ಗೆಳೆಯ,
ಅದೊಂದು ದಿನ ಆಕಾಶ ಕರಿಮೋಡಗಳಿಂದ ದಟ್ಟೈಸಿತ್ತು. ಇನ್ನೇನು ಮಳೆಯ ಹನಿ ಭೂಮಿಗೆ ಬೀಳುವುದೊಂದೇ ಬಾಕಿ. ಕಾಲೇಜ್ ಮುಗಿಯುವ ಸಂಜೆಯ ಸಮಯ. ಕ್ಲಾಸ್‌ಗಳು ಮುಗಿದ ಮರುಗಳಿಗೆಯೇ ಶುರುವಾಯ್ತಲ್ಲ ತುಂತುರು ಮಳೆ.. ಮಳೆ ಹನಿಯೊಂದಿಗೆ ಮಗುವಿನಂತೆ ಆಟ ಆಡುತ್ತಾ ಹೊರಟಿದ್ದೆ. ನೀನು ನನ್ನ ಹಿಂದೆ ಹೆಜ್ಜೆ ಹಾಕುತ್ತಿದ್ದೆ ಎನ್ನುವುದರ ಪರಿವೆಯೇ ನನಗಿರಲಿಲ್ಲ.
ಮಳೆ ಬರುವ ಕಲ್ಪನೆಯಿರದ ಕಾರಣ ಛತ್ರಿ ತಂದಿರಲಿಲ್ಲ. ಮಳೆಯಲ್ಲಿ ನೆನೆಯುವುದೆಂದರೆ ತುಂಬಾ ಇಷ್ಟವಾದ್ದರಿಂದ ಉತ್ಸಾಹದಿಂದ ನಡೆಯುತ್ತಿದ್ದೆ. ಸ್ವಲ್ಪ ಸಮಯದ ಬಳಿಕ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು. ಮುಂದೆ ಹೋಗಲೂ ಆಗುತ್ತಿಲ್ಲ. ಅಲ್ಲೇ ನಿಲ್ಲಲೂ ಆಗುತ್ತಿಲ್ಲ. ಆಗ, ಬೇರೇನೂ ಮಾಡಲು ತೋಚದೆ ಕೀ ಕೊಟ್ಟ ಗೊಂಬೆಯಂತೆ ಅಲ್ಲೇ ನಿಂತೆ. ಮಳೆ ನಿಲ್ಲಬಹುದೆನೋ ಎಂದು ಕಾಯುತ್ತಿದ್ದೆ.
ಆ ಸಮಯದಲ್ಲೇ ಆಸರೆ ಬಯಸಿದ ನನಗೆ ನೀನು ಆಧಾರವಾಗಿ ಬಂದೆ. ಸುರಿಯುವ ಮಳೆಗೆ ಅಡ್ಡಲಾಗಿ ಛತ್ರಿ ಹಿಡಿದು ನೆರಳಾದೆ. ನಾವಿಬ್ಬರೂ ಒಂದೇ ಕೊಡೆಯಲ್ಲಿ ಕ್ರಮಿಸಿದ ಆ ಅಪೂರ್ವ ಕ್ಷಣ ಅನನ್ಯವಾದದ್ದು. ನನ್ನ ಭುಜದ ಮೇಲಿದ್ದ ನಿನ್ನ ಆ ಹಸ್ತ ಪ್ರತಿಯೊಂದು ಕಷ್ಟಗಳಲ್ಲೂ ಹೆಗಲಿಗೆ ಹೆಗಲಾಗಿ ಬರುವೆ ಎಂಬ ಆಶ್ವಾಸನೆ ಕೊಡುತ್ತಿತ್ತು. ಜೀವನದ ಏಳು-ಬೀಳಿನಲ್ಲೂ ಇಬ್ಬರಿಗೂ ಸಮಪಾಲು ಎನ್ನವ ಭರವಸೆಯನ್ನು ಹುಟ್ಟಿಸಿತ್ತು. ಅವತ್ತು ನಾನು ಅದೆಷ್ಟು ಬೇಗ ನಿನ್ನ ವಶವಾಗಿದ್ದೆ ಎನ್ನುವುದನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ.
ಗೆಳೆಯಾ…. ನಿನ್ನೊಂದಿಗೆ ನಡೆದ ಹೆಜ್ಜೆಗಳು ನನ್ನ ಹೃದಯದಲ್ಲಿ ಅಚ್ಚಾಗಿ ನಿಂತಿವೆ. ಕಲ್ಲಿನಂತಿದ್ದ ಈ ಮನಸು ಕನಸುಗಳ ಹೊಡೆತದಿಂದ ಶಿಲೆಯಾಗಿ ರೂಪುಗೊಂಡಿತು. ನಿನ್ನ ಆ ಮೊದಲ ನೋಟ, ಮೊದಲ ಸ್ಪರ್ಶ, ಮೊದಲ ಮಾತು ಎಲ್ಲವೂ ಉಸಿರಲ್ಲಿ ಉಸಿರಾಗಿ ಬೆರೆತಿದೆ. ಇಷ್ಟೆಲ್ಲಾ ಇಷ್ಟವಾಗಿರುವ ನೀನು ಸೌಜನ್ಯಕ್ಕಾದರೂ ಒಂದು ಮಾತು ತಿಳಿಸದೆ ನನ್ನನ್ನು ತೊರೆದು ಹೋಗಲು ಯಾಕೆ ಮನಸ್ಸು ಮಾಡಿದೆ ಎಂದೇ ತಿಳಿಯುತ್ತಿಲ್ಲ. ಕೇಳಿದರೂ ಕಾರಣ ತಿಳಿಸದೆ ಏಕೆ ಮೌನವಾಗಿರುವೆ?
ಮಾತಾಡು, ಹೀಗೇಕೆ ನನ್ನನ್ನು ನಡು ನೀರಿನಲ್ಲಿ ಕೈಬಿಟ್ಟೆ? ಅರ್ಧ ದಾರಿಯಲ್ಲಿ ನನ್ನನ್ನು ಏಕಾಂಗಿಯಾಗಿಸಿ ಹೊರಟು ನಿಂತಿರುವೆ ಎಲ್ಲಿಗೆ? ಅದೂ ಕಾರಣಗಳನ್ನು ಹೇಳದೆ? ದಯವಿಟ್ಟು ನನ್ನ ತಪ್ಪೇನೆಂದು ತಿಳಿಸುವೆಯಾ? ಮುಂದೆ ನೀನು ಸಿಕ್ಕಾಗ ಆ ತಪ್ಪನ್ನು ನಾನು ಮತ್ತೆ ಮಾಡಬಾರದಲ್ಲಾ… ಅದಕ್ಕೆ ಕೇಳುತ್ತಿರುವೆ.
ಎಂದೆಂದೂ ನಿನ್ನವಳೇ ಅಂದುಕೊಂಡಿರುವ-
ನಾಗರತ್ನ ಮತ್ತಿಘಟ್ಟ