೆದುಕೊಂಡಿದೆ.
ಶೈವ ಪರಂಪರೆಗೆ ಒಳಪಟ್ಟ ಅಧೀನಮಠದ 292ನೇ ಪೀಠಾಧಿಪತಿ ಅರುಣಗಿರಿನಾಥನ್ ಬದಲಾಗಿ ತಾವೇ 293ನೇ ಉತ್ತರಾಧಿಕಾರಿ ಎಂದು ನಿತ್ಯಾನಂದ ಘೋಷಿಸಿಕೊಂಡಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟಲ್ಲಿ ಮೊಕದ್ದಮೆ ಹೂಡಲಾಗಿದೆ.
ಅದರ ವಿಚಾರಣೆ ವೇಳೆ ನ್ಯಾ.ಮಹದೇವನ್ ನೇತೃತ್ವದ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. “ಮಠದ ಹಾಲಿ ಪೀಠಾಧಿಪತಿ ಇನ್ನು ಜೀವಂತವಾಗಿಯೇ ಇದ್ದಾರೆ. ಹಾಗಿದ್ದ ಸಂದರ್ಭದಲ್ಲಿ ನೀವು 293ನೇ ಪೀಠಾಧಿಪತಿ ಎಂದು ಘೋಷಿಸಿಕೊಂಡಿದ್ದೀರಿ.
ಈ ಬಗ್ಗೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದರಿಂದ ನಿಮ್ಮ ವಿರುದ್ಧ ಏಕೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬಾರದು?’ ಎಂದು ನ್ಯಾಯಮೂರ್ತಿ ಖಾರವಾಗಿಯೇ ಕೇಳಿದರು. ನಿತ್ಯಾನಂದರ ಸ್ವಯಂ ಘೋಷಣೆ ಪ್ರಶ್ನಿಸಿ ಜಗದಲಪ್ರತಾಪನ್ ಎಂಬುವರು ಹೈಕೋರ್ಟ್ ಮೊರೆ ಹೋಗಿದ್ದರು.
ಮಠಕ್ಕೆ ನಿತ್ಯಾನಂದ ಪ್ರವೇಶಕ್ಕೆ ತಡೆ ಹೇರಬೇಕೆಂದು ವಾದಿಸಿದ್ದರು. ಅದರ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ. ನಿತ್ಯಾನಂದ ಪರ ವಾದಿಸಿದ ವಕೀಲರು ಪೀಠಾಧಿಪತಿಯಾಗಿ ತಮ್ಮ ಕಕ್ಷಿದಾರರನ್ನು ಆಯ್ಕೆ ಮಾಡಲಾಗಿದೆ. ಅದನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವ ಸಾಧ್ಯತೆಯೇ ಇಲ್ಲವೆಂದು ವಾದಿಸಿದರು.